‘ವೀರಶೈವ-ಲಿಂಗಾಯತ’ ವಿವಾದ : ಆಂತರಿಕ ಚರ್ಚೆಗೆ ಮತ್ತೆ ದಿಂಗಾಲೇಶ್ವರಶ್ರೀಗೆ ಆಹ್ವಾನಿಸಿದ mlc ಹೊರಟ್ಟಿ!
ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ನಾಯಕ ಬಸವರಾಜ ಹೊರಟ್ಟಿ ಅವರು ಸತ್ಯ ದರ್ಶನ ಹೆಸರಿನಲ್ಲಿ ವೀರಶೈವ – ಲಿಂಗಾಯತ ಕುರಿತ ಚರ್ಚಾ ಸಭೆ ನಡೆಸಲು ಪಂಥಾಹ್ವಾನ ನೀಡಿದ್ದರು. ಗದಗ ಬಾಲೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರು ಸಹ ಸತ್ಯ ದರ್ಶನ ಸಭೆಗೆ ಸಜ್ಜಾಗಿದ್ದರು. ಆದರೆ, ಇಂದು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ನಡೆಯಬೇಕಿದ್ದ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು ಸಭೆ ರದ್ದಾಗಿದೆ. ಹೀಗಾಗಿ, ಇಂದು ಸುದ್ದಿಗೋಷ್ಠಿ ನಡೆಸಿದ ಬಸವರಾಜ ಹೊರಟ್ಟಿ ಆಂತರಿಕ ಸಭೆಗೆ ಮತ್ತೊಮ್ಮೆ ದಿಂಗಾಲೇಶ್ವರ ಶ್ರೀಗಳನ್ನು ಆಹ್ವಾನಿಸಿದ್ದಾರೆ.
ಜನೇವರಿ 28, 29, 31ರಂದು ಆಂತರಿಕ ಚರ್ಚಾ ಸಭೆಗೆ ನಾವು ಸಿದ್ಧರಿದ್ದೇವೆ. ಬೆಳಗಾವಿಯ ನಾಗನೂರು ಮಠದಲ್ಲಿ ಆಂತರಿಕ ಸಭೆ ಆಯೋಜಿಸಲಾಗುವುದು. ದಿಂಗಾಲೇಶ್ವರ ಸ್ವಾಮೀಜಿ ಈ ಮೂರು ದಿನಗಳ ಪೈಕಿ ಯಾವ ದಿನ ಹೇಳುತ್ತಾರೋ ಆ ದಿನದಂದು ಆಂತರಿಕ ಸಭೆಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಇಂದು ಲಿಂಗಾಯತ ಮುಖಂಡರ ಸಭೆ ನಡೆಸಿದ ಬಳಿಕ ಹೊರಟ್ಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸೌಹಾರ್ಧಯುತ ಆಂತರಿಕ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.