ಏಳುಸುತ್ತಿನ ಕೋಟೆಯ ಮಂಕಿಮ್ಯಾನ್ ಜ್ಯೋತಿರಾಜನ ಜೀವನ ಕಥನ : ಸರಣಿ ಶುರು
-ಬಸವರಾಜ ಮುದನೂರ್
ಚಿತ್ರದುರ್ಗದ ಏಳುಸುತ್ತಿನ ಕೋಟೆ ಅಂದಾಕ್ಷಣ ವೀರ ಮದಕರಿ ನಾಯಕ, ವೀರ ವನಿತೆ ಒನಕೆ ಓಬವ್ವ ನೆನಪಾಗ್ತಾರೆ. ಹಾಗೇನೆ ಕಳೆದ ಐದಾರು ವರ್ಷದಿಂದ ಕೋಟೆ ಕಡೆ ಬಂದವ್ರಿಗೆ ಮಂಕಿಮ್ಯಾನ್, ಸ್ಪೈಡರ್ ಮ್ಯಾನ್, ಕೋತಿರಾಜ ಅಂತಲೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಕೂಡ ನೆನಪಾಗದೆ ಇರದು. ಕಾರಣ ಅವನ ಸಹಾಸ ಪ್ರದರ್ಶನ ಎಂಥವರನ್ನೂ ರೋಮಾಂಚನಗೊಳಿಸುತ್ತದೆ. ಸಹಾಸದ ಮೂಲಕ ರಾಷ್ಟ್ರೀಯ, ಅಂತರಾಷ್ಟ್ತೀಯ ಮಟ್ಟದಲ್ಲಿ ಹೆಸರು ಮಾಡಿರುವ ಜ್ಯೋತಿರಾಜ್ ನ ಚರಿತ್ರೆ ಕೂಡ ವೇರಿ ಇಂಟರೆಸ್ಟಿಂಗ್.
ತಮಿಳುನಾಡು ಮೂಲದ ಜ್ಯೋತಿರಾಜ್ ಹತ್ತನೇ ವಯಸ್ಸಿನಲ್ಲೇ ಮನೆ ಬಿಟ್ಟು ಓಡಿಬಂದು ಕರ್ನಾಟಕ ಸೇರಿದವನು. ಜೀವನದಿ ಜಿಗುಪ್ಸೆ ಆದಾಗ ಕೋಟೆಹತ್ತಿ ಆತ್ಮಹತ್ಯೆಗೆ ಯತ್ನಿಸಲು ಹೋಗಿ ಸಹಾಸ ಮೆರೆದವನು. ಕೋತಿಗಳೊಂದಿಗೆ ಕಾಂಪಿಟೇಷನ್ ಗೆ ಬೀಳುವ ಮೂಲಕ ರಾಕ್ಲೈಮಿಂಗ್ ಸಾಹಸಿಗನಾದವನು. ಅಷ್ಟೇ ಅಲ್ಲ, ಸಾಹಸ ಪ್ರಿಯ ಮಕ್ಕಳಿಗೂ ಟ್ರೇನಿಂಗ್ ನೀಡುವ ಮೂಲಕ ಮರಿಸೈನ್ಯವೊಂದನ್ನು ಕಟ್ಟಿದ್ದಾನೆ. ಆ ಪೈಕಿ ಕೆಲವ್ರು ದೇಶ ಕಾಯುವ ಸೈನ್ಯ ಸೇರಲು ಪ್ರೇರಣೆ ಆಗಿದ್ದಾನೆ. ಹೀಗೆ ಸಾಗುತ್ತೆ ಜ್ಯೋತಿರಾಜ್ ನ ಜೀವನ ಪಯಣ. ಕೇವಲ 30ರ ಪ್ರಾಯದ ಸಾಹಸಿಗನ ಸಾಧನೆ, ನೋವು-ನಲಿವು, ಪರಜನರ ಜೊತೆ ಬೆಳೆಸಿದ ಬಾಂಧವ್ಯ, ಗಳಿಸಿದ ಸ್ನೇಹ-ಪ್ರೀತಿ, ತಿರಸ್ಕರಿಸಿದ ಪ್ರೇಮ, ಹೀಗೆ ಅನೇಕ ಮಜಲುಗಳು, ಕುತೂಹಲಕಾರಿ ಘಟನೆಗಳು ಜ್ಯೋತಿರಾಜ್ ಜೀವನದಲ್ಲಿವೆ. ಅಂಥ ಪ್ರಮುಖಾಂಶಗಳ ಕುರಿತು ಜ್ಯೋತಿರಾಜ್ ಹೇಳಿದ್ದಕ್ಕೆ ಅಕ್ಷರ ರೂಪ ನೀಡುವ ಮೂಲಕ ಜ್ಯೋತಿರಾಜ್ ನ ಜೀವನ ಕಥನ ದಾಖಲಿಸುವ ಪುಟ್ಟ ಪ್ರಯತ್ನ ಇಲ್ಲಿದೆ.
ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಜ್ಯೋತಿರಾಜ್ ಅಲಿಯಾಸ್ ಮಂಕಿಮ್ಯಾನ್ ಅಸಲಿಗೆ ತಮಿಳುನಾಡು ಮೂಲದವನು. ತಮಿಳುನಾಡಿನ ತೇನಿ ಜಿಲ್ಲೆಯ ಆಂಡಿಪಟ್ಟಿ ತಾಲ್ಲೂಕಿನ ಕಾಮರಾಜಪುರಂ ಗ್ರಾಮದವನು. ಈಶ್ವರನ್ ಹಾಗೂ ಕುಂಜರಮ್ಮ ಎಂಬ ರೈತ ದಂಪತಿಯ 5ನೇ ಪುತ್ರ. ಆಗಷ್ಟ್ 15, 1988ರ ಸ್ವಾತಂತ್ರ್ಯೋತ್ಸವದ ದಿನ ಜನಿಸಿದ ಜ್ಯೋತಿರಾಜ್ ನಿಜಕ್ಕೂ ಕೋಟೆನಾಡಿನಲ್ಲಿ ಸ್ವತಂತ್ಯ ಹಕ್ಕಿಯಂತೆ ಹಾರಾಡುತ್ತಾನೆ. ಖ್ಯಾತಿಯ ಉತ್ತುಂಗ ಶಿಖರಕ್ಕೇರುತ್ತಾನೆಂದು ಅಂದು ಯಾರೂ ಕೂಡ ಊಹಿಸಿರಲಿಕ್ಕಿಲ್ಲ. ಕೃಷಿ ಕಾಯಕ ಮಾಡುತ್ತಿದ್ದ ತಂದೆ-ತಾಯಿ ಕಡುಬಡತನವನ್ನೇ ಹೊದ್ದುಕೊಂಡಿದ್ದು ಬೆಂಕಿಯ ಬದುಕಿನಲ್ಲಿ ಒಪ್ಪತ್ತಿನ ಜೀವನ ಸವೆಸುತ್ತಿದ್ದರು.
ಈಶ್ವರನ್-ಕುಂಜರಮ್ಮ ದಂಪತಿಗೆ ಒಟ್ಟು ಏಳು ಜನ ಮಕ್ಕಳಿದ್ದರು. ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಹಿರಿಯಣ್ಣ ಚಿನ್ನಕಾಳೈ, ಎರಡನೇ ಅಣ್ಣ ಮಚ್ಚಕಾಳೈ ಹಾಗೂ ಕೊನೆ ತಮ್ಮ ಶರವಲಿಂಗಂ ಕೃಷಿ ಕಾಯಕದಲ್ಲಿ ತೊಡಗಿದ್ರೆ, ನಾಲ್ಕನೇ ಅಣ್ಣ ಚಿನ್ನಕರೂಪಸ್ವಾಮಿ ಮಾತ್ರ ಅದೇಗೋ ಪಿಯುಸಿ ವರೆಗೆ ಓದಿಕೊಂಡಿದ್ದ. ಬಿಟ್ರೆ ಸಹೋದರಿಯರಾದ ಮಾರಿಯಮ್ಮ , ನಾಗವೇಣಿ ಹಾಗು ಜ್ಯೋತಿರಾಜ್ ಸೇರಿದಂತೆ ಯಾರೂ ಕೂಡ ಶಾಲೆಯ ಮೆಟ್ಟಿಲೂ ಸಹ ಹತ್ತಿರಲಿಲ್ಲ. ಪರಿಣಾಮ ಜ್ಯೋತಿರಾಜ್ ಊರಿನ ಧನ ಕಾಯುವ ಧನಗಾಹಿಯ ಕಾರ್ಯ ನಿರ್ವಹಿಸಬೇಕಿತ್ತು.
ಹತ್ತನೇ ವಯಸ್ಸಿನವರೆಗೆ ಧನಕಾಯುವ ಕೆಲಸ ಮಾಡಿದ ಜ್ಯೋತಿರಾಜ್ ಗೆ ಅದೊಂದು ದಿನ ಊರ ಹೊರಗಿನ ಅಡವಿಯಲ್ಲಿ ಗೋವುಗಳ ಮದ್ಯೆ ಕುಳಿತಾಗ ಅದೇನಾಯ್ತೋ ಗೊತ್ತಿಲ್ಲ. ಇದು ನನ್ನ ಕೆಲಸವಲ್ಲ ಅಂತ ಅನ್ನಿಸಿತ್ತು. ಗ್ರಾಮದಲ್ಲಿನ ಕೆಲ ಧನಕಾಯುವ ಮುದುಕರ ಜೀವನ ಚಿತ್ರಣ ನೆನಪಾಗಿ ನಾನೂ ಕೊನೆಯವರೆಗೂ ಇದೇ ಕಾಯಕ ಮಾಡಬೇಕಾದೀತು ಎಂಬ ಚಿಂತೆ ಶುರುವಾಯಿತು. ಬಡತನದ ಬೇಗೆಯಲ್ಲಿ ಬೇಯುವ ಬದಲು ಅದರಿಂದ ಹೊರಬರಬೇಕು. ಆ ಮೂಲಕ ನನ್ನಲಿ ಅಡಗಿರುವ ಶಕ್ತಿ ಹೊರ ಹಾಕಿ ಏನಾದ್ರೂ ಸಾಧಿಸಬೇಕೆಂಬ ಛಲ ಮೂಡಿತು. ತಡಮಾಡಲಿಲ್ಲ, ಒಂದೆರೆಡು ದಿನಗಳಲ್ಲೇ ಮನೆ ತೊರೆಯುವ ನಿರ್ಧಾರಕ್ಕೆ ಬಂದುಬಿಟ್ಟ. 1998ರ ವೇಳೆ ಅದೊಂದು ಶನಿವಾರದಂದು ದಾರಿ ತೋರು ಹನುಮ ಎಂದುಕೊಂಡು ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೊರ ನಡೆದೇಬಿಟ್ಟ.
ಕೈಯಲ್ಲಿ ಕಸುವಿತ್ತು ಬಿಟ್ಟರೆ ಕಿಸೆಯಲ್ಲಿ ಕಾಸಿರಲಿಲ್ಲ, ತಲೆಯಲ್ಲಿ ಪ್ರಬುದ್ಧತೆಯೂ ಇರಲಿಲ್ಲ. ಒಟ್ನಲ್ಲಿ ಏನೋ ಒಂದು ಸಾಧಿಸಬೇಕು. ಏನಾದರೂ ಸರಿಯೇ ಹೆಸರು ಮಾಡಬೇಕೆಂಬ ಛಲ ಮಾತ್ರ ದೃಢವಾಗಿತ್ತು. ಮನೆ ದಾಟುವಾಗ ಎಡವಿದ ಹೊಸ್ತಿಲಿಗೊಮ್ಮೆ ನಮಸ್ಕರಿಸಿ ಅಪ್ಪ-ಅಮ್ಮನ ಮಖ ಕಣ್ತುಂಬಿಕೊಂಡು ಮನೆಯಿಂದ ಹೊರಟುಬಿಡುತ್ತಾನೆ. ಕೇವಲ ಹತ್ತು ವರ್ಷದ ಪುಟ್ಟ ಪೋರ ತಾಯಿ ನೆನಪಾಗಿ ಕಣ್ಣೀರುಗರೆಯುತ್ತಾನೆ. ಮನೆಗೆ ಹಿಂದಿರುಗುವ ಯೋಚನೆ ಬರುತ್ತದೆ. ಆದ್ರೆ, ಮುಂದಿಟ್ಟ ಹೆಜ್ಜೆ ಹಿಂದಿಡ ಕೂಡದು ಎಂದುಕೊಂಡ ಜ್ಯೋತಿರಾಜ್ ಊರು ದಾಟಿಬಿಡುತ್ತಾನೆ. ಊರ ಹೊರಗಿನ ಆಂಜನೇಯನ ಗುಡಿಯ ಕಟ್ಟೆ ಮೇಲೆ ಸ್ವಲ್ಪ ಹೊತ್ತು ಕುಳಿತು ಆರಾಧ್ಯದೈವನಿಗೆ ಕೈಮುಗಿದು ಗೊತ್ತು ಗುರಿ ಇಲ್ಲದ ಕಾಲ್ನಡಿಗೆಯ ಪಯಣ ಮುಂದುವರೆಸುತ್ತಾನೆ.
ಕಾಮರಾಜಪುರಂ ನಿಂದ ಮುರ್ಕೋಡಯ್ ಗ್ರಾಮದವರೆಗೆ ನಡೆದು ಹೋಗುತ್ತಿದ್ದ ಏಕಾಂಗಿ ಬಾಲಕನಿಗೆ ಕುವೇಂದ್ರನ್ ಎಂಬ ಉದ್ಯಮಿ ಎದುರಾಗುತ್ತಾನೆ. ‘ಎತ್ತ ಹೋಗುತ್ತಿದ್ದೀಯಾ’ ಎಂದು ಮಾತನಾಡಿಸಿ ‘ಕರ್ನಾಟಕದಲ್ಲಿ ಕೆಲಸವಿದೆ ಬರ್ತೀಯಾ, ಅಲ್ಲಿ ಸಾಕಷ್ಟು ಜನ ನಮ್ಮ ತಮಿಳಿಗರಿದ್ದಾರೆ’ ಎಂದು ಹೇಳುತ್ತಾನೆ. ಒಪ್ಪಿದ ಬಾಲಕ ಕುವೇಂದ್ರನ ಜೊತೆ ಕರುನಾಡಿನತ್ತ ಹೊರಟು ಬಿಡುತ್ತಾನೆ…
ಮುಂದುವರೆಯುತ್ತದೆ…