ಪ್ರಮುಖ ಸುದ್ದಿ

ದಶ ದಿಕ್ಕುಗಳಲ್ಲಿ ಮೋದಿ ಮಂತ್ರ : ಕಾಂಗ್ರೆಸ್ಸಿಗೆ ಸಿಕ್ಕಿತು ‘ಮಹದಾಯಿ ತಂತ್ರ’

-ಮಲ್ಲಿಕಾರ್ಜುನ ಮುದನೂರ್

ಬೆಂಗಳೂರು: ನವ ಕರ್ನಾಟಕ ಪರಿವರ್ತನಾ ಯಾತ್ರೆ ಆರಂಭದ ಸಂದರ್ಭದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಕಾರಣ ಸಮಾವೇಶ ಆಯೋಜಿಸಿದ್ದ ಮೈದಾನ ಖಾಲಿ ಖಾಲಿಯಾಗಿತ್ತು. ಅರ್ಧಕ್ಕರ್ಧ ಕುರ್ಚಿಗಳು ಖಾಲಿ ಉಳಿದಿದ್ದವು. ಹೀಗಾಗಿ, ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲು ಬೆಂಗಳೂರಿಗೆ ಬಂದಿದ್ದ ಬಿಜೆಪಿ ರಾಷ್ಟ್ರದ್ಯಕ್ಷ ಅಮಿತ್ ಶಾ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿ ಪರಿವರ್ತನಾ ಯಾತ್ರೆಯ ಆರಂಭದಲ್ಲೇ ವಿಘ್ನವಾಗಿತ್ತು.

ಬೈಕ್ ಯಾತ್ರೆ ಮೂಲಕ ಜನ ಬೆಂಗಳೂರು ನಗರ ಪ್ರವೇಶಿಸಿದ್ದು ಟ್ರಾಫಿಕ್ ಸಮಸ್ಯೆಯಿಂದಾಗಿ ಸಭಾ ಸ್ಥಳಕ್ಕೆ ಸೇರುವುದು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಪೊಲೀಸರ ಮೂಲಕ ಬಿಜೆಪಿ ಕಾರ್ಯಕರ್ತರು ಸಭೆಗೆ ಬಾರದಂತೆ ಡೈವರ್ಟ್ ಮಾಡಿದ್ದಾರೆಂದು ಬಿಜೆಪಿ ನಾಯಕರು ತೇಪೆ ಸಾರಿಸಿದ್ದರು. ಬಳಿಕ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಪಾಲ್ಗೊಂಡಿದ್ದು ಸಮಾವೇಶ ಯಶಸ್ವಿಯಾಗಿತ್ತು. ಹೀಗಾಗಿ, ಕೇಂದ್ರ ನಾಯಕರು ಕೊಂಚ ಸಮಾಧಾನಗೊಂಡಿದ್ದರು.

ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಬಿಜೆಪಿ ನಾಯಕರ ಪ್ಲಾನ್ ನಂತೆ ಸಮಾವೇಶ ಯಶಸ್ವಿಯಾಗಿದೆ. ಎರಡು ಲಕ್ಷಕ್ಕೂ ಅಧಿಕ ಚೇರ್ ಗಳು ತುಂಬಿದ್ದು ಜನ ಸಾಗರವೇ ಸಮಾವೇಶದಲ್ಲಿ ಪಾಲ್ಗೊಂಡಿದೆ. ಅಲ್ಲದೆ ದಶದಿಕ್ಕುಗಳಿಂದಲೂ ಮೋದಿ ಮೋದಿ ಮಂತ್ರ ಮೊಳಗಿದೆ. ಪರಿಣಾಮ ಪರಿವರ್ತನಾ ಯಾತ್ರೆಯಿಂದ ಹೊರ ಬಂದಿರುವ ಬಿಜೆಪಿ ನಾಯಕರಿಗೀಗ ನವ ಸ್ಪೂರ್ತಿ ತುಂಬಿದ್ದು ಮತ್ತಷ್ಟು ಶಕ್ತಿಶಾಲಿಯಾಗಿ ಕರ್ನಾಟಕ ಚುನಾವಣೆಗೆ ಹೊರಡಲು ಅಣಯಾಗಿದ್ದಾರೆಂಬುದು ರಾಜಕೀಯ ವಿಶ್ಲೇಷಕರ ವಾದವಾಗಿದೆ.

ಸಮಾವೇಶದಲ್ಲಿ ಮೋದಿ ಸಮ್ಮುಖದಲ್ಲಿ ರಾಜ್ಯ ನಾಯಕರೆಲ್ಲರೂ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಗುಣಗಾನ ಮಾಡಿದ್ದಾರೆ. ಪರಿವರ್ತನಾ ಯಾತ್ರೆಯ ಯಶಸ್ವಿನ ರೂವಾರಿಗಳು ಎಂದೆಲ್ಲಾ ಹೊಗಳಿದ್ದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದೇ ಸಂಘಟನಾ ಬಲದೊಂದಿಗೆ ಕೇಸರಿ ಪಡೆ ಚುನಾವಣೆ ಎದುರಿಸಿದರೆ ಕೈಪಡೆಯಿಂದ ಕಮಲ ಪಾಳೇಯವನ್ನು ಕಟ್ಟಿ ಹಾಕುವುದು ಕಷ್ಟದ ಕೆಲಸವಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಅಮಿತ್ ಶಾ ಅವರಂತೆಯೇ ಕೇಂದ್ರ ಸರ್ಕಾರ ನೀಡಿದ ಅನುದಾನದ ಲೆಕ್ಕ ಕೇಳಿದ್ದಾರೆ. ಕಾಂಗ್ರೆಸ್ ಈಗ ಎಕ್ಸಿಟ್ ಗೇಟಿನಲ್ಲಿದೆ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಹೇಳಿಕೊಂಡರು. ನವ ಕರ್ನಾಟಕ, ಪರಿವರ್ತನೆಗಾಗಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ. ಆದರೆ, ಮಹದಾಯಿ ವಿವಾದ ಬಗೆಹರಿಸುವ ವಿಷಯ ಮಾತ್ರ ಪ್ರಸ್ತಾಪ ಮಾಡಲೇ ಇಲ್ಲ.

ರಾಜ್ಯಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ,  ಮಹದಾಯಿ ವಿಚಾರವನ್ನು ಪ್ರಸ್ತಾಪಿಸದೇ ಇರುವುದು ಕನ್ನಡಪರ ಹೋರಾಟಗಾರರು, ಮಹದಾಯಿ ಹೋರಾಟಗಾರರನ್ನು ಕೆರಳಿಸಿದೆ. ಕಾಂಗ್ರೆಸ್ ನಾಯಕರೂ ಸಹ ಇದೇ ವಿಚಾರವನ್ನು ದಾಳವಾಗಿಸಿಕೊಂಡು ಕೇಸರಿ ಪಡೆ ವಿರುದ್ಧ ವಾಗ್ಬಾಣ ಹೂಡಿದ್ದಾರೆ. ಆದರೆ, ಮಹದಾಯಿ ವಿಚಾರ ಕಾಂಗ್ರೆಸ್ಸಿಗೆ ಎಷ್ಟರ ಮಟ್ಟಿಗೆ ಲಾಭವಾಗಲಿದೆ. ಕಮಲಪಡೆಗೆ ಯಾವ ರೀತಿ ನಷ್ಟ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button