ಹೋಟೆಲ್ನಲ್ಲಿ ದಲಿತರಿಗೆ ಪ್ರವೇಶವಿಲ್ಲ.! ನಾಲ್ಕು ಜನ ಹೊಟೇಲ್ ಮಾಲೀಕರು ಪೊಲೀಸ್ ವಶಕ್ಕೆ
ಯಾದಗಿರಿಃ ದಲಿತರೆಂಬ ಕಾರಣಕ್ಕೆ ಶಹಾಪುರ ತಾಲೂಕಿನ ಬಿರಾಳ ಗ್ರಾಮದ ಹೋಟೆಲ್ ಗಳಲ್ಲಿ ಪ್ರವೇಶಕ್ಕೆ ನಿರ್ಭಂದಿಸಲಾಗಿದೆ. ನೀರು ಮತ್ತು ಚಹವನ್ನು ಎತ್ತಿಹಾಕುವ ಮೂಲಕ ಅಸ್ಪೃಶ್ಯತೆ ಎಂಬ ಪೆಡಂಭೂತವನ್ನು ಇನ್ನೂ ಜೀವಂತವಾಗಿರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಹೋಟೆಲ್ ಪ್ರವೇಶಕ್ಕೆ ನಿರಾಕರಿಸಲಾಗಿದ್ದು ಚಹ ಮತ್ತು ನೀರು ಕುಡಿಯಲು ಹೋದಾಗ ಎತ್ತಿ ಹಾಕಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಬಿರಾಳ ಗ್ರಾಮದ ನಾಲ್ಕು ಹೊಟೇಲ್ ಗಳ ಮಾಲೀಕರು ಈ ಮೊದಲಿನಿಂದಲೂ ಅಸ್ಪೃಶ್ಯತೆ ಆಚರಿಸುತ್ತಿದ್ದರು ಎನ್ನಲಾಗಿದೆ. ಚಹ ಸಹ ದಲಿತರಿಗೆ ಪ್ರತ್ಯೇಕ ಕಪ್ನಲ್ಲಿ ನೀಡುತ್ತಿದ್ದರು. ಅಲ್ಲದೆ ಚಹಾ ಕುಡಿದ ಕಪ್ ನ್ನು ಅವರೇ ತೊಳೆದು ಇಡುವಂತ ಪದ್ಧತಿ ಮುಂದುವರೆಸಿದ್ದರು. ಹೀಗಾಗಿ, ಹೋಟೆಲ್ ನವರ ಅಸ್ಪೃಶ್ಯತೆ ಆಚರಣೆಯಿಂದಾಗಿ ದಲಿತ ಸಮುದಾಯ ಅವಮಾನ ಅನುಭವಿಸುವಂತಾಗಿತ್ತು.
ಬಿರಾಳ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ನಾಲ್ಕು ಹೊಟೇಲ್ ಗಳ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದ ಹೊಟೇಲ್ ಮಾಲೀಕರಾದ ದೊಡ್ಡ ಸಿದ್ದಪ್ಪ, ಸಣ್ಣ ಸಿದ್ದಪ್ಪ ಮತ್ತು ಚಾಹುಸೇನ್, ಹುಸೇನ್ಸಾಬ ರನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಹಾಪುರ ತಹಸೀಲ್ದಾರ ಸೋಮಶೇಖರ ಅವರು ಸೇರಿದಂತೆ ವಡಿಗೇರಾ ಪೊಲೀಸರು ಇದ್ದರು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.