ಸಗರನಾಡಿನ ನೌಕರ ಬಂಧು ಅಭಿನಂದನಾ ಕೃತಿ ಬಿಡುಗಡೆ
ಹೋರಾಟದ ಹಾದಿಯ ಮೂಲಕ ಯಶಸ್ಸು: ದರ್ಶನಾಪುರ
yadgiri, ಶಹಾಪುರಃ ನಮ್ಮ ಕ್ಷೇತ್ರದ ವ್ಯಾಪ್ತಿಯ ಸರಕಾರಿ ನೌಕರರೊಬ್ಬರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ, ವಿಭಾಗದ ಮಟ್ಟದ ಪ್ರಮುಖ ಜವಬ್ದಾರಿ ಪಡೆದು, ನೌಕರರ ಕಷ್ಟ ಸುಖದ ಜತೆಗೂಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಶಸ್ಸು ಕಂಡು ವಿಭಾಗ ಮಟ್ಟದಲ್ಲಿ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ತಾಲೂಕಿನ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ತಾಲೂಕ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ ಅವರ 50ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಅವರ ಆತ್ಮೀಯರು ಅವರ ಸಾಧನೆ ಕುರಿತು ಸಂಪಾದಿತ ‘ಸಗರನಾಡಿನ ನೌಕರ ಬಂಧÀು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ರಾಯಪ್ಪಗೌಡರು ಗೋಗಿ ಗ್ರಾಮದಲ್ಲಿ ಹೋರಾಟ ಹಾದಿಯ ಮೂಲಕ ಹಂತ ಹಂತವಾಗಿ ಗುರಿ ತಲುಪಿ ನೌಕರರ ಸಂಘದ ಅಧ್ಯಕ್ಷರಾಗಿ ಅಸಂಖ್ಯೆ ನೌಕರರ ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತಾ, ನೌಕರರ ಸಂಘದ ಭರವಸೆಯ ಮುಂಚೂಣಿ ನಾಯಕರಾಗಿ ಬೆಳೆದಿದ್ದು, ನೌಕರರ ಬಂಧು ಸಹಕಾರದ ಪರ್ವತ ಇನ್ನೂ ಹೆಚ್ಚಿನ ಸಾಧನೆ ಅವರಿಂದಾಗಲಿ ಎಂದು ಆಶಿಸುತ್ತೇನೆ ಎಂದು ಹರಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ರಾಯಪ್ಪಗೌಡರದು, ಸ್ವಹಿತಾಸಕ್ತಿಗಿಂತ ಪರರ ಒಳಿತಿಗಾಗಿ ಕರ್ತವ್ಯ ನಿರ್ವಹಿಸುವ ಕಳಕಳಿ ಮೆಚ್ಚುವಂತದ್ದು, ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ಸಂಘಟನಾ ಚತುರ ಆತ, ಹೋರಾಟದ ಮನೋಭಾವದಿಂದ ಮನೆ ಮಾತಾಗಿದ್ದಾರೆ. ಸಂಘಟನೆಗೆ ಶಕ್ತಿ ತುಂಬುತ್ತಿದ್ದಾರೆ.
ಅಲ್ಲದೆ ಮೊನ್ನೆ ನೌಕರರ ವೇತನ ಪರಿಷ್ಕರಣೆಗೆ ನಡೆಸಿದ ಒಂದು ದಿನದ ಹೋರಾಟ ಅಮೋಘವಾದದು, ಒಗ್ಗಟ್ಟು ಪ್ರದರ್ಶನಕ್ಕೆ ತಾವೆಲ್ಲ ಸಆಥ್ ನೀಡಿದ್ದೀರಿ, ಶೀಘ್ರದಲ್ಲಿ ಶಾಶ್ವತ ಪರಿಹಾರ ಸಿಗಲಿದ್ದು, ನೌಕರರ ಸಂಘ ಸರ್ಕಾರದ ಆರ್ಥಿಕ ಸ್ಥಿತಿ, ನೌಕರರ ಹಿತ ರಾಜ್ಯದ ಸಮಸ್ತ ವ್ಯವಸ್ಥೆಯ ಹಿತವನ್ನು ಗಮನಿಸಿ ವಿಶ್ವಾಸದಿಂದಲೇ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಸಿದ್ಧರಾಮ ಹೊನ್ಕಲ್, ಗ್ರಾಮ ಪಂಚಾಯಿತಿನಲ್ಲಿ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ಪ್ರಾರಂಭಿಸಿ, ಒಂದೊಂದೆ ಮೆಟ್ಟಿಲು ಏರುತ್ತಾ, ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಅವರು ಅನುಭವಿಸಿದ ನೋವು, ನಲಿವು ಎಲ್ಲವನ್ನು ಕೃತಿಯಲ್ಲಿ ಹಂಚಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಯಪ್ಪಗೌಡ ಹುಡೇದ ದಂಪತಿಗಳಿಗೆ ಸನ್ಮಾನಿಸಲಾಯಿತು. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೆಡಗಿಮದ್ರಿ ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಪ್ರಮುಖರಾದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾÀಪುರ, ಮಲ್ಲನಗೌಡ ಪರಿವಾಣ, ನೌಕರರ ಸಂಘದ ಮಲ್ಲಿಕಾರ್ಜುನ ಬಳ್ಳಾರಿ, ಎಂ.ವಿ.ರುದ್ರಪ್ಪ, ಸೋಮಶೇಖರ ಬಿರಾದರ, ಬಸವರಾಜ, ಮೋಹನಕುಮಾರ, ಮಹಿಪಾಲರೆಡ್ಡಿ, ಮಾಳಿಂಗರಾಯ ಬಿದರಾಣಿ, ಪಾಟೀಲ ಬಸವನಗೌಡ ಹುಣಸಗಿ, ಬಸನಗೌಡ ಚಳ್ಳಿಕಟ್ಟಿ, ಭೀಮನಗೌಡ ಬಿರಾದಾರ, ಶರಣಬಸವ, ಭೀಮನಗೌಡ, ಬಸವರಾಜ ಯಾಳಗಿ, ಶಾಂತರೆಡ್ಡಿ, ಸಾಯಿಬಾಬಾ ಅಣಬಿ, ಗೋವಿಂದ ರಾಠೋಡ ಸೇರಿದಂತೆ ಇತರರಿದ್ದರು. ಲಕ್ಷ್ಮಣ ಲಾಳಸೇರಿ ನಿರೂಪಿಸಿದರು. ಕಾವೇರಿ ಪಾಟೀಲ ಸ್ವಾಗತಿಸಿದರು, ಪವನ ಕುಲಕರ್ಣಿ, ಚಂದ್ರಶೇಖರ, ಚಂದ್ರಕಲಾ, ಸಂಗೀತ ಸೇವೆ ನಡೆಸಿಕೊಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ನೌಕರರು, ಅಭಿಮಾನಿಗಳು ಭಾಗವಹಿಸಿದ್ದರು.