ಕೆಲ ಕಾವಿಧಾರಿಗಳು ವಿಕಾರಾನಂದರಾಗಿದ್ದಾರೆ – ಬಹುಭಾಷಾ ನಟ ಪ್ರಕಾಶ್ ರೈ ವಿಷಾದ
ಶಿರಸಿ: ನಾನು ಚಿಕ್ಕವನಿದ್ದಾಗಿನಿಂದಲೂ ಸ್ವಾಮಿ ವಿವೇಕಾನಂದರನ್ನು ಇಷ್ಟ ಪಡುತ್ತಿದ್ದೆ. ಕಾವಿಧಾರಿಗಳಿಗೆ ಹೆಚ್ಚು ಗೌರವ ಕೊಡುತ್ತಿದ್ದೆ. ಆದರೆ, ಇತ್ತೀಚೆಗೆ ಕೆಲ ಕಾವಿಧಾರಿಗಳು ವಿಕಾರನಂದರಾಗಿದ್ದಾರೆ. ಕೆಲ ಸ್ವಾಮಿಗಳು ರಾಜಕೀಯ ಅಖಾಡಕ್ಕಿಳಿದು ಚುನಾವಣೆಗೆ ಸ್ಪರ್ಧಿಸುತ್ತೇವೆ ಎನ್ನುವ ಹೇಳಿಕೆ ನೀಡಿದ್ದಾರೆ. ಅಂಥ ಸ್ವಾಮಿಗಳನ್ನು ನಾವು ಜೋಕರ್ಸ್ ಗಳಂತೆ ನೋಡಬೇಕಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ವಿಷಾದ ವ್ಯಕ್ತಪಡಿಸಿದ್ದಾರೆ.
ಶಿರಸಿ ಪಟ್ಟಣದಲ್ಲಿ ನಡೆದ ನಮ್ಮ ಸಂವಿಧಾನ ಹೆಮ್ಮೆ ವಿಚಾರ ಕುರಿತು ನಡೆದ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ಮಾತನಾಡಿದರು. ಈ ವೇಳೆ ಮತ್ತೊಮ್ಮೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ ರೈ ಸಂವಿಧಾನ ಬದಲಿಸುವ ಮಾತನಾಡುವವರಿಗೆ ಕನಿಷ್ಠ ಶಿಕ್ಷಣವೂ ಇದ್ದಂತಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವವರು ನಿಜವಾದ ಹಿಂದೂಗಳೇ ಎಂದು ಪ್ರಶ್ನಿಸಿದರಲ್ಲದೆ ಅವರ ಬಣ್ಣ ಕೇಸರಿ ಅಲ್ಲ. ಬೇರೆ ಇರಬೇಕು ಎಂದರು.
ಗಲಾಟೆ ಮಾಡಿಸಿ, ಲಾಠಿ ಚಾರ್ಜ್ ಆಗುವಂತೆ ಮಾಡಿ ಎಂದು ನಮ್ಮ ನಾಯಕರು ಹೇಳಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳುತ್ತಾರೆ . ಹೀಗೆ ಪ್ರಚೋದನೆ ನೀಡುವುದು ಹಿಂದುತ್ವಾನಾ ಎಂದು ಪ್ರಶ್ನಿಸುವ ಮೂಲಕ ನಟ ಪ್ರಕಾಶ್ ರೈ ಅವರು ಮೈಸೂರು ಸಂಸದ ಪ್ರತಾಪ ಸಿಂಹ ವಿರುದ್ಧವೂ ಚಾಟಿ ಬೀಸಿದರು. ಕರಾವಳಿಯಲ್ಲಿ ಕೊಲೆ, ಪ್ರತೀಕಾರ ನಡೆಯುತ್ತಿವೆ. ಕೊಲೆಗಾರರು ಜೈಲು ಪಾಲಾಗುತ್ತಾರೆ. ಹತ್ಯೆಗೊಳಗಾದವರ ಕುಟುಂಬದವರು ನೋವು ಅನುಭವಿಸುತ್ತಾರೆ. ಆದರೆ, ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿರುವವರು ಮಾತ್ರ ಅಧಿಕಾರ ಹಿಡಿದು ಆರಾಮಾಗಿರುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.