ಮುದನೂರ ಬಾವಿ ಪ್ರಕರಣಃ 11 ಜನ ಅಸ್ವಸ್ಥರ ಡಿಸ್ಚಾರ್ಜ್
ಹಣ್ಣು ಹಂಪಲು ನೀಡಿ ಬೀಳ್ಕೊಟ್ಟ ವೈದ್ಯರ ತಂಡ
ಸ್ವಗ್ರಾಮಕ್ಕೆ ತೆರಳಲು ಅಂಬ್ಯುಲೆನ್ಸ್ ವ್ಯವಸ್ಥೆ
ಯಾದಗಿರಿ, ಶಹಾಪುರಃ ಸುರಪುರ ತಾಲೂಕಾ ಮುದನೂರ ಗ್ರಾಮದ ಹೊರವಲಯದ ಬಾವಿಯಲ್ಲಿ ಕಿಡಿಗೇಡಿಗಳು ವಿಷ ಬೆರಸಿದ ನೀರು ಸೇವನೆಯಿಂದ ಬಳಲುತ್ತಿದ್ದ 16 ಜನರಲ್ಲಿ 11 ಜನರು ಗುಣಮುಖ ಹೊಂದಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಿಂದ ವೈದ್ಯರ ತಂಡ ಅವರಿಗೆ ಹಣ್ಣು ಹಂಪಲು ನೀಡಿ ಬೀಳ್ಕೊಟ್ಟರು.
ವಿಷ ಬೆರೆಸಿದ ನೀರು ಸೇವನೆಯಿಂದ ನಾಲ್ಕು ದಿನಗಳ ಕಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತಗ್ಗಳ್ಳಿ ಮತ್ತು ಶಖಾಪುರ ಗ್ರಾಮದ 16 ಜನರು ಚಿಕಿತ್ಸೆಗೆ ಸ್ಪಂಧಿಸಿದ್ದು, ಈ ಪೈಕಿ 11 ಜನರು ಸಂಪೂರ್ಣ ಗುಣಮುಖ ಹೊಂದಿರುವ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದ್ದಾರೆ.
ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 11 ಜನರನ್ನು ಸ್ವಗ್ರಾಮ ಶಖಾಪುರ ವರೆಗೆ ಅಂಬ್ಯುಲೆನ್ಸ್‍ನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಚಿಕಿತ್ಸೆ ಪಡೆದು ತಮ್ಮೂರಿಗೆ ಹೊರಟು ನಿಂತವರು ಜೀವ ಉಳಿಸಿದ ಎಲ್ಲಾ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೀರು ನಿತ್ಯ ಸೇವನೆ ಮಾಡಿದಂತೆ ಮಾಡಿದ್ದೇವೆ. ಕುಡ್ಯಾ ನೀರಾಗ ವಿಷ ಹಾಕುವ ಕಾಲ ಬಂದದ ಅಂತ ನಮ್ಗೇನ ಗೊತ್ತಾದ್ರಿ. ಪಾಪದೋರ ವಿಷ ಕಲಿಸಿ ಸಣ್ಣ ಮಕ್ಕಳು, ಮುದುಕರು ಹೈರಾಣ ಮಾಡಿದವು.
ಹೆಣ್ಣು ಮಗಳು ಜೀವ ತಿಂದ್ರು ಎಂದು ಶಖಾಪುರ ಗ್ರಾಮದ ನಾಗಮ್ಮ ಪತ್ರಕರ್ತರ ಮುಂದೆ ಅಳಲು ತೋಡಿಕೊಂಡಳು.
ಸಂಕ್ರಾಂತಿ ಹಬ್ಬ ಬೇರೆ ಬಂದಿದ್ದು, ನಾವೆಲ್ಲ ಆರಾಮವಾಗಿ ಹೊರಟಿರುವದು ಸಂತೋಷ ಆಗಿದೆ. ಇನ್ನುಳಿದವರು ಬೇಗನೆ ಗುಣಮುಖವಾಗಿ ಅವರವರ ಮನೆ ಸೇರಲಿ ಎಂದು ಮಹಿಳೆಯರು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ.ವೆಂಕಟೇಶ ಬೈರಾಮಡಗಿ, ಡಾ.ಜಗಧೀಶ ಉಪ್ಪಿನ್ ಮತ್ತು ಸಿಬ್ಬಂದಿ ವರ್ಗ ಇದ್ದರು.
16 ಜನರಲ್ಲಿ ತಾಯಮ್ಮ, ಮಲ್ಲಮ್ಮ, ಕಲ್ಲಮ್ಮ, ನಾಗಮ್ಮ, ಕಸ್ತೂರಿಬಾಯಿ, ಈರಮ್ಮ, ಬಸ್ಸಮ್ಮ, ಅಯ್ಯಮ್ಮ, ಕು.ಅಶ್ವಿನಿ, ಶಂಕ್ರಗೌಡ, ಈರಪ್ಪ ಈ 11 ಜನರು ಗುಣಮುಖ ಹೊಂದಿ ಮರಳಿ ಸ್ವಗ್ರಾಮಕ್ಕೆ ತೆರಳಿದರು.
ಇನ್ನೂ 5 ಜನರಾದ ಶಾಂತಮ್ಮ, ಸುರೇಶ, ಬನ್ನಮ್ಮ, ಪಂಪ್ ಆಪರೇಟರ್ ಮೌನೇಶ, ಹಳ್ಳೆಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ 11 ಜನರನ್ನು ಎರಡು ಅಂಬಯುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ತೆರಳಿದರು.
————————
11 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯಾವುದೇ ಆತಂಕ ಬೇಡ. ಇನ್ನುಳಿದವರು ಕೂಡಲೇ ಗುಣಮುಖ ಹೊಂದಲಿದ್ದಾರೆ. ಮನಸ್ಸಿನಲ್ಲಿರುವ ಭಯ ತೊರೆದು ನಿಸ್ಸಂಕೋಚವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ.
-ಡಾ.ವೆಂಕಟೇಶ ಬೈರಾಮಡಗಿ. ಸರ್ಕಾರಿ ವೈದ್ಯರು.