Homeಜನಮನಪ್ರಮುಖ ಸುದ್ದಿ

ನಾಳೆ ಪ್ರಧಾನಿ ಮೋದಿ 74ನೇ ಹುಟ್ಟುಹಬ್ಬ : ರಾಜ್ಯ ಬಿಜೆಪಿ ವತಿಯಿಂದ ಸೆ. 17ರಿಂದ ಸೇವಾ ಪಾಕ್ಷಿಕ ಆಚರಣೆ

ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ಸೆ. 17ರಿಂದ ಸೇವಾ ಪಾಕ್ಷಿಕವನ್ನು ಆಚರಿಸಲಾಗುವುದು ಎಂದು ಬಿಜೆಪಿ ಯ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ (ಸೆ.17) ದೇಶದ ಪ್ರಧಾನಿ, ಪ್ರಪಂಚ ಕಂಡ ಅದ್ಭುತ ನಾಯಕ ನರೇಂದ್ರ ಮೋದಿಯವರ ಜನ್ಮದಿನ, ಇದೇ 25ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಹುಟ್ಟು ಹಬ್ಬ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇದ್ದು, ಈ 15 ದಿನಗಳ ಕಾಲ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಸೇವಾ ಪಾಕ್ಷಿಕ ನಡೆಸಲಾಗುವುದು ಎಂದರು.

ಈ ಮೂವರು ಪ್ರಮುಖರ ಹೆಸರಿನಲ್ಲಿ ಜನರಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಜನ್ಮದಿನವನ್ನು ಕೇಕ್ ಕತ್ತರಿಸುವುದರ ಮೂಲಕ ಅಥವಾ ಊಟೋಪಚಾರದ ಮೂಲಕ ಆಚರಿಸುವುದರ ಬದಲಾಗಿ ಜನರಿಗೆ ಸೇವೆ ಮಾಡಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು. ನಾಳೆ ರಾಜ್ಯದ ಎಲ್ಲ ಮಂಡಲ, ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರದ ಮೂಲಕ ಸೇವಾ ಪಾಕ್ಷಿಕ ಆರಂಭವಾಗಲಿದೆ ಎಂದು ತಿಳಿಸಿದರು. ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಂದುವರೆಸುತ್ತೇವೆ. ಪ್ರತಿ ದಿನವೂ ಒಂದೊಂದು ಕಾರ್ಯಕ್ರಮ ನಡೆಸಲಿದ್ದೇವೆ. ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಉಸ್ತುವಾರಿ ನೇಮಿಸಿದ್ದು, ಜಿಲ್ಲೆಯಲ್ಲಿ ನಾಲ್ಕು ಜನರ ತಂಡ ರಚಿಸಲಾಗಿದೆ ಎಂದರು. ಪಕ್ಷದ ಮಂಡಲಗಳಲ್ಲಿ ತಲಾ ನಾಲ್ಕು ಜನರ ತಂಡ ಮಾಡಿ, ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ವಿವರ ನೀಡಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಅವರು ಮಾತನಾಡಿ, ಮೋದಿಜೀ ಅವರು ಅವರ ಆಡಳಿತಾವಧಿಯಲ್ಲಿ ಹಲವಾರು ಮಾನವೀಯ- ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮೋದಿಜೀ ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಮಾಡಲು ಸೇವಾ ಪಾಕ್ಷಿಕ ಆಚರಣೆ ನಡೆಯುತ್ತಿದೆ ಎಂದರು.

ನಾಳೆಯಿಂದ ಯುವ ಮೋರ್ಚಾದ ಅಡಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸೆ.18ರಿಂದ 24ರವರೆಗೆ ಶಾಲೆ- ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಪಟುಗಳಿಗೆ ಸನ್ಮಾನ- ಸಹಾಯಕ ಸಲಕರಣೆ ವಿತರಣೆಯೂ ನಡೆಯಲಿದೆ. ಸೆ,23ರಂದು ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡುತ್ತೇವೆ. ಪ್ರಧಾನಿಯವರ ಜೀವನ- ಸಾಧನೆ ಕುರಿತ ಚಿತ್ರಪ್ರದರ್ಶನವು ರಾಜ್ಯದ ಪಕ್ಷದ ಕಾರ್ಯಾಲಯದಲ್ಲಿ ಚಾಲನೆ ಕೊಡಲಾಗುತ್ತದೆ ಎಂದರು.

ವಿವಿಧ ಕಡೆಗಳಲ್ಲಿ ಮೋದಿಜೀ ಅವರ ಕುರಿತ ವಿಚಾರಗೋಷ್ಠಿಯನ್ನೂ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕಲೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಭಾಷಣ, ಪ್ರಬಂಧ ಸ್ಪರ್ಧೆಗಳು, ಮರಳು ಕಲಾ ಸ್ಪರ್ಧೆ, ಗ್ರಾಫಿಕ್ ವಿನ್ಯಾಸ ಸ್ಪರ್ಧೆಯನ್ನೂ ಹಮ್ಮಿಕೊಳ್ಳುತ್ತೇವೆ ಎಂದು ವಿವರ ನೀಡಿದರು. ಸೆ.25ರಂದು ದೀನದಯಾಳ್ ಉಪಾಧ್ಯಾಯರಿಗೆ ಪುಷ್ಪನಮನ- ಸ್ಮರಣಾ ಕಾರ್ಯ ಇರುತ್ತದೆ. ಅ.2ರಂದು ಮಹಾತ್ಮಗಾಂಧಿ- ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಂದು ಪ್ರತಿಮೆಗಳ ಸುತ್ತ ಸ್ವಚ್ಛತೆ- ಪುಷ್ಪನಮನ ಕಾರ್ಯ ನಡೆಸಲಿದ್ದೇವೆ ಎಂದರು.

 

Related Articles

Leave a Reply

Your email address will not be published. Required fields are marked *

Back to top button