ಪ್ರಮುಖ ಸುದ್ದಿ
ಈಶಾನ್ಯ ರಾಜ್ಯದಲ್ಲಿ ಕೇಸರಿ ಗೆಲುವಿನ ನಾಗಾಲೋಟ : ವಾಸ್ತುಶಾಸ್ತ್ರ ಹೇಳಿದ ಪ್ರಧಾನಿ ಮೋದಿ
ದೆಹಲಿ : ಗೃಹ ನಿರ್ಮಾಣದ ಸಮಯದಲ್ಲಿ ವಾಸ್ತು ಶಾಸ್ತ್ರ ನೋಡುವವರು ನಿವೇಶನದ ಈಶಾನ್ಯದ ಸ್ಥಳವನ್ನು ಕೇಂದ್ರೀಕರಿಸಿರುತ್ತಾರೆ. ಈಶಾನ್ಯದ ಸ್ಥಳವೊಂದು ಸರಿಯಾದ ಕ್ರಮದಲ್ಲಿ ಇದ್ದರೆ ಸಾಕು ಎಲ್ಲವೂ ಸರಿ ಆಗುತ್ತದೆ. ನಾನು ಗೃಹ ನಿರ್ಮಾಣ ಮಾಡಿಲ್ಲ. ನನಗೆ ಅಷ್ಟಾಗಿ ಅದರ ಬಗ್ಗೆ ಅನುಭವ ಇಲ್ಲ. ಆದರೆ, ವಾಸ್ತು ಶಾಸ್ತ್ರಿ ಮೊದಲು ನೋಡುವುದೇ ಈಶಾನ್ಯದ ದಿಕ್ಕನ್ನು ಎಂಬುದು ಗೊತ್ತು. ನನ್ನ ಈ ಹೇಳಿಕೆ ವಿರೋಧಿಗಳಿಗೆ ವಸ್ತು ಆಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೂರು ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ನಗರದ ಬಿಜೆಪಿಯ ನೂತನ ಕಚೇರಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಅವರು ಈಗ ಬಿಜೆಪಿ ಭಾರತದ ಈಶಾನ್ಯ ರಾಜ್ಯದಲ್ಲೂ ಜಯಭೇರಿ ಭಾರಿಸಿದೆ. ಇನ್ನು ಎಲ್ಲವೂ ಸರಿ ಆಗಲಿದೆ ಎಂದು ಹೇಳುವ ಮೂಲಕ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಗೆಲುವನ್ನು ವಾಸ್ತು ಜೊತೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಶ ಅಭಿವೃದ್ಧಿಯ ವಿಶ್ವಾಸ ವ್ಯಕ್ತಪಡಿಸಿದರು.