ಗಣೇಶಪೇಟೆ ಪಾಕ್ ನಂತೆ ಕಾಣ್ತಿದೆ ಅಂದ ಮೌಲ್ವಿ ಮೇಲೆ ಕೇಸು ಬಿತ್ತು! ಪೊಲೀಸ್ ಕಮಿಷನರ್ ಹಾಗೂ ಮುತಾಲಿಕ್ ಹೇಳಿದ್ದೇನು?
ಹುಬ್ಬಳ್ಳಿ: ಈದ್ ಮಿಲಾದ ಹಬ್ಬದ ಪ್ರಯುಕ್ತ ನಗರದ ಗಣೇಶಪೇಟೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಗಣೇಶಪೇಟೆ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಪಾಕಿಸ್ತಾನ ನೋಡಲು ಅಲ್ಲಿಗೆ ಹೋಗಬೇಕಿಲ್ಲ. ಹುಬ್ಬಳ್ಳಿಯ ಗಣೇಶಪೇಟೆಯೇ ಪಾಕಿಸ್ತಾನದಂತೆ ಕಾಣುತ್ತಿದೆ. ನಮ್ಮ ಯುವಕರು ಒಗ್ಗಟ್ಟಾಗಿದ್ದರೆ ಸಾಕು ಯಾರಿಗೂ ತಲೆ ಬಾಗಬೇಕಿಲ್ಲ. ಎದೆಯುಬ್ಬಿಸಿ ನಡೆಯಬಹುದು ಎಂದಿದ್ದರು. ಮೌಲ್ವಿ ಮಾತನಾಡಿದ ಕಾರ್ಯಕ್ರಮದ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಆದರೆ ಪೊಲೀಸರು ಮಾತ್ರ ದೇಶದ್ರೋಹದ ಹೇಳಿಕೆಗೆ ತಡೆಯೊಡ್ಡಿರಲಿಲ್ಲ. ಪ್ರಕರಣವನ್ನೂ ದಾಖಲಿಸಿರಲಿಲ್ಲ. ಈ ಬಗ್ಗೆ ವಿನಯವಾಣಿ ನಿನ್ನೆ ಸಂಜೆಯೇ ವರದಿ ಪ್ರಕಟಿಸಿತ್ತು.
ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ನಿನ್ನೆಯಿಂದ ಮೌಲ್ವಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ ಪೊಲೀಸರು ಇಂದು ದೇಶದ್ರೋಹದ ಹೇಳಿಕೆ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿ ಶಾಂತಿ ಭಂಗಕ್ಕೆ ಯತ್ನಿಸಿದ ಆರೋಪದ ಮೇಲೆ ಕಲಂ 153ರ ಅಡಿಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಮೌಲ್ವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆ ನಡೆಸಿ ಸೂಕ್ತ ಕ್ರಮ – ಎಂ.ಎನ್.ನಾಗರಾಜ ಪೊಲೀಸ್ ಕಮಿಷನರ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ್ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಮೌಲ್ವಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಸರ್ಕಾರ ದೇಶದ್ರೋಹಿ ಮೌಲ್ವಿಯನ್ನು ರಕ್ಷಣೆ ಮಾಡುತ್ತಿದೆ – ಪ್ರಮೋದ ಮುತಾಲಿಕ್, ಶ್ರೀರಾಮಸೇನೆ ಸಂಸ್ಥಾಪಕ ಅದ್ಯಕ್ಷ
ಶ್ರೀರಾಮಸೇನೆಯ ಸಂಸ್ಥಾಪಕ ಅದ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿ ಪ್ರಚೋದನಾತ್ಮಕ ಹೇಳಿಕೆ ನೆಪದಲ್ಲಿ ಕಲಂ 150ರ ಅಡಿಯಲ್ಲಿ ನನ್ನ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಿಂದ ದೇಶದ್ರೋಹದ ಹೇಳಿಕೆ ನೀಡಿರುವ ಮೌಲ್ವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆ ಮೌಲ್ವಿ ನಮ್ಮ ನೆಲದಲ್ಲಿ ನಿಂತು ಪಾಕಿಸ್ತಾನದ ಬಗ್ಗೆ ಹೆಮ್ಮೆಯ ಮಾತನಾಡುವ ಮೂಲಕ ದೇಶದ್ರೋಹವೆಸಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿದ್ದವರು ಸಹ ಆತನ ಮಾತಿಗೆ ಚಪ್ಪಾಳೆ , ಕೇಕೆ ಹಾಕಿದ್ದಾರೆ. ಇಂಥ ಅನೇಕ ಮೌಲ್ವಿಗಳು ಈ ದೇಶದಲ್ಲಿದ್ದಾರೆ. ಅವರ ಹಕೀಕತ್ ಏನು, ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ. ಏನೆಲ್ಲಾ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಕೂಡಲೇ ದೇಶದ್ರೋಹಿ ಮೌಲ್ವಿಯನ್ನು ಬಂಧಿಸಬೇಕಿದೆ. ಅದು ಬಿಟ್ಟು ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರಿ ದೇಶದ್ರೋಹಿ ಮೌಲ್ವಿಗೆ ರಕ್ಷಣೆ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.