ನಿಖಿಲ್ ಕುಮಾರಸ್ವಾಮಿ ವರ್ಸಸ್ ಬಿ.ವೈ.ವಿಜಯೇಂದ್ರ !
ವಿನಯ ಮುದನೂರ್
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಇಡೀ ಇಂಡಿಯಾದ ಗಮನಸೆಳೆದಿದ್ದು ಈಗ ಇತಿಹಾಸ. ಆದರೆ, ಅದೇ ಮಂಡ್ಯ ಜಿಲ್ಲೆ ಮತ್ತೊಂದು ರೋಚಕ ಚುನಾವಣ ಸಮರಕ್ಕೆ ಸಾಕ್ಷಿಯಾಗಲಿದೆ ಎಂಬ ರಾಜಕೀಯ ಮೇಲಾಟ ರಾಜ್ಯದ ಜನರಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಹೌದು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ನಾರಾಯಣಗೌಡ ಸರ್ಕಾರದ ವಿರುದ್ಧ ಸಿಡಿದೆದ್ದು ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಶಾಸಕ ಸ್ಥಾನದಿಂದ ಅನರ್ಹವಾಗಿದ್ದಾರೆ. ಪರಿಣಾಮ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಇಷ್ಟರಲ್ಲೇ ಉಪ ಚುನಾವಣೆ ಎದುರಾಗಲಿದೆ. ಕೆ.ಆರ್.ಪೇಟೆ ಕ್ಷೇತ್ರ ಜೆಡಿಎಸ್ ಗೆ ಉಳಿಸಿಕೊಳ್ಳುವುದರ ಜತೆಗೆ ಮಂಡ್ಯದಲ್ಲಿ ಸೋಲುಂಡ ಪುತ್ರ ನಿಖಿಲ್ ಕುಮಾರ್ ಗೆ ರೀಎಂಟ್ರಿ ಕೊಡುವುದು. ಆ ಮೂಲಕ ಬಾಂಬೆ ರಿಟರ್ನ್ ನಾರಾಯಣಗೌಡ ವಿರುದ್ಧ ಸೇಡು ತೀರಿಸಿಕೊಳ್ಳುವುದು ದಳಪತಿಗಳ ಪ್ಲಾನ್ .
ಈ ಮಾತಿಗೆ ಪುಷ್ಟಿ ನೀಡುವಂತೆ ನಾಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆ.ಆರ್.ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರ ಜತೆ ಸಭೆ ನಡೆಸುತ್ತಿದ್ದಾರೆ. ಕಾರ್ಯಕರ್ತರ ನಾಡಿ ಮಿಡಿತ ಗಮನಿಸಿ ಪುತ್ರ ನಿಖಿಲ್ ಭವಿಷ್ಯ ನಿರ್ಧರಿಸಲಿದ್ದಾರೆ ಎಂಬಂಶ ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಕೆ.ಆರ್.ಪೇಟೆ ಕ್ಷೇತ್ರದ ಮೇಲೆ ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಕಣ್ಣಿಟ್ಟಿದ್ದು ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವ ಮಾತು ಕೇಳಿ ಬಂದಿತ್ತು. ಕೊನೆ ಹಂತದಲ್ಲಿ ವಿಜಯೇಂದ್ರ ಹಿಂದೆ ಸರಿದಿದ್ದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ರಾಘವೇಂದ್ರ ಶಿವಮೊಗ್ಗ ಸಂಸದರಾಗಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿದಿರುವಾಗಲೇ ಇನ್ನೋರ್ವ ಪುತ್ರ ವಿಜಯೇಂದ್ರಗೆ ವಿಧಾನಸಭೆಗೆ ಎಂಟ್ರಿ ಕೊಡಿಸುವದು ಬಿಎಸ್ ವೈ ಕುಟುಂಬದ ಆಶಯವಾಗಿದೆ ಎನ್ನಲಾಗುತ್ತಿದೆ. ಪರಿಣಾಮ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ , ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿದರೆ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ ಕಾದಾಟಕ್ಕೆ ವೇದಿಕೆ ಆಗಲಿದೆ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆಯಿಂದಾಗಿ ಕೆ.ಆರ್.ಪೇಟೆ ಅಖಾಡ ರಂಗೇರುವ ಸಾಧ್ಯತೆಯಿದೆ ಎಂಬುದು ಸದ್ಯ ರಾಜಕೀಯ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.