ನರೇಂದ್ರ ಮೋದಿ ರಾವಣ, ಸಿದ್ರಾಮಯ್ಯ ರಾಮ.!
ಬಿಜೆಪಿಯವರದು ಆಧಾರ ರಹಿತ ಹೇಳಿಕೆ ದಾರಿ ತಪ್ಪಿಸುವ ಹುನ್ನಾರ
ಚಿತ್ರದುರ್ಗ: ಉಡುಪಿ ಜಿಲ್ಲೆಯ ಬ್ರಹ್ಮಾವರ ಪಟ್ಟಣದಲ್ಲಿ ನಿನ್ನೆ ಬಿಜೆಪಿವತಿಯಿಂದ ನಡೆದ ಪರಿವರ್ತನ ರ್ಯಾಲಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ನೀಡಿದ ‘ಸಿದ್ರಾಮಯ್ಯ ರಾವಣನಿದ್ದಂತೆ’ ಎಂಬ ಹೇಳಿಕೆ ವಿರೋಧಿಸಿ ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರು ನರೇಂದ್ರ ಮೋದಿಯೇ ರಾವಣ, ನಮ್ಮ ಸಿದ್ರಾಮಯ್ಯನವರು ರಾಮನಿದ್ದಂತೆ ಎಂದು ತಿರುಗೇಟು ನೀಡಿದರು.
ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಜನಪರ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಿಎಂ ಸಿದ್ರಾಮಯ್ಯನವರು ಉತ್ತಮ ಕಾರ್ಯ ಮಾಡಿದ್ದಾರೆ. ಬಿಜೆಪಿಯವರು ಬರಿ ಸುಳ್ಳು ಭರವಸೆ ನೀಡುವ ಮೂಲಕ ಜನಹಿತ ಮರೆತಿದ್ದಾರೆ ಎಂದರು.
ಅಲ್ಲದೆ ಕಾಂಗ್ರೆಸ್‍ನ ಡಜನ್ ಗಟ್ಟಲೇ ಶಾಸಕರು, ಸಚಿವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಹೇಳಿಕೆ ಸಂಪೂರ್ಣ ಸುಳ್ಳು ಯಾರೊಬ್ಬರೂ ನಮ್ಮ ಶಾಸಕರು ಪಕ್ಷ ಬಿಟ್ಟು ಹೋಗುವದಿಲ್ಲ. ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಛೇಡಿಸಿದರು. ಅಲ್ಲದೆ ಬಿ.ಎಸ್.ಯಡಿಯೂರಪ್ಪನವರು ಆಧಾರರಹಿತವಾಗಿ ಹೇಳಿಕೆ ನೀಡುವದನ್ನು ಬಿಡಬೇಕು. ಅದು ಅವರ ಘನತೆಗೆ ತಕ್ಕುದಲ್ಲ ಎಂದರು.