ಕಲಬುರಗಿ: ಆಂದೋಲಾಶ್ರೀ ಬಂಧನ ಖಂಡಿಸಿ ಪ್ರತಿಭಟನೆಗೆ ಬಂದಿದ್ದ ಮುತಾಲಿಕ್ ಅರೆಸ್ಟ್!
ಕಲಬುರಗಿ: ಜೇವರಗಿ ತಾಲೂಕಿನ ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮಸೇನೆ ಕಾರ್ಯದ್ಯಕ್ಷರಾದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಗ್ರಾಮದಲ್ಲಿ ಅಂಗಡಿ ತೆರವು ವಿಚಾರದಲ್ಲಿ ಎರಡು ಕೋಮಿನ ಗುಂಪಿನ ಮದ್ಯೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಕೊಲೆ ಯತ್ನ ನಡೆದಿದೆ ಎಂದು ನಸೀರುದ್ದೀನ್ ಎಂಬುವರು ಆರೋಪಿಸಿದ್ದಾರೆ. ಆದರೆ, ಕೊಲೆಯತ್ನಕ್ಕೆ ಆಂದೋಲಾಶ್ರೀಗಳು ಕುಮ್ಮಕ್ಕು ನೀಡಿದ್ದಾರೆಂಬುದಾಗಿ ವಿನಾಕಾರಣ ಶ್ರೀಗಳನ್ನು ಸಿಲುಕಿಸಲಾಗಿದೆ. ಶ್ರೀಗಳನ್ನು ಬಂಧಿಸಿ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅನೇಕ ಮಠಾಧೀಶರು , ಮಠದ ಭಕ್ತರು, ಹಿಂದೂಪರ ಸಂಘಟನೆಯ ನಾಯಕರು ಆರೋಪಿಸುತ್ತಿದ್ದಾರೆ.
ಆಂದೋಲಾ ಶ್ರೀಗಳ ಬಂಧನ ಖಂಡಿಸಿ ನಿನ್ನೆ ಶಹಾಪುರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇಂದು ಕಲಬುರಗಿಯ ಮಿನಿ ವಿಧಾನಸೌಧ ಬಳಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೇವರಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಂದೋಲಾಶ್ರೀಗಳ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದು ವಾರದೊಳಗೆ ಆಂದೋಲಾ ಮಠದ ಜಾತ್ರೆ ಇದೆ. ಆ ಜಾತ್ರೆ, ಉತ್ಸವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಿಂದೂ ವಿರೋಧಿ ಮುಖಂಡರು ಈ ಕುತಂತ್ರ ಹೂಡಿದ್ದಾರೆ. ಇಂಥವುಗಳಿಗೆ ನಾವು ಬಗ್ಗುವುದಿಲ್ಲ. ಬದಲಾಗಿ ಪ್ರಬಲ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರತಿಭಟನೆಗೆ ಬಂದಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಅದ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನೂ ಕನ್ನಡ ಭವನದ ಬಳಿ ಪೊಲೀಸರು ಬಂಧಿಸಿದ್ದಾರೆ. ಮುಂಜಾಗೃತ ಕ್ರಮವಾಗಿ ಪ್ರಮೋದ್ ಮುತಾಲಿಕ್ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಆದರೆ, ಶಾಂತಿ ಕದಡಿದ ಬಗ್ಗೆ ಯಾವುದೇ ದೂರುಗಳಿಲ್ಲ. ಶಾಂತಿಯುತ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಆದರೂ ಸಹ ಪೊಲೀಸರು ಮುತಾಲಿಕ್ ರನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.