ಪ್ರಮುಖ ಸುದ್ದಿ

ಕೋತಿ ಕಿಕ್‍ – ಮಾಳಿಗೆಯಿಂದ ಕೆಳಗೆ ಬಿದ್ದ ಯುವಕ

ಕೋತಿ ಕಾಟ ಸಗರ ಗ್ರಾಮಸ್ಥರಲ್ಲಿ ಆತಂಕ

ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಕಳೆದ ವಾರದಿಂದ ಕೋತಿಯೊಂದು ತನ್ನ ಕಪಿ ಚೇಸ್ಟೆ ನಡೆಸಿದ್ದು, ಹಲವರು ಗಾಯಗೊಂಡ ಘಟನೆಗಳು ಜರುಗಿವೆ. ಶುಕ್ರವಾರ ಬೆಳಗ್ಗೆ ಮನೆಯ ಮಾಳಿಗೆ ಮೇಲೆ ಒಣಗಲು ಹಾಕಿದ್ದ ಗೋದಿಯನ್ನು ತರಲು ಟೆರೇಸ್ ಮೇಲೆ ಹೋಗಿದ್ದ ಯುವಕನೊಬ್ಬನಿಗೆ ಹಿಂದಿನಿಂದ ಬಂದ ಕೋತಿ ಕಿಕ್ (ಒದೆ) ಮಾಡಿದ್ದು, ಹೊಡೆತಕ್ಕೆ ಮಾಳಿಗೆಯಿಂದ ಕೆಳಗಡೆ ಬಿದ್ದ ಯುವಕ ಎಡಗೈಯ ಮೂಳೆ ಮುರಿದಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೋತಿಯಿಂದ ಒದೆ ತಿಂದ ಗ್ರಾಮದ ಯುವಕ ಭೀಮಾಶಂಕರ ನಗರದ ಅಪೇಕ್ಸ್ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಾಜು 20 ಫೀಟ್ ಎತ್ತರದಿಂದ ಕೆಳಗಡೆ ಬಿದ್ದಿರುವ ಕಾರಣ ಈತನ ಎಡಗೈಯ ಮೂಳೆ ಫ್ಯಾಕ್ಚರ್‍ಗೊಂಡಿದೆ ಎನ್ನಲಾಗಿದೆ. ಈ ಕುರಿತು ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಗ್ರಾಮದಲ್ಲಿ ಕಳೆದ ವಾರದಿಂದ ಬೀಡು ಬಿಟ್ಟಿದ್ದ ಕೋತಿ, ಹಲವು ಆಟಾಟೋಪಗಳನ್ನು ನಡೆಸುತ್ತಿದೆ. ಮಕ್ಕಳು ಮತ್ತು ವೃದ್ಧರನ್ನು ಪರಿತಪಿಸುವಂತೆ ಮಾಡಿದೆ. ಮಾಳಿಗೆ ಮೇಲೆ ಆಟವಾಡುತ್ತಿದ್ದ ಮಕ್ಕಳಲ್ಲಿ ಆತಂಕ ಉಂಟುಮಾಡಿದೆ. ಕೆಲವರ ಮೇಲೆ ಹಾರಿ ಗಾಯಗೊಳಿಸಿದೆ ಘಟನೆಗಳು ಜರುಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಕೋತಿಯನ್ನು ಬಂಧಿಸಿ, ಕಾಡು ಪ್ರದೇಶದಲ್ಲಿ ಬಿಟ್ಟು ಬರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸದ್ಯ ಜೀವ ಉಳಿದಿದೆ ಸಾಕು..!

ಮಾಳಿಗೆ ಮೇಲೆ ಹಾಕಿದ್ದ ಗೋದಿ ತರಲು ಹೋಗಿದ್ದೆ, ಕೆಳಗಡೆ ಬಗ್ಗಿ ಗೋದಿಯನ್ನು ತೆಗೆಯುತ್ತಿದ್ದಂತೆ, ಹಿಂದಿನಿಂದ ಬಂದ ಕೋತಿ ಥಟ್ಟನೆ ಒದೆಯಿತು. ಆಗ ಮೇಲಿನಿಂದ ಕೆಳಗಡೆ ಬಿದ್ದ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಡಗೈಯ ಮೂಳೆ ಮುರಿದಿದೆ. ಬಲಗೈಯಿಗೂ ಪೆಟ್ಟು ಬಿದ್ದಿದೆ. ಇತರಡೆ ಗಾಯಗಳಾಗಿವೆ. ಜೀವ ಉಳಿದಿದ್ದೆ ಸಮಧಾನ ತಂದಿದೆ ಎಂದು ಕೈಮುರಿದು ಕೊಂಡ ಭೀಮಾಶಂಕರ ತಿಳಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button