ಜನಮನ

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಹುಲಿಯ ಘರ್ಜನೆ!

ಕಳೆದ ಮೂರು ದಶಕಗಳಿಂದ ದರ್ಶನಾಪುರ ಮತ್ತು ಶಿರವಾಳ ಕುಟುಂಬದವರೇ ಶಹಾಪುರ ವಿಧಾನಸಭಾ ಕ್ಷೇತ್ರದ ಚುಕ್ಕಾಣಿ ಹಿಡಿಯುತ್ತಾ ಬಂದಿರುವುದು ಇತಿಹಾಸ. ಅನೇಕ ಚುನಾವಣೆಗಳಲ್ಲಿ ಈ ಎರಡೂ ಕುಟುಂಬದ ಅಬ್ಯರ್ಥಿಗಳಿಗೆ ಸೆಡ್ಡು ಹೊಡೆಯುವ ಹೊಸ ಅಬ್ಯರ್ಥಿಗಳು ಹುಟ್ಟಿಕೊಂಡಿದ್ದಾರೆ. ಆರಂಭದಲ್ಲಿ ಸಂಚಲನ ಮೂಡಿಸಿದ್ದಾರಾದ್ರೂ ಮತದಾನದ ವೇಳೆಗಾಗಲೇ ಮತದಾರರು ಮತ್ತೆ ಈ ಎರಡು ಕುಟುಂಬಗಳ ಪೈಕಿ ಒಬ್ಬರಿಗೆ ಗೆಲುವಿನ ಮಾಲೆ ಹಾಕಿ ವಿಧಾನಸಭೆಗೆ ಕಳಿಸುತ್ತಾ ಬಂದಿದ್ದಾರೆ.

ಎರಡು ಸಲ ಬಿಜೆಪಿಯಿಂದ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದ ಜನಪರ ನಾಯಕ ಡಾ.ಮಲ್ಲನಗೌಡ ಉಕ್ಕಿನಾಳ್ ಅವರಿಗೆ ಆರಂಭದಲ್ಲಿ  ಭಾರೀ ಬೆಂಬಲ ವ್ಯಕ್ತವಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆಯಂತೂ ಭಾರೀ ಜನಸ್ತೋಮವೇ ಅವರ ಬೆನ್ನಿಗೆ ಬಂದುನಿಂತಿತ್ತು.  ಸಮಾವೇಶದಲ್ಲಿ, ಪ್ರಚಾರಕ್ಕೆ ಹೋದಲ್ಲೆಲ್ಲಾ ಜನಸೇರಿದ್ದು ನೋಡಿದರೆ ಉಕ್ಕಿನಾಳರ ಗೆಲುವು ಗ್ಯಾರಂಟಿ ಅನ್ನುವ ವಾತಾವರಣವಿತ್ತು.  ಆದ್ರೆ, ಕೊನೆಯ ಹಂತದಲ್ಲಿ ಸಾಂಪ್ರದಾಯಿಕ ಫಲಿತಾಂಶವೇ ಹೊರಬಂದಿತ್ತು. ಕಾಂಗ್ರೆಸ್ಸಿನಿಂದ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಗೆಲುವಿನ ನಗೆ ಬೀರಿದ್ದರು.

ಕಳೆದ ಚುನಾವಣೆಯಲ್ಲಿ ರೈತ ನಾಯಕ ಶರಣಪ್ಪ ಸಲಾದಪುರ ಅವರು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದರು. ಕ್ಷೇತ್ರದ ಬಹುತೇಕ ರೈತರು, ಹಿಂದುಳಿದ ಸಮುದಾಯದವರು ಭಾರೀ ಬೆಂಬಲ ವ್ಯಕ್ತಪಡಿಸಿದ್ದರು. ಶರಣಪ್ಪ ಸಲಾದಪುರ ಅವರು ನಾಮಪತ್ರ ಸಲ್ಲಿಸುವ ವೇಳೆ ಬಂದಿದ್ದ ಜನ ಮತ್ತು ಅವರ ಕುಟುಂಬದವರು ಮತದಾನ ಮಾಡಿದರೆ ಸಾಕು ಸಲಾದಪುರ ಅವರು ವಿಧಾನಸಭೆ ಪ್ರವೇಶಿಸುತ್ತಾರೆ, ಅನುಮಾನವೇ ಬೇಡವೆಂಬ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ, ಕೊನೆಗೆ ಮಾತ್ರ ಮತ್ತದೆ ಸಾಂಪ್ರದಾಯಿಕ ಫಲಿತಾಂಶವೇ ಹೊರಬಂದಿತ್ತು. ಕೆಜೆಪಿಯಿಂದ ಗುರು ಪಾಟೀಲ್ ಶಿರವಾಳ್ ಅವರು ವಿಜಯಮಾಲೆ ಧರಿಸಿದ್ದರು.

ಇದೀಗ 2018ರ ಚುನಾವಣೆಗೆ ಶಹಾಪುರ ಮತಕ್ಷೇತ್ರದಿಂದ ಕಣಕ್ಕಿಳಿಯಲು ಅಮೀನ್ ರೆಡ್ಡಿ ಯಾಳಗಿ ರೆಡಿಯಾಗಿದ್ದಾರೆ. ಮೂಲತ: ಗುತ್ತಿಗೆದಾರರಾದ ಅಮೀನ್ ರೆಡ್ಡಿ ಯಾಳಗಿ ಶಹಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುರಪುರ ತಾಲೂಕಿನ ಯಾಳಗಿ ಗ್ರಾಮದವರು. ಕಳೆದ ಎರಡು ತಿಂಗಳುಗಳಿಂದ ಶಹಾಪುರದಲ್ಲಿ ಬಿಡಾರ ಹೂಡಿದ್ದು ಜೆಡಿಎಸ್ ಅಬ್ಯರ್ಥಿಯಾಗಿ ಚುನಾವಣ ಕಣಕ್ಕೆ ಎಂಟ್ರಿ ಕೊಡಲು  ಅಣಿಯಾಗುತ್ತಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ದಿಸಿದ್ದ ಶರಣಪ್ಪ ಸಲಾದಪುರ, ಶಿರವಾಳದ ಇಬ್ರಾಹಿಂ ಅವರು ಸೇರಿದಂತೆ ಇನ್ನೂ ಅನೇಕ ನಾಯಕರು ಜೆಡಿಎಸ್ ನಿಂದ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ. ಆದ್ರೆ, ಅವರೆಲ್ಲರನ್ನೂ ಓವರ್ ಟೇಕ್ ಮಾಡಿ ಅಮೀನ್ ರೆಡ್ಡಿ ತೆನೆಹೊರುವ ತವಕದಲ್ಲಿದ್ದಾರೆ.

ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಗುತ್ತಿಗೆದಾರ ಅಮೀನರೆಡ್ಡಿ ಈಗ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ದರ್ಶನಾಪುರ ಅವರ ವಿರುದ್ಧವೇ ಚುನಾವಣ ಕಣಕ್ಕಿಳಿಯಲು ಮುಂದಾಗಿದ್ದಾರೆ. ಫಸ್ಟ್ ಎಂಟ್ರಿ ಈಸ್ ಬೆಸ್ಟ್ ಎಂಟ್ರಿ ಎಂಬಂತೆ ಯುವ ನಾಯಕ ಅಮೀನರೆಡ್ಡಿ ಭರ್ಜರಿಯಾಗೇ ಪಾಲಿಟಿಕಲ್ ಎಂಟ್ರಿ ಕೊಟ್ಟಿದ್ದು, ಜೆಡಿಎಸ್ ಟಿಕೆಟ್ ನಂದೇ ಎಂಬಂತೆ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.

ಸೆಪ್ಟಂಬರ್ 15ರ ಶುಕ್ರವಾರ ನಗರದ ಡಿಗ್ರಿ ಕಾಲೇಜು ಮೈದಾನದಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲಾಗಿದ್ದು ದೊಡ್ಡ ಪ್ರಮಾಣದ ವೇದಿಕೆ ಸಿದ್ಧಗೊಂಡಿದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಜವಬ್ದಾರಿಯನ್ನು ಹೊತ್ತಿರುವ ಅಮೀನ್ ರೆಡ್ಡಿ ಯಾಳಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೇದಿಕೆ ಸಿದ್ಧಪಡಿಸಿದ್ದಾರೆ. ಕಳೆದೆರಡು ತಿಂಗಳುಗಳಿಂದ ಕ್ಷೇತ್ರ ವ್ಯಾಪಿ ಸುತ್ತಿ ಸಂಘಟನೆಗಿಳಿದಿದ್ದಾರೆ. ಇಂದಿನ ಸಮಾವೇಶಕ್ಕೆ ಸಹಸ್ರಾರು ಜನ ಸೇರುವ ನಿರೀಕ್ಷೆಯಲ್ಲಿದ್ದಾರೆ. ಪರಿಣಾಮ ಅಮೀನರೆಡ್ಡಿ ಅಂದುಕೊಂಡಂತೆಯೇ ಆಗಿದ್ದಾದಲ್ಲಿ ಇಂದಿನ ಸಮಾವೇಶದಲ್ಲೇ ಪಕ್ಷದ ನಾಯಕರು ಶಹಾಪುರ ವಿಧಾನಸಭಾ ಕ್ಷೇತ್ರದ ಅಬ್ಯರ್ಥಿಯಾಗಿ ಅಮೀನ್ ರೆಡ್ಡಿ ಅವರನ್ನು ಘೋಷಿಸಲಿದ್ದಾರೆ.

ಒಟ್ಟಾರೆಯಾಗಿ ಹೊಸಮುಖವೊಂದು ಭರ್ಜರಿಯಾಗೇ ರಾಜಕೀಯ ಅಖಾಡ ಎಂಟ್ರಿಗೆ ಸಜ್ಜಾಗಿದೆ. ಆದರೆ, ಹಲವು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದರ್ಶನಾಪುರ ಹಾಗೂ ಶಿರವಾಳ್ ಕುಟುಂಬಗಳು ತಮ್ಮದೇ ಆದ ಮತಬ್ಯಾಂಕನ್ನು ಹೊಂದಿವೆ. ರಾಜಕೀಯ ಮತ್ತು ಸಾಮಾಜಿಕ ಸೇವೆ ಮೂಲಕ ಕ್ಷೇತ್ರದಲ್ಲಿ ಬಿಗಿಹಿಡಿತ ಸಾಧಿಸಿವೆ. ಹೀಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿಯ ಘಟಾನುಘಟಿ ನಾಯಕರ ನಡುವೆ ಈ ಯುವನಾಯಕ ಅಮೀನ್ ರೆಡ್ಡಿ ಹೇಗೆ  ಬ್ಯಾಟ್ ಮಾಡಲಿದ್ದಾರೆ. ಗೆಲುವಿನ ಬೌಂಡರಿ ರೀಚ್ ಆಗ್ತಾರಾ, ಎಷ್ಟು ರನ್ ಗಳಿಸಲಿದ್ದಾರೆ, ಯಾರಿಗೆ ವರವಾಗ್ತಾರೆ, ಯಾರಿಗೆ ಶಾಪವಾಗ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

Related Articles

3 Comments

  1. ಮೂರನೇ ಅಭ್ಯಾರ್ಥಿಗೆ ಹಾರಸಿ ತಂದಾಗ ಮಾತ್ರ ಶಹಾಪೂರ ಅಭಿವೃಧ್ದಿ ಆಗುತ್ತದೆ ..

    1. ಹ್ಹಹ್ಹಹ್ಹ ಮತದಾರರ ಒಲವು ಯಾರ ಕಡೆಯೋ ಯಾರಿಗೆ ಗೊತ್ತು..ಈಗಲೇ ಚುನಾವಣೆ ಕಾವು ಶುರುವಾಗಿದೆ.

Leave a Reply

Your email address will not be published. Required fields are marked *

Back to top button