ನವಭಾರತದ ಪರಿಕಲ್ಪನೆಗೆ ಪೂರಕವಾದ ಜನಪರ ಬಜೆಟ್ – ನರೇಂದ್ರ ಮೋದಿ
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ ಬಜೆಟ್ 21ನೇ ಶತಮಾನದ ನವಭಾರತದ ಪರಿಕಲ್ಪನೆಗೆ ಪೂರಕವಾಗಿದೆ. ದೇಶದ ಎಲ್ಲಾ ವರ್ಗದವರಿಗೂ ಲಾಭದಾಯಕವಾಗಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಅರುಣ್ ಜೇಟ್ಲಿ ಬಜೆಟ್ ಮಂಡನೆ ಬಳಿಕ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ವರ್ಗದ ಜನರ ಆಶಯ ಮತ್ತು ಅಪೇಕ್ಷೆಗಳಿಗೆ ಪೂರಕವಾಗಿ ಬಜೆಟ್ ಮಂಡಿಸಲಾಗಿದೆ. ನಮ್ಮ ಬಜೆಟ್ ರೈತ ಮಿತ್ರ, ಜನ ಸಾಮಾನ್ಯರ ಮಿತ್ರ, ವ್ಯವಹಾರಸ್ಥರ ಮಿತ್ರ ಬಜೆಟ್ ಆಗಿದ್ದು ಅಭಿವೃದ್ಧಿಪರವಾದ ಜನಪರ ಬಜೆಟ್ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
21ನೇ ಶತಮಾನದ ನವಭಾರತದ ಪರಿಕಲ್ಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಆರೋಗ್ಯ ಸುರಕ್ಷತೆಯತ್ತ ದೃಢವಾದ ಹೆಜ್ಜೆಯನ್ನಿಟ್ಟಿದ್ದೇವೆ. ಕೃಷಿ ಅಭಿವೃದ್ಧಿಗಾಗಿ, ರೈತರ ಉತ್ಪನ್ನಗಳಿಗಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ, ರೈತ, ದಲಿತ, ಪೀಡಿತ, ಶೋಷಿತ ಮತ್ತು ವಂಚಿತರಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ.
ಯುವಕರಿಂದ ಹಿಡಿದು ವಯೋ ವೃದ್ಧರವರೆಗೆ, ಗ್ರಾಮೀಣ ಭಾರತದಿಂದ ಹಿಡಿದು ಆಯುಷ್ಮಾನ್ ಭಾರತದವರೆಗೆ, ಡಿಜಿಟಲ್ ಇಂಡಿಯಾದಿಂದ ಹಿಡಿದು ಸ್ಟಾರ್ಟ್ ಅಪ್ ಇಂಡಿಯಾವರೆಗೆ ಎಲ್ಲವನ್ನೂ ಅಳೆದು ತೂಗಿ ಬಜೆಟ್ ಮಂಡಿಸಲಾಗಿದೆ. ಕೋಟ್ಯಾಂತರ ಭಾರತೀಯರ ಆಶಯಗಳನ್ನು ಈಡೇರಿಸುವ ಆಶಾದಾಯಕ ಬಜೆಟ್ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.