ಕರ್ನಾಟಕಕ್ಕೆ ಕಾಲಿಡಲು ಶಿವಸೇನೆ ಸ್ಕೆಚ್ : MLC ಯತ್ನಾಳಗೆ ಗಾಳ?
ಶಿವಸೇನೆ ಸೇರ್ತಾರಾ ಬಸನಗೌಡ ಪಾಟೀಲ್ ಯತ್ನಾಳ್?
ಬೆಳಗಾವಿ: ಮಹಾರಾಷ್ಟ್ರದ ಶಿವಸೇನೆ ಪಕ್ಷವನ್ನು ಕರ್ನಾಟಕಕ್ಕೂ ವಿಸ್ತರಿಸಲು ಶಿವಸೇನೆಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ, ಹಾಲಿ ವಿಜಯಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪಕ್ಷೇತರ ವಿಧಾನಪರಿಷತ್ ಸದಸ್ಯರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಶಿವಸೇನೆಗೆ ಸೆಳೆಯಲು ಸೇನೆಯ ಮುಖಂಡರು ಪ್ಲಾನ್ ಮಾಡಿದ್ದಾರೆನ್ನಲಾಗಿದೆ. ಹೀಗಾಗಿ, ಬೆಳಗಾವಿಯ ಖಾಸಗಿ ಹೋಟೆಲೊಂದರಲ್ಲಿ ಶಿವಸೇನೆಯ ಕೆಲ ಮುಖಂಡರು ಬಸನಗೌಡ ಪಾಟೀಲರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಬಸನಗೌಡ ಪಾಟೀಲರು ಬಿಜೆಪಿ ಸೇರಲು ಬಯಸಿದ್ದರಾದರೂ ಬಿಜೆಪಿಯಲ್ಲಿ ಕೆಲ ಮುಖಂಡರ ವಿರೋಧ ಹಿನ್ನೆಲೆಯಲ್ಲಿ ಸದ್ಯ ಪಾಟೀಲರು ಪಕ್ಷೇತರರಾಗಿಯೇ ಉಳಿದಿದ್ದಾರೆ. ಹೀಗಾಗಿ, ಹಿಂದುತ್ವ ಪ್ರತಿಪಾದಿಸುವ ಬಸನಗೌಡ ಪಾಟೀಲರನ್ನು ಶಿವಸೇನೆಗೆ ಸೆಳೆದು ರಾಜ್ಯದ ನಾಯಕತ್ವ ವಹಿಸುವುದು. ಆ ಮೂಲಕ ಕರ್ನಾಟಕದಲ್ಲೂ ಶಿವಸೇನೆ ಕಟ್ಟುವುದು ಪಕ್ಷದ ಮುಖಂಡರ ಪ್ಲಾನ್ ಆಗಿದೆ. ಶಿವಸೇನೆ ಮುಖಂಡರು ಅಂದುಕೊಂಡಂತೆ ಆದರೆ ಡಿಸೆಂಬರ್ ಕೊನೆ ವಾರದಲ್ಲಿ ಪಾಟೀಲರು ರಾಜ್ಯದಲ್ಲಿ ಶಿವಸೇನೆಯ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.