ವಿವೇಕರು ತೋರಿದ ಸನ್ಮಾರ್ಗದಲ್ಲಿ ನಡೆಯಿರಿ
ಅಣಬಿಯಲ್ಲಿ ರಾಷ್ಟ್ರೀಯ ಯುವದಿನ ಆಚರಣೆ
ಯಾದಗಿರಿ, ಶಹಾಪುರ: ತಾಲೂಕಿನ ಅಣಬಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮತ್ತು ಶ್ರೀ ಗುರು ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕನಂದರ 156 ನೇ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಗುರು ಬಸವರಾಜ ಧ್ಯಾಮಾ, ವಿದ್ಯಾರ್ಥಿಗಳು ಮಾನಸಿಕ, ದೈಹಿಕ, ಆಧ್ಯಾತ್ಮಿಕ, ನೈತಿಕ ಹಾಗೂ ಸಾಮಾಜಿಕವಾಗಿ ಸಶಕ್ತರಾಗಲು ಸ್ವಾಮಿ ವಿವೇಕಾನಂದರ ಮಾರ್ಗವನ್ನು ಅನುಸರಿಸಬೇಕು.
ಸ್ವಾಮಿ ವಿವೇಕಾನಂದರು ದೇಶದ ಸಂಸ್ಕøತಿ ಸಂಪ್ರದಾಯ ಧಾರ್ಮಿಕ ಆಚರಣೆ ಕುರಿತು ಇಡಿ ಜಗತ್ತಿನಲ್ಲಿ ಗಮನ ಸೆಳೆದಿದ್ದು, ಭಾರತದ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಅವರ ಶೈಕ್ಷಣಿಕ ವಿಕಾಸ ಕುರಿತು ಅವರ ಮಾತುಗಳು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು ಅಲ್ಲದೆ ಬದುಕಿನುದ್ದಕ್ಕೂ ಅವುಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಸಾರ್ಥಕತೆ ಪಡೆಯಲು ಅನುಕೂಲವಾಗಲಿದೆ.
ಆತ್ಮವಿಶ್ವಾಸ, ಸದೃಢತೆ, ಮನಸ್ಸಿನ ಹತೋಟಿ, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಸ್ವಾಮಿ ವಿವೇಕರ ಜೀವನ ಚರಿತ್ರೆ ಓದಿ ತಿಳಿಯಬೇಕಿರುವದು ಅಗತ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಶರಣಬಸವ ಸ್ವಾಮಿ ವಿವೇಕಾನಂದರ ವೇಷ ಧರಿಸಿ ಚಿಕ್ಯಾಗೊ ಸಮ್ಮೇಳನದ ಭಾಷಣದ ತುಣುಕು ಪುನರುಚ್ಛರಿಸುವ ಮೂಲಕ ಸರ್ವರ ಗಮನ ಸೆಳೆದರು.
ಇದಕ್ಕೂ ಮುಂಚೆ ಎನ್.ಜಿ.ಒ. ಸದಸ್ಯ ದೇವು ಮುಡಬೂಳ ಮತ್ತು ವಿಶೇಷ ಉಪನ್ಯಾಸಕರಾಗಿ ದೈಹಿಕ ಶಿಕ್ಷಕ ಸುನೀಲ ಕುಮಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಗನಗೌಡ ಚನ್ನಶೆಟ್ಟಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಯಲ್ಲಪ್ಪ ಚಿಪ್ಪಾರ, ಶಿವಪ್ಪ ನಾಯ್ಕೋಡಿ, ಯುವಕರಾದ ಭೀಮು ಚಿಪ್ಪಾರ, ತವಕಲಪ್ಪ ಮುದವಾಳ, ಅಂಬಲಪ್ಪ ಉಪಸ್ಥಿತರಿದ್ದರು.
ಶಿಕ್ಷಕರಾದ ಸರಿತಾ ನಿರೂಪಿಸಿದರು. ಭೂತಪ್ಪ ಸ್ವಾಗತಿಸಿದರು. ದೇವಪುತ್ರ ಕಟ್ಟಿ ವಂದಿಸಿದರು.
ರಾಷ್ಟ್ರೀಯ ಯುವದಿನ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಮುದವಾಳ ಬಹುಮಾನ ವಿತರಿಸಿದರು.