ಶಹಾಪುರ ನಗರಸಭೆ ಅಧ್ಯಕ್ಷ ಗಾದಿಗೆ ಕಮಲಾ ಪೈಪೋಟಿ.?
ನಗರಸಭೆ ಮೀಸಲಾತಿ ಪ್ರಕಟ
ಮಹಿಳಾ ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಎಸ್ಟಿ ಮೀಸಲು
ಒಟ್ಟು 31 ನಗರಸಭೆ ಸ್ಥಾನ, 12 ಬಿಜೆಪಿ, 2 ಎಸ್ಡಿಪಿಐ, 16 ಕಾಂಗ್ರೆಸ್, 1 ಪಕ್ಷೇತರ
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ಇಲ್ಲಿನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲು ಪ್ರಕಟವಾಗಿದೆ.
ಹೀಗಾಗಿ ನಗರಸಭೆ ಸದಸ್ಯರುಗಳಲ್ಲಿ ರಾಜಕೀಯ ಗರಿಗೆದರಿದ್ದು, 31 ಸ್ಥಾನಗಳಲ್ಲಿ ಬಹುಮತ ಹೊಂದಿದ್ದ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲಿದೆ.
ಚುನಾವಣೆ ಸಂದರ್ಭದಲ್ಲಿ ಎಸ್ಡಿಪಿಐ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಎರಡು ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧಿಸುವ ಮೂಲಕ ಎರಡರಲ್ಲೂ ಜಯ ಸಾಧಿಸಿತ್ತು. ಉಳಿದಂತೆ 1 ಪಕ್ಷೇತರ (ಕಾಂಗ್ರೆಸ್ ಸೇರ್ಪಡೆ) ಸೇರಿದಂತೆ 17 ಸ್ಥಾನಗಳನ್ನು ಕಾಂಗ್ರೆಸ್ ತನ್ನ ಮಡಿಲಿಗೆ ಹಾಕಿಕೊಂಡಿದೆ. ಉಳಿದಂತೆ ಬಿಜೆಪಿ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು.
ಈಗ ಮೀಸಲಾತಿ ಅನ್ವಯ ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಮೀಸಲಾತಿ ಪ್ರಕಟಗೊಳ್ಳುವ ಮುಂಚಿತವಾಗಿಯೂ ಅಧ್ಯಕ್ಷ ಗಾದೆ ಮೇಲೆ ಬಹುತೇಖರು ಕಣ್ಣಿಟ್ಟಿದ್ದರು. ಎರಡಬೇ ಬಾರಿಗೆ ಜಯಸಾಧಿಸಿದ್ದ ಸಿದ್ದು ಆರಬೋಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಗೆಲುವು ಸಾಧಿಸಿದಾಗಿನಿಂದ ಮೀಸಲಾತಿ ಸಾಮಾನ್ಯ ಬಂದಲ್ಲಿ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಶೀತಲ ಸಮರ ನಡೆಸಿದ್ದರು. ಆದರೆ ಮೀಸಲಾತಿ ಸಾಮಾನ್ಯ ಮಹಿಳೆ ಬಂದ ಪರಿಣಾಮ ಆರಬೋಳ ಅಧ್ಯಕ್ಷರಾಗುವ ಆಸೆಗೆ ನಿರಾಸೆಯಾಗಿದೆ ಎನ್ನಬಹುದು.
ವಾರ್ಡ್ ಸಂಖ್ಯೆ 8 ರಲ್ಲಿ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ ಕಮಲಾಬಾಯಿ ಲಿಂಗದಳ್ಳಿ ಮತ್ತು ವಾರ್ಡ್ ಸಂಖ್ಯೆ 23 ರಿಂದ ಗೆಲುವು ಸಾಧಿಸಿದ ಶಹನಾಜ ಬೇಗಂ ಗಂಡ ಮುಸ್ತಫಾ ದರ್ಬಾನ್ ಮಧ್ಯ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಬಹುತೇಕ ಕಮಲಾಬಾಯಿ ಲಿಂಗದಳ್ಳಿ ಅಧ್ಯಕ್ಷರಾಗುವ ಲಕ್ಷಣಗಳು ಕಂಡು ಬಂದಿವೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನ ಎಸ್ಟಿ ಮೀಸಲಿದ್ದು, ವಾರ್ಡ್ ನಂ 16 ರಿಂದ ಗೆಲುವು ಸಾಧಿಸಿದ್ದ ಏಕೈಕ ಎಸ್ಟಿ ಅಭ್ಯರ್ಥಿ ಭೀಮಾಬಾಯಿ ದೇವಿಂದ್ರಪ್ಪ ಇವರಾಗಿದ್ದು, ಬಹುತೇಕ ಉಪಾಧ್ಯಕ್ಷರಾಗುವದು ಖಚಿತವಾಗಿದೆ ಎನ್ನಬಹುದು.