ನೃತ್ಯ, ಹಾಡು ಹಳ್ಳಿ ಸಂಸ್ಕೃತಿ ಅನಾವರಣಃ ಗ್ರಾಮಸ್ಥರಲ್ಲಿ ಸಂತಸ
ಶಿಬಿರಾರ್ಥಿಗಳಿಂದ ಗ್ರಾಮದಲ್ಲಿ ವಿಭಿನ್ನ ಜಾಗೃತಿ ಜಾಥಾ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ನಗರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್ನಸ್ಸೆಸ್ ‘ಎ’ ಮತ್ತು ‘ಬಿ’ ಘಟಕಗಳ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಅಂತಿಮದಿನ ರಸ್ತಾಪುರ ಗ್ರಾಮದಲ್ಲಿ ಜಾತಾ ನಡೆಸುವ ಮೂಲಕ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ, ಪೊಲೀಯೊ, ಅನಕ್ಷರತೆ, ಏಡ್ಸ್, ಮತದಾನದ ಮಹತ್ವ, ಬಯಲು ಮುಕ್ತ ಶೌಚಾಲಯ, ಪರಿಸರ ಸ್ವಚ್ಛತೆ, ಹೊಗೆ ರಹಿತ ಹೊಲೆ, ಗ್ರಾಮೀಣ ಸಂಪನ್ಮೂಲಗಳ ಸದ್ಬಳಕೆ, ಕುಡಿತ, ಜೂಜಾಟ, ಮೌಢ್ಯತೆ, ಮೂಢ ನಂಬಿಕೆ, ಸಸಿಗಳನ್ನು ನೆಡುವುದು, ಹಳ್ಳಿಯ ಜಾನಪದ ಸಂಸ್ಕøತಿ, ಮುಂತಾದ ವಿಷಯಗಳ ಕುರಿತು ಹಲವಾರು ಘೋಷಣೆಗಳೊಂದಿಗೆ ಜಾಗೃತಿ ಜಾಥಾ ಕೈಗೊಂಡರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹಾಡು, ರೂಪಕಗಳು, ನೃತ್ಯ, ನಾಟಕಗಳ ಮೂಲಕ ನಾಗರಿಕರಲ್ಲಿ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತಿರುವುದು ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿನಿಯರು ಹಾಡಿದ ಬೀಸಕಲ್ಲು ಜಾನಪದ ಗೀತೆಗೆ ರಸ್ತಾಪುರ ಗ್ರಾಮದ ಹಿರಿಯಜ್ಜಿಯರು ಧ್ವನಿಗೂಡಿಸಿ ಖುಷಿಪಟ್ಟರು. ಸಾಲಿ ಕಲ್ತವರ ಬಾಯಿಂದ ಹಳ್ಳಿ ಪದಗಳನ್ನು ಹಾಡುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಗ್ರಾಮಸ್ಥ ಬಸವರಾಜ ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರ ಅಲ್ಲಾಯಿ ಹೆಜ್ಜೆ ಕುಣಿತಕ್ಕೆ ಗ್ರಾಮಸ್ಥರು ಹೆಜ್ಜೆ ಹಾಕಿ ಖುಷಿಪಟ್ಟರು. ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿನಿಯರು ಗ್ರಾಮ ಸಂಸ್ಕøತಿಯ ಪರಂಪರೆಯ ಅನಾವರಣಗೊಳಿಸಿದರು.
ಈ ಜಾಗೃತಾ ಜಾಥಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಿವಲಿಂಗಣ್ಣ ಸಾಹು, ಎನ್ನೆಸ್ಸೆಸ್ ಅಧಿಕಾರಿಗಳಾದ ಸಂಗಪ್ಪ ಎಸ್. ದಿಗ್ಗಿ, ಶುಭಲಕ್ಷ್ಮೀ ಬಬಲಾದಿ, ಉಪನ್ಯಾಸಕರಾದ ಭೀಮಪ್ಪ ಭಂಡಾರಿ, ಗಂಗಪ್ಪ ಹೊಸ್ಮನಿ, ಶೇಕಪ್ಪ ವಾರಿ, ರೇವಣಸಿದ್ಧೇಶ್ವರ ಅಂಗಡಿ, ದೇವಿಂದ್ರಪ್ಪ ಆಲ್ದಾಳ, ಅಶೋಕ ಶಹಬಾದಿ, ಯೋಗ ಶಿಕ್ಷಕ ಹಣಮಂತ ಚನ್ನೂರು, ಸತೀಶ ತುಳೇರ, ರಾಘವೇಂದ್ರ ಹಾರಣಗೇರಾ ಉಪಸ್ಥಿತರಿದ್ದರು.