ಶಾಸಕ ಯು.ಟಿ.ಖಾದರ್ ಜಮೀನಿನಲ್ಲಿ ನಡೆಯುತ್ತದೆ ನಾಗಾರಾಧನೆ!
ಮಂಗಳೂರು : ಶಾಸಕ ಯು.ಟಿ.ಖಾದರ್ ಮನೆತನ ಈ ಭಾಗದಲ್ಲಿ ಮಲ್ಲಂಗಡಿ ಸಾಹುಕಾರ್ ಎಂದೇ ಖ್ಯಾತಿ ಗಳಿಸಿದ್ದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪುಣಚ ಪರಿಯಾಲ್ತಡ್ಕದಲ್ಲಿ ಉತ್ತಮವಾದ ಪಿತ್ರಾರ್ಜಿತ ಜಮೀನನ್ನೂ ಹೊಂದಿದೆ. ಅದೇ ಜಮೀನಿನಲ್ಲಿ ಪುರಾತನ ಕಾಲದ ನಾಗಬನವಿದ್ದು ನಾಗರಪಂಚಮಿ ಸಮಯದಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ಈ ಹಿಂದೆ ಭೂಮಿಯಲ್ಲಿ ವಾಸಿಸುವವನೇ ಒಡೆಯ ಕಾನೂನಿನಿಂದಾಗಿ ದಳವಾಯಿ ಮನೆತನಕ್ಕೆ ಸೇರಿದ್ದ ಜಮೀನು ಮಲ್ಲಂಗಡಿ ಸಾಹುಕಾರ್ ಕುಟುಂಬದ ಪಾಲಾಗಿದ್ದು ಇತಿಹಾಸ.
ನಾಗಬನದ ಪುನರ್ ಪ್ರತಿಷ್ಠನದಿಂದ ಮನೆತನಕ್ಕೆ ಒಳಿತಾಗುವ ಸದಿಚ್ಛೆಯಿಂದ ದಳವಾಯಿ ಕುಟುಂಬದ ನಿವೃತ್ತ ಅರಣ್ಯಾಧಿಕಾರಿ ರವಿರಾಜ್ ದಳವಾಯಿ ಅವರು 2010ರಲ್ಲಿ ನಾಗಬನ ಬಿಟ್ಟುಕೊಡುವಂತೆ ಶಾಸಕ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿ ಸೂಕ್ತ ಬೆಲೆಕಟ್ಟಿ ಹಣ ನೀಡುವುದಾಗಿಯೂ ಹೇಳಿದ್ದಾರೆ. ಆದರೆ ಉಚಿತವಾಗಿ ನಾಗಬನವಿರುವ 20 ಸೆಂಟ್ಸ್ ಜಾಗವನ್ನು ನೀಡುವ ಮೂಲಕ ಶಾಸಕ ಯು.ಟಿ.ಖಾದರ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಪ್ರತಿ ನಾಗರಪಂಚಮಿಯಲ್ಲಿ ದಳವಾಯಿ ಕುಟುಂಬ ನಾಗಾರಾಧನೆ ನೆರವೇರಿಸುತ್ತಿದ್ದು ನೂರಾರು ಭಕ್ತರು ಅಲ್ಲಿ ಭಕ್ತಿ ಸಮರ್ಪಿಸುತ್ತಾರೆ. ನಾಗಬನದಲ್ಲಿ ಗಣಪತಿ ಸೇರಿದಂತೆ ವಿವಿಧ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ನಾಗಬನ ಇರುವ ಬಗ್ಗೆ ನಮ್ಮ ಹಿರಿಯರು ಹೇಳುತ್ತಿದ್ದರು ಜಮೀನಿನ ಆ ಭಾಗಕ್ಕೆ ಹೋಗಬಾರದು, ಅಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸುತ್ತಿದ್ದರು. ನಮ್ಮ ಧರ್ಮವನ್ನು ಪಾಲಿಸಬೇಕು, ಪರಧರ್ಮವನ್ನು ಗೌರವಿಸಬೇಕು ಎಂಬ ಸಂಸ್ಕೃತಿ ನಮ್ಮದು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ರೆ, ರವಿರಾಜ್ ದಳವಾಯಿ ಕುಟುಂಬ ಹಾಗೂ ನಾಗಾರಾಧಕರು ಯು.ಟಿ.ಖಾದರ್ ಅವರ ದೊಡ್ಡತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.