ಕರ್ನಾಟಕದಲ್ಲಿ ಮೋದಿ ಖೇಲ್ ಶುರು: ಡಿಕೆಶಿ ಆಯ್ತು next ಯಾರು ಗೊತ್ತಾ?
ಈಗಾಗಲೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ವಾತಾವರಣ ಮೂಡಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ತನ್ನದೇ ಆದ ರಾಜಕಾರಣದಲ್ಲಿ ತೊಡಗಿವೆ. ಇದೇ ವೇಳೆ ಕರ್ನಾಟಕ ಸರ್ಕಾರದ ಪವರ್ ಫುಲ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ಐಟಿ ರೇಡ್ ನಡೆದಿದೆ. ಕೋಟ್ಯಾಂತರ ರೂಪಾಯಿ ನಗದು, ಚಿನ್ನ ಸೇರಿದಂತೆ ಆದಾಯ ಮೀರಿ ಆಸ್ತಿಗಳಿಕೆಯ ದಾಖಲೆಗಳನ್ನೂ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ರೆಸಾರ್ಟ್ ನಲ್ಲಿ ಗುಜರಾತಿನ ಕೈ ಶಾಸಕರಿಗೆ ರಾಜಾತಿಥ್ಯ ನೀಡುತ್ತ ಕರ್ನಾಟಕದ ರಾಜನಾಗುವ ಕನಸು ಕಾಣುತ್ತಿದ್ದ ಡಿಕೆಶಿ ಊಹಿಸದ ಶಾಕ್ ಗೆ ಒಳಗಾಗಿದ್ದಾರೆ. ಒಂದು ಕಡೆ ಕೇಂದ್ರ ಬಿಜೆಪಿ ಸರ್ಕಾರ ಡಿಕೆಶಿ ಹಣೆಯಲು ಮುಂದಾಗಿದೆ. ಮತ್ತೊಂದು ಕಡೆ ಕೆಲ ಸ್ವಪಕ್ಷೀಯರೇ ಆಗಿದ್ದೆಲ್ಲಾ ಒಳ್ಳೆಯದಕ್ಕೆ ಎಂದು ಒಳಗೊಳಗೆ ಸಂಭ್ರಮಿಸುತ್ತಿದ್ದಾರೆ.
ಆದರೆ, ಬಿಜೆಪಿ ಮಾತ್ರ ಇದರ ಹಿಂದೆ ರಾಜಕೀಯ ಕೈವಾಡವಿಲ್ಲ. ಬದಲಾಗಿ ಅಕ್ರಮ ಸಂಪಾದನೆಯ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಹೇಳುತ್ತಿದೆ. ಕಾಂಗ್ರೆಸ್ ನಾಯಕರು ಇದು ಬಿಜೆಪಿ ಕುತಂತ್ರ ಎಂದು ಆರೋಪ ಮಾಡುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಸಚಿವ ಡಿಕೆಶಿ ಮತ್ತು ಅವರ ಆಪ್ತವಲಯ.
ಇನ್ನು ಕೆಲ ದಿನಗಳ ಹಿಂದಷ್ಟೇ ಕೆಪಿಸಿಸಿ ಅದ್ಯಕ್ಷರ ಆಯ್ಕೆ ವಿಚಾರದ ಚರ್ಚೆ ನಡೆಯುವ ವೇಳೆ ಸಚಿವರಾದ ಡಿಕೆಶಿ, ಎಂ.ಬಿ.ಪಾಟೀಲ್ ಮತ್ತಿತರರ ಹೆಸರು ಅದ್ಯಕ್ಷ ಹುದ್ದೆಗೆ ಕೇಳಿಬಂದಿತ್ತು. ಆಗ ಸಚಿವ ಎಂ.ಬಿ.ಪಾಟೀಲ್ ಮನೆ ಮೇಲೆ ಐಟಿ ಅಥವಾ ಇತರೆ ತನಿಖಾ ಸಂಸ್ಥೆಗಳಿಂದ ರೇಡ್ ನಡೆಯುತ್ತದೆಂಬ ವದಂತಿ ಹಬ್ಬಿತ್ತು. ಖುದ್ದು ಸಚಿವರೇ ಸಿಎಂ ಸಿದ್ಧರಾಮಯ್ಯಗೆ ಈ ಬಗ್ಗೆ ಹೇಳಿ ರಕ್ಷಿಸುವಂತೆ ಕೋರಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿರುವ ಕೇಂದ್ರ ಸರ್ಕಾರ ಐಟಿ ಅಧಿಕಾರಿಗಳ ಮೂಲಕ ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಮಟ್ಟ ಹಾಕಲು ಮುಂದಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ ಸಚಿವರ ಮನೆ ಮೇಲೂ ದಾಳಿ ನಡೆಯುವ ಸಂಭವವಿದೆ ಎನ್ನಲಾಗುತ್ತಿದೆ. ಮೈಸೂರು ಮತ್ತು ಬೆಂಗಳೂರಿನ ಕೆಲ ಸಚಿವರು, ಶಾಸಕರ ಹೆಸರು ಕೇಳಿಬರುತ್ತಿದೆ.
ಸಚಿವರಾದ ಮಹಾದೇವಪ್ಪ, ಕೆ.ಜೆ.ಜಾರ್ಜ್, ಎಮ್.ಬಿ.ಪಾಟೀಲ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗುಡುಗುತ್ತಿರುವ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಸಚಿವ ಪ್ರಿಯಾಂಕ ಖರ್ಗೆ ಅವರ ಮನೆ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಆ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ನೆರವಾಗುವ ಮೂಲ ಪಿಲ್ಲರ್ ಗಳನ್ನೇ ಅಲುಗಾಡಿಸುವುದು. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ಕರ್ನಾಟಕದಲ್ಲಿ ಮತ್ತೆ ಕಮಲ ಅರಳುವಂತೆ ಮಾಡಲು ಮೋದಿ-ಅಮಿತ್ ಶಾ ಜೋಡಿ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ.
ಕಳೆದ ಚುನಾವಣೆ ವೇಳೆ ತನಿಖಾ ಸಂಸ್ಥೆಗಳ ಮೂಲಕವೇ ಬಿಜೆಪಿಯ ಪ್ರಭಾವಿ ನಾಯಕರನ್ನು ಮಣಿಸಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ಈಗ ಬಿಜೆಪಿ ನಾಯಕರು ಕಾಂಗ್ರೆಸ್ಸಿಗೆ ತಿರುಮಂತ್ರ ಹೇಳುತ್ತಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಸಹಜ ಚರ್ಚೆಗೆ ಗ್ರಾಸವಾಗಿದೆ. ಏನೇ ಆಗಲಿ ಅಧಿಕಾರಿಗಳ ಮೂಲಕ ಎಲ್ಲಾ ಪಕ್ಷದವರ ಅಕ್ರಮ ಬಯಲಾಗಲಿ ಎಂಬುದಷ್ಟೇ ನಾಗರಿಕರ ಆಶಯವಾಗಿದೆ. ಜನಾಭಿಪ್ರಾಯವನ್ನು ಕೇಳಿದರೆ ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದ ಜನ ಬೇಸತ್ತಿರೋದು ಮಾತ್ರ ಸುಳ್ಳಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
-ಸಂ