ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳಬೇಡಿ-ಡಾ.ಗುಬ್ಬಿ
ವಾಟ್ಸಪ್, ಫೇಸ್ಬುಕ್ ಎಂಬ ವಿಷಕನ್ಯೆ ತೊರೆಯಲು ಸಲಹೆ
ಯಾದಗಿರಿ, ಶಹಾಪುರ: ಸಾಕಷ್ಟು ಸಂಪತ್ತು ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ. ವಿಜಯಮಲ್ಯ ಸಾಕಷ್ಟು ಸಿರಿವಂತನಿದ್ದರೂ ದೇಶ ಬಿಟ್ಟು ತೊಲಗಿದ. ಇಂತಹ ವ್ಯಕ್ತಿಗಳು ನಮ್ಮ ಮಧ್ಯ ಇದ್ದಾರೆ ಎನ್ನುವುದಕ್ಕೆ ನಾಚಿಕೆಯಾಗುತ್ತದೆ ಎಂದು ಖ್ಯಾತ ವೈದ್ಯ ಡಾ.ಎಸ್.ಎಸ್.ಗುಬ್ಬಿ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಭೀಮರಾಯನಗುಡಿ ಕೃಷ್ಣಾ ಆಂಗ್ಲ ಮಾಧ್ಯಮ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಋಷಿಮುನಿಗಳು ತಪ್ಪಸು ಮಾಡುವಾಗ ವಿಷಕನ್ಯೆಯರು ಆಗಮಿಸಿ ನೃತ್ಯ ಪ್ರದರ್ಶಿಸಿ ತಪಸ್ಸಿಗೆ ಭಂಗ ತರುತ್ತಿದ್ದರು. ಈಗ ಯುವಕರ ಪಾಲಿಗೆ ವಾಟ್ಸಪ್, ಫೇಸ್ಬುಕ್, ವಿಷ ಕನ್ಯೆಯಂತೆ ಆಗಿ ಭವಿಷ್ಯವನ್ನು ಹಾಳು ಮಾಡುತ್ತಿವೆ. ತಂತ್ರಜ್ಞಾನ ನಮಗೆ ಬೇಕಾದಷ್ಟು ಮಾತ್ರ ಬಳಕೆಮಾಡಿಕೊಳ್ಳಬೇಕು ಎಂದು ಯುವ ಸಮೂಹಕ್ಕೆ ಸಲಹೆ ನೀಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಲ್ಲಿ, ನಿಮ್ಮ ಸಂಬಳದ ಒಂದಿಷ್ಟು ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ಇಲ್ಲವೆ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡುವುದರ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು.
ಯವಕರು ಯಾವುದೇ ಕಾರಣಕ್ಕೆ ತಮ್ಮ ತಂದೆ-ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುವ ದುಷ್ಟ ಆಲೋಚನೆ ಮಾಡಬೇಡಿ. ಸಾಧ್ಯವಾದಷ್ಟು ಅವರ ಸೇವೆ ಮಾಡಿ ಧನ್ಯತೆಯನ್ನು ಮೆರೆಯಬೇಕು ಎಂದರು.
ಹಿರಿಯ ಪತ್ರಕರ್ತ ಡಾ.ಶ್ರೀನಿವಾಸ ಶಿರನೂರಕರ್ ಮಾತನಾಡಿ, ನಾವೆಲ್ಲರೂ ಕೇವಲ ಹಕ್ಕುಗಳ ಬಗ್ಗೆ ಮಾತನಾಡುವದರ ಜೊತೆಯಲ್ಲಿ ಕರ್ತವ್ಯವನ್ನು ಮರೆತು ಅದರ ಪ್ರಜ್ಞೆಯಿಂದ ನಾವು ದೂರ ಆಗುತ್ತಿದ್ದೇವೆ. ದೇಶದ ಐಕ್ಯತೆ ಹಾಗೂ ಏಕತೆಗೆ ಭಂಗ ತರಬಾರದು. ಅಂದಿನ ಕಾಲದಲ್ಲಿ ವಿದೇಶದಿಂದ ಆಗಮಿಸಿ ನಮ್ಮ ದೇಶಿಯ ಶಿಕ್ಷಣ ಪಡೆಯುತ್ತಿದ್ದರು.
ಈಗ ದೇಶಿಯ ಯುವಕರು ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇನ್ನೂ ಕಾಲ ಮಿಂಚಿಲ್ಲ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರುವುದು ಅಗತ್ಯವಿದೆ ಎಂದರು.
ಸುರಪುರ ಸಂಸ್ಥಾನದ ವಂಶಜ ರಾಜಾ ಲಕ್ಷ್ಮಿನಾರಾಯಣ ನಾಯಕ ಸಾನಿಧ್ಯವಹಿಸಿದ್ದರು. ಕೃಷ್ಣಾ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾಸ್ಕರರಾವ ಮುಡಬೂಳ, ಡಾ.ವಿಜಯಕುಮಾರ, ಡಾ,ಚಂದ್ರಶೇಖರ ಸುಬೇದಾರ, ಚಂದ್ರಶೇಖರ ಲಿಂಗದಳ್ಳಿ, ಮರೆಪ್ಪ ಪ್ಯಾಟಿ, ರವಿ ಹಿರೇಮಠ, ಹೇಮರಡ್ಡಿ ಕೊಂಗಂಡಿ, ಉಮೇಶ ಮುಡಬೂಳ, ಕಿಶನರಾವ ಕುಲಕರ್ಣಿ, ಸಂಸ್ಥೆಯ ಆಡಳಿತಾಧಿಕಾರಿ ಗುರುಲಿಂಗಯ್ಯ ಪುರಾಣಿಕಮಠ ಇದ್ದರು.