ಪ್ರಮುಖ ಸುದ್ದಿ

ಯಾದಗಿರಿಃ ಆಸ್ತಿಗಾಗಿ ಸಹೋದರರ ಕಾದಾಟ, ಕೊಲೆಯಲ್ಲಿ ಅಂತ್ಯ

ಸುರಪುರ: ಸಹೋದರರ ಮದ್ಯೆ ಜಗಳ, ಕೊಲೆಯಲ್ಲಿ ಅಂತ್ಯ

ಯಾದಗಿರಿ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣ ವ್ಯಾಪ್ತಿಯ ಮಲಮುತ್ತೇರದೊಡ್ಡಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ನಿಂಗಪ್ಪ ಇಂದರಗಿ ಎಂಬಾತನಿಗೆ ಸಹೋದರ ಹಯ್ಯಾಳಪ್ಪ ಇಂದರಗಿ ಎಂಬಾತ ಕಟ್ಟಿಗೆಯಿಂದ ಜೋರಾಗಿ ಹೊಡೆದ ಪರಿಣಾಮ ನಿಂಗಪ್ಪ (45) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಕಾರಣ, ನಿಂಗಪ್ಪ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಆದರೆ, ಸಹೋದರನಿಗೆ ಏನಾಯ್ತೆಂದು ನೋಡಿ ಆಸ್ಪತ್ರೆಗೆ ಸೇರಿಸಬೇಕಿದ್ದ ಸಹೋದರ ಹಯ್ಯಾಳಪ್ಪ ಮಾನವೀಯ ಸಂಭಂಧ ಮರೆತು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಡೆಕಲ್ ಗ್ರಾಮ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

———————–

ಕಾನೂನು ಸೇವಾ ಪ್ರಾಧಿಕಾರದಿಂದ ಗ್ರಾಮೀಣ ಭಾಗದಲ್ಲಿ ಜಾಗೃತಿ ಅಗತ್ಯ

ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತನ್ನು ಇಂತಹ ಘಟನೆಗಳನ್ನು ಕಂಡಾಗಲೇ ಹಿರಿಯರು ಹೇಳಿರಬಹುದು ಎಂದೆನಿಸುತ್ತದೆ.  ಅಣ್ಣತಮ್ಮಂದಿರಾಗಿ ಹುಟ್ಟಿದ ಸಹೋದರರು ಬೆಳೆಯುತ್ತಾ. ಮದುವೆ, ಮುಂಜಿ, ಮಕ್ಕಳಾದ ಮೇಲೆ ಆಸ್ತಿ, ಹಣ ಅಂತಸ್ತಿಗೆ ಆಸೆಪಟ್ಟು ಪ್ರೀತಿ, ಮಮತೆ, ಸಹೋದರ ಸಂಬಂಧ ಎಂಬುದನ್ನು ಮರೆತು ಬಡಿದಾಡುವುದು ಸಾಮಾನ್ಯವಾಗುತ್ತಿದೆ.

ಪ್ರಸಕ್ತ ದಿನಮಾನದಲ್ಲಿ ಅವರವರ ಹೆಂಡತಿ ಮತ್ತು ಮಕ್ಕಳ ಹಿತ ಕಾಪಾಡುವಲ್ಲಿ ಹೆಚ್ಚು ಆದ್ಯತೆ ನೀಡುವಂತ ಅದೆಷ್ಟೋ ಕುಟುಂಬಗಳನ್ನು ಕಾಣಬಹುದು.
ಆದಾಗ್ಯು ಮಾನವೀಯತೆ ಇರುವವರಾರು ಈ ರೀತಿ ಮಾಡುವುದಿಲ್ಲ. ಎಲ್ಲರಿಗೂ ಬದುಕುವ ಅವಕಾಶವಿದೆ. ಆಸ್ತಿ, ಹಣ ಹಂಚಿಕೆ ವಿಷಯದಲ್ಲಿ ಕಾದಾಟ ಸಲ್ಲದು. ಜೀವ ತೆಗೆಯುವ ವ್ಯವಧಾನ ಏನಿತ್ತು. ನಾಲ್ಕು ಜನರನ್ನು ಕೂಡಿಸಿ ಪಂಚಾಯತಿ ಮಾಡಿಸಿ, ಯಾರಿಗೆ ಅಗತ್ಯವಿದೆ ಅಂತವರಿಗೆ ಒಂದಿಷ್ಟು ಆಸ್ತಿ, ಹಣದಲ್ಲಿ ಹೆಚ್ಚಿನ ವ್ಯವಸ್ಥೆ ಸಹಕಾರ ನೀಡಿದರೇನು ತಪ್ಪಾಗುವದಿಲ್ಲ. ಒಡ ಹುಟ್ಟಿದವರ ಕಷ್ಟಕ್ಕೆ, ಅವರ ಒಳಿತಿಗೆ ಒಂದಿಷ್ಟು ಹೆಚ್ಚಿನ ಸಹಕಾರ ನೀಡುವುದು ಸಹೋದರರಾಗಿ ಒಡಹುಟ್ಟಿದವರ ಕರ್ತವ್ಯವು ಹೌದು. ಇಲ್ಲಿ ಸಮನಾಗಿ ಆಸ್ತಿ ಹಂಚಿಕೆ ಮಾಡುವುದು ನ್ಯಾಯ. ಆದರೆ ಎಲ್ಲದಕ್ಕಿಂತಲೂ ಮಾನವೀಯತೆ ಅಗತ್ಯ. ಆ ನೆಲೆಯಲ್ಲಿ ಎಲ್ಲರೂ ವಿಚಾರಿಸುವುದು ಅಗತ್ಯ ಅಲ್ಲವೇ?

ಸಹೋದರರು ಕುಳಿತು ಮಾತನಾಡಿಕೊಂಡಿದ್ದಲ್ಲಿ ಸಮಸ್ಯೆ ಬಗೆಹರಿಯುತ್ತಿತ್ತೇನೋ. ಬಗೆಹರಿಯದ ಸಮಸ್ಯೆ ಯಾವುದೂ ಇಲ್ಲ ಅಲ್ಲವೇ. ಸಹೋದರರು ಮಾತಾಡಿಕೊಂಡು ಆಸ್ತಿ, ಹಣ ಹಂಚಿಕೊಳ್ಳಬೇಕಾದ ವಿಷಯವಿದು. ಅಲ್ಲಿಗೂ ಬಗೆಹರಿಯದಿದ್ದಲ್ಲಿ ಕಾನೂನು ಹೋರಾಟ ಮಾಡಬಹುದು. ಅದುಬಿಟ್ಟು ಜೀವ ತೆಗೆಯುವ ಅಗತ್ಯವಿಲ್ಲ. ಒಂದೇ ರಕ್ತ ಹಂಚಿಕೊಂಡು, ಬಾಲ್ಯದಿಂದ ಒಬ್ಬರಿಗೊಬ್ಬರು ತ್ಯಾಗ ಮನೋಭಾವದಿಂದ ಬೆಳೆದು ಕೊನೆಯಲ್ಲಿ ಇಂತಹ ಕ್ಲಿಷ್ಟಕರ ಸ್ಥಿತಿಯಲ್ಲಿ ಬಡಿದಾಡಿ ಕೊಲೆಯಲ್ಲಿ ಅಂತ್ಯ ಕಾಣುವುದು ಮಾನವಕುಲಕ್ಕೆ ಕಳಂಕ.

ಇಲ್ಲಿ ಪರಸ್ಪರರಲ್ಲಿ ತಿಳುವಳಿಕೆ ಅಗತ್ಯವಿದೆ. ಪ್ರೀತಿ, ಮಮತೆ ಸರ್ವರೂ ಒಂದೇ ಎಲ್ಲರೂ ಸಮಾಜದ ಮುಂದೆ ಚನ್ನಾಗಿ ಬಾಳಬೇಕು. ಮಾದರಿ ಕುಟುಂಬ ಎಂದೆನಿಸಿಕೊಳ್ಳುವುದು ಬಹು ಮುಖ್ಯ. ಇತ್ತೀಚಿಗೆ ಮಾನವೀಯತೆ ಮೌಲ್ಯಗಳು ಮಾಯವಾಗುತ್ತಿವೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಅರಿವು ಜೊತೆಗೆ ಮಾನವೀಯ ಮೌಲ್ಯ, ಅಂತಕರಣ ಉಳ್ಳ ನೀತಿ ಪಾಠದ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳು ಹೆಚ್ಚಿನ ಶ್ರಮವಹಿಸಬೇಕಿದೆ ಎಂಬುದು ವಿನಯವಾಣಿ ಆಶಯ.

Related Articles

Leave a Reply

Your email address will not be published. Required fields are marked *

Back to top button