ಹುಣಸಿಗಿ ತ್ರಿಶೂಲ ಸಿನಿಮಾ ಟಾಕೀಸ್ ಒಂದು ನೆನಪು : ಪಾಟೀಲ್ ಬರಹ
ನಮ್ಮೂರಿನ ಸಿನಿಮಾ ಟಾಕೀಸ್ ಸುತ್ತಾ .. ಒಂದು ಮೆಲಕು
ಹಲೋ..……….
ಕನ್ನಡ ಕಲಾಭಿಮಾನಿಗಳೇ….
ಕಲಾ ರಸಿಕರೆ…………
ಇತ್ತ ಕಡೆ ಸ್ವಲ್ಪೇ ಸ್ವಲ್ಪ ಲಕ್ಷ್ಯ ಕೊಟ್ಟು ಕೇಳೀ……………
ಇದೇ ನಿಮ್ಮ ಹುಣಸಗಿ ತ್ರಿಶೂಲ ಚಿತ್ರಮಂದಿರದಲ್ಲಿ…………….
ಸುಂದರ ಸಾಮಾಜಿಕ ಕನ್ನಡ ಸಿನಿಮಾಸ್ಕೋಪ್ ಚಿತ್ರ……….ರಾಮಾಚಾರಿ.
ರಾಮಾಚಾರಿ ಸಿನಿಮಾವನ್ನು ನೋಡಲು ಮರೆಯದಿರಿ, ಮರೆತು ಮರಮರನೆ ಮರುಗದಿರಿ.
ಇಂದು-ನಾಳೆ ಎನ್ನದೇ, ಇಂದೇ ಬಂದು ನಿಮ್ಮ ಬಂಧು-ಬಾಂಧವರನ್ನು ಕರೆತನ್ನಿ. ಚಿತ್ರದ ತಾರಾಬಳಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಕನಸಿನ ರಾಣಿ ಮಾಲಾಶ್ರೀ, ಲೋಕೇಶ್, ಪ್ರಕಾಶ್ ರೈ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಹೀಗೆ ಕೈಯಲ್ಲಿ ಮೈಕ್ ಹಿಡಿದು ಕೂಗುತ್ತಾ 3 ಚಕ್ರದ ಗಾಡಿಯ ಮೇಲೆ ಹೋಗುತ್ತಾ ಚಿತ್ರದ ಪ್ರಚಾರ ಮಾಡುತ್ತಿದ್ದ ಕಾಲವದು. ಗಾಡಿಯ ಎಡ ಬಲದಲ್ಲಿ ಸಿನಿಮಾ ಪೋಸ್ಟರ್‍ಗಳಿರುತ್ತಿದ್ದವು. ಬಹಳ ದಿನಗಳ ನಂತರ ಮೊನ್ನೆ ನನ್ನೂರಿನ ಸಿನಿಮಾ ಟಾಕೀಸ್‍ಗೆ ಹೋಗಿದ್ದೆ . ಆಗ ನನಗೆ ಕಾಡಿದ ಹಲವಾರು ಸಂಗತಿಗಳು ಹೀಗಿವೆ.
ಸುಮಾರು ನಾಲ್ಕು ದಶಕಗಳಿಂದ ಚಿತ್ರ ಪ್ರದರ್ಶಿಸುತ್ತಿರುವ ಗ್ರಾಮೀಣ ಪ್ರದೇಶದ ಚಿತ್ರಮಂದಿರವಿದು. 80-90 ರ ದಶಕದಲ್ಲಿ ರಾಜ್, ಅಂಬರೀಷ್, ವಿಷ್ಣುವರ್ಧನ್, ಶಂಕರ್ ನಾಗ್,ರವಿಚಂದ್ರನ್, ಶಿವರಾಜ್‍ಕುಮಾರ್ ಚಿತ್ರಗಳೇ ಹೆಚ್ಚು ಓಡುತ್ತಿದ್ದವು. ಮಯೂರ, ಬಬ್ರುವಾಹನ, ಭಕ್ತ ಪ್ರಹ್ಲಾದ, ರಾಮಾಚಾರಿ, ನಂಜುಂಡಿ ಕಲ್ಯಾಣ, ಎಸ್.ಪಿ.ಸಾಂಗ್ಲಿಯಾನ್, ಜನುಮದ ಜೋಡಿ, ಒಡಹುಟ್ಟಿದವರು, ರಾಣಿ-ಮಹಾರಾಣಿ, ಇಂದ್ರಜಿತ್, ಯಜಮಾನ, ಕನಸುಗಾರ, ತವರಿಗೆ ಬಾ ತಂಗಿ ಚಿತ್ರಗಳು ಹುಣಸಗಿಯಂತಹ ಗ್ರಾಮೀಣ ಪ್ರದೇಶದಲ್ಲಿ 50 ದಿನಗಳವರೆಗೆ ಪ್ರದರ್ಶನ ಕಂಡಿವೆ. ಕುಳಿತುಕೊಳ್ಳಲು ಜಾಗವಿಲ್ಲದೆ ನಿಂತು ನೋಡುತ್ತಿದ್ದವರು ಅದೆಷ್ಟೋ ಜನ.
ಚಿತ್ರ ಶುರುವಾಗುವುದಕ್ಕೂ ಮುನ್ನ, “ಗಜಮುಖನೆ ಗಣಪತಿಯೇ ನಿನಗೆ ವಂದನೆ” ಎಂದು ಹಾಡು ಶುರುವಾದರೆ ಸಾಕು, ನಡೀಲೇ ಜಲ್ದಿ ಗಜಮುಖನೆ ಚಾಲೂ ಆಯ್ತು, ಸಿನಿಮಾ ಚಾಲೂ ಆಗ್ತಾದ, ಜಲ್ದಿ ಟಿಕೀಟ್ ತಗೋ ಎನ್ನುತ್ತಾ ಚಿತ್ರಮಂದಿರದತ್ತ ದೌಡಾಯಿಸುತ್ತಿದ್ದರು. ಮಹಿಳೆಯರೂ ಕೂಡ ಅಷ್ಟೇ ಉತ್ಸಾಹದಿಂದ ಚಿತ್ರಮಂದಿರಕ್ಕೆ ಬರುತ್ತಿದ್ದರು.
“ಏಕದಂತ”ನ ಹಾಡು ಶುರುವಾಗದೆ ಸಿನಿಮಾ ಶುರುವಾದದ್ದು ಚಿತ್ರಮಂದಿರದ ಇತಿಹಾಸದಲ್ಲೇ ಇಲ್ಲ….. ! ಚಿತ್ರ ಮುಗಿದ ಕೂಡಲೇ “ಕನ್ನಡದ ರವಿಮೂಡಿ ಬಂದಾ” ಎನ್ನುವ ಹಾಡು ಬಹಳ ವರ್ಷಗಳಿಂದ ಕೇಳುತ್ತಲಿದ್ದೇವೆ. ನೆಚ್ಚಿನ ಹೀರೋ ಪರದೆಯ ಮೇಲೆ ಫೈಟ್ ಮಾಡುತ್ತಿದ್ದರೆ, ಇಲ್ಲವೆ ಡ್ಯಾನ್ಸ್ ಮಾಡುತ್ತಿದ್ದರೆ, ಪರದೆಯ ಮೇಲೆ ಚಿಲ್ಲರೆ ಹಣ ತೂರಿ ಖುಷಿ ಪಡುತ್ತಿದ್ದರು. ಇನ್ನು ಆ ಹಣ ತೆಗೆದುಕೊಳ್ಳಲು ಗಾಂಧಿ ಕ್ಲಾಸ್‍ನ ಜನ ಮುಗಿಬೀಳುತ್ತಿದ್ದರು.
ರವಿವಾರ ಊರಲ್ಲಿ ಸಂತೆ ಇರುತ್ತದೆ. ಸಂತೆಗೆ ಬಂದ ಸಾವಿರಾರು ಜನ ಚಿತ್ರಮಂದಿರಕ್ಕೂ ಬರುತ್ತಾರೆ. ಪ್ರತಿದಿನ ಮೂರು ಪ್ರದರ್ಶನ ಹಾಗೂ ರವಿವಾರದಂದು 4 ಪ್ರದರ್ಶನ ಕಡ್ಡಾಯ.
ವಿಶೇಷ ದಿನಗಳಲ್ಲಿ ಆಯಾ ಹಬ್ಬಗಳಿಗೆ ಸೂಕ್ತವಾಗುವ ಚಿತ್ರಗಳನ್ನೇ ತರಿಸಿ ಪ್ರದರ್ಶಿಸುವದು ಇಲ್ಲಿನ ವಾಡಿಕೆ.
ಉದಾಹರಣೆಗೆ, ಶಿವರಾತ್ರಿಯಂದು ಶಿವಮೆಚ್ಚಿದ ಕಣ್ಣಪ್ಪ, ಶ್ರೀಮಂಜುನಾಥ ಚಿತ್ರ ಪ್ರದರ್ಶಿಸಿದರೆ, ಸ್ವಾತಂತ್ರ್ಯೋತ್ಸವದಂದು ಮುತ್ತಿನ ಹಾರ,ವೀರಪ್ಪನಾಯಕ, ಸೈನಿಕ ಬಾರ್ಡರ್‍ದಂತಹ ಚಿತ್ರಗಳನ್ನು ಪ್ರದರ್ಶಿಸುವರು. ಪ್ರತಿ ಸೋಮವಾರ ಹೊಸ ಸಿನಿಮಾ ಹಾಕುತ್ತಿದ್ದರು. ಊರಲ್ಲೆಲ್ಲ ಪೋಸ್ಟರ್ ಹಚ್ಚುವರು. ಪ್ರತಿ ಶುಕ್ರವಾರ ಹಿಂದಿ ಚಿತ್ರ ಫಿಕ್ಸ. ಇನ್ನು ತಿಂಗಳಿಗೊಮ್ಮೆಯಾದರೂ ವಯಸ್ಕರ ಚಿತ್ರ ಫಿಕ್ಸ!!!.
ಸಿನಿಮಾ ಪ್ರದರ್ಶನದ ವೇಳೆ ಕರೆಂಟ್ ಹೋದರೆ, ಇಲ್ಲವೆ ರೀಲ್‍ನಲ್ಲಿ ಸಮಸ್ಯೆಯಾಗಿ ಸ್ವಲ್ಪ ಹೊತ್ತು ಬಂದ್ ಆದ್ರೆ ಮುಗೀತು. “ಲೇ……….ಬೋ…………ಮಗನ್ಯಾ, ಲೇ………..ಸೂ………..ಮಗನ್ಯಾ ಜಲ್ದಿ ಕರೆಂಟ್ ಹಾಕಲೇ” ಇವು ಪ್ರೇಕ್ಷಕ ಮಹಾಶಯರಿಂದ ರೀಲ್ ಬಿಡುವ ವ್ಯಕ್ತಿಗೆ ಸಲ್ಲುತ್ತಿದ್ದ ಆಕ್ರೋಶದ ನುಡಿಗಳಿವು.
ಪಾಪ ಬಡಪಾಯಿ ರೀಲ್ ಬಿಡುವವನ ಕೈಲಿ ಏನಿದೆ.? ಕರೆಂಟ್ ಹೋದ್ರೆ ಅವನೇನ್ ಮಾಡ್ಬೇಕು. ಜನರೇಟರ್ ಆನ್ ಮಾಡುವವರೆಗೂ ಈ ಬೈಗುಳಗಳು ತಪ್ಪಿದ್ದಲ್ಲ. ಚಿತ್ರಮಂದಿರ ಪ್ರಾರಂಭಿಸಿದಾಗಿನಿಂದ ಗಂಡಸರಿಗೆ ಮತ್ತು ಹೆಂಗಸರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನಗಳಿದ್ದವು. ದೊಡ್ಡದಾದ ಅಡ್ಡ ಗೋಡೆ ನಿರ್ಮಿಸಿದ್ದರು. ಪರದೆಯ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದೆವು. ಅದರ ಹಿಂದೆ ಬೆಂಚ್‍ಗಳು, ಕಬ್ಬಿಣದ ಕುರ್ಚಿಗಳಿದ್ದವು.
ಚಿತ್ರದ ವಿರಾಮದ ಸಂದರ್ಭದಲ್ಲಿ ಹೊರಗೆ ನಿಂತ ಮುಸ್ಲಿಂ ವ್ಯಕ್ತಿಯೊಬ್ಬ ಗೋಲಿ ಸೋಡಾ ಬಾಟಲ್ ಹಿಡಿದು ಸುಂಯ್„„„ ಎಂದು ಗೋಲಿ ಹೊಡೀತಾ ಇದ್ದ. ಇನ್ನು ಬಾಯಾಡಿಸಲು ಕೆಂಪು ಉಂಡಿ, ಖಾರಾ ಸಿಗುವದು ಮಿಠಾಯಿ ಬಸವರಾಜನ ಅಂಗಡಿಯಲ್ಲಿ. ಹೊಟ್ಟೆ ಹಸಿದರೆ ಪಕ್ಕದಲ್ಲಿದೆ ವಗ್ಗರಣಿ, ಭಜಿ ಅಂಗಡಿ. ಅದರ ಪಕ್ಕದಲ್ಲಿ ಪಾನ್ ಬೀಡಾ ಕಟ್ಟುವವನ ಅಂಗಡಿ. ಇವರೆಲ್ಲ ಸುಮಾರು 3 ದಶಕಗಳಿಂದ ಅಲ್ಲಿಯೇ ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆ.
ಕಾಲ ಬದಲಾದಂತೆ ಜನರ ಅಭಿರುಚಿಗಳೂ ಬದಲಾಗುತ್ತಿವೆ. ಈ ಭಾಗದ ಸಮೃದ್ಧ ನೀರಾವರಿ ಪ್ರದೇಶ ಕಂಡ ಆಂಧ್ರದ ರೈತರು ಇಲ್ಲಿಗೆ ಬಂದು ಬೇಸಾಯ ಮಾಡಲು ಶುರುವಿಟ್ಟರು. ತಾವೂ ಬಂದರು, ತಮ್ಮವರನ್ನೂ ಕರೆತಂದರು. ತಮ್ಮ ಭಾಷೆ-ಸಂಸ್ಕøತಿ-ಸಿನಿಮಾವನ್ನೂ ತಂದರು. ಆಗ ನಮ್ಮ ಸಿನಿಮಾ ಮಂದಿರಕ್ಕೆ ತೆಲುಗಿನ ಚಿರಂಜೀವಿ, ಬಾಲಕೃಷ್ಣ, ಜ್ಯೂನಿಯರ್ ಎನ್.ಟಿ.ಆರ್., ಮಹೇಶ್ ಬಾಬು ಚಿತ್ರಗಳನ್ನು ಆಂಧ್ರದವರಷ್ಟೇ ಅಲ್ಲದೇ ನಮ್ಮ ನೆಲದ ರೈತಾಪಿ ವರ್ಗದವರು, ಕೂಲಿ ಕಾರ್ಮಿಕರು ಸರದಿ ಸಾಲಿನಲ್ಲಿ ನಿಂತು ನೋಡುತ್ತಿದ್ದಾರೆ.
ಟಿ.ವಿ.ಚಾನಲ್‍ಗಳಲ್ಲಿ ಧಾರಾವಾಹಿಗಳು ಬರುವುದಕ್ಕೂ ಮುಂಚೆ ಮಹಿಳೆಯರು ಚಿತ್ರಮಂದಿರದೆಡೆಗೆ ಧಾವಿಸಿ ಬರುತ್ತಿದ್ದರು. ಈಗ ಏನಿದ್ದರೂ ಪುಟ್ಟ ಗೌರಿ ಮದುವೆ, ಲಕ್ಷ್ಮೀ ಬಾರಮ್ಮ, ಬ್ರಹ್ಮಗಂಟು, ಎರಡು ಕನಸು, ಸಿಂಧೂರ, ಮನೆದೇವ್ರು, ಅಗ್ನಿಸಾಕ್ಷಿಯಂತಹ ಧಾರಾವಾಹಿಗಳನ್ನು ನೋಡುತ್ತಾ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಜನರ ಅಭಿರುಚಿಗಳು ಬದಲಾದಂತೆ ಚಿತ್ರಮಂದಿರಗಳು ಬದಲಾಗುತ್ತಿವೆ. ಸದ್ಯ ಹುಣಸಗಿಯಂತಹ ಗ್ರಾಮೀಣ ಪ್ರದೇಶದಲ್ಲೂ ರಾಜ್ಯಾದ್ಯಂತ, ರಾಷ್ಟ್ರಾದ್ಯಂತ, ಏಕಕಾಲಕ್ಕೆ ಬಿಡುಗಡೆಗೊಳ್ಳುವ ಸಿನಿಮಾಗಳನ್ನು ನೋಡಬಹುದು. ಸದ್ಯ ಚಿತ್ರಮಂದಿರಕ್ಕೆ ಸೆಟಲೈಟ್ ತಂತ್ರಜ್ಞಾನ ಬಳಸಲಾಗಿದೆ ಹೀಗಾಗಿ ನಾವು ಹೊಸ ಹೊಸ ಚಿತ್ರಗಳನ್ನು ನೋಡಬಹುದು. ಉಪೇಂದ್ರ, ದರ್ಶನ್,ಸುದೀಪ್,ಪುನೀತ್ ರಾಜ್ ಕುಮಾರ, ಯಶ್,ಗಣೇಶ್‍ರ ಸಿನಿಮಾಗಳನ್ನು ರಾಜ್ಯಾದ್ಯಂತ ಏಕಕಾಲಕ್ಕೆ ಪ್ರದರ್ಶನಗೊಳ್ಳುತ್ತವೆ.
ಚಿತ್ರಮಂದಿರದಲ್ಲಿ ಎಲ್ಲೆಡೆ ಕುರ್ಚಿಗಳನ್ನು ಹಾಕಿದ್ದಾರೆ. ಸೀಟು ಮೆತ್ತಗಿಲ್ಲದಿದ್ದರೂ ಕಂಫರ್ಟ್ ಆಗಿದೆ. ಮಹಿಳೆಯರು ಮತ್ತು ಗಂಡಸರ ಮಧ್ಯವಿದ್ದ ಕಂದಕವನ್ನು ತೆಗೆದುಹಾಕಿದ್ದಾರೆ.!!! ಇನ್ನು ಸ್ವಲ್ಪಮಟ್ಟಿಗೆ ಸುಧಾರಿಸಿದರೆ ಸಾಕು. ಒಳ್ಳೆಯ ಚಿತ್ರಮಂದಿರವೆನಿಸಿಕೊಳ್ಳುತ್ತದೆ.
ಸಿನಿಮಾ ನೋಡಿ ಮನೆಗೆ ಬಂದ್ಮೇಲೆ ಮತ್ತೆ ಕಾಡಿದ್ದೇನೆಂದರೆ, “ಗಜಮುಖನೆ ಗಣಪತಿಯೇ ನಿನಗೆ ವಂದನೆ ಗೀತೆ, ಕನ್ನಡದ ರವಿಮೂಡಿ ಬಂದಾ,” ಗೀತೆ ಈಗಲೂ ಕೇಳುತ್ತೇವೆ.
ಆದರೆ.. ಹಲೋ…………
ಕನ್ನಡದ ಕಲಾಭಿಮಾನಿಗಳೇ, ಕಲಾ ರಸಿಕರೇ………
ಇತ್ತ ಕಡೆ ಸ್ವಲ್ಪೇ ಸ್ವಲ್ಪ ಲಕ್ಷ್ಯ ಕೊಟ್ಟು ಕೇಳೀ……………
ಇದೇ ನಿಮ್ಮ ಹುಣಸಗಿ ತ್ರಿಶೂಲ ಚಿತ್ರಮಂದಿರದಲ್ಲಿ…………….
ಎಂದು ಮೈಕಲ್ಲಿ ಕೂಗುತ್ತಾ ಹೋಗುವ ವ್ಯಕ್ತಿಯ ಧ್ವನಿ ಕೇಳಿಸುತ್ತಿಲ್ಲ. ಕಾರಣ “ಕಾಲ ಬದಲಾಗಿದೆ” !!.
ಪಾಟೀಲ.ಬಸನಗೌಡ.ಎಸ್.ಹುಣಸಗಿ.
9900771427.
Hmmm really sweet memories.
Tq for reminding of golden days.
Now Hunasgi changed a lot except those two songs.
Hmmm really sweet memories.
Tq for reminding of golden days.
Now Hunasgi changed a lot except those two songs.Tq Bassu.
ಸಹೋದರ ನೀವೊಬ್ಬರು ಇತಿಹಾಸಕಾರರಾಗಿ,ಸಂಶೋಧಕರಾಗಿ ಮುನ್ನಡೆಯುತ್ತಿದ್ದಿರಿ..ಅದರಲ್ಲೂ ಬರಹವೂ ರಸವತ್ತಾದದ್ದು..ಕಾದಂಬರಿಯನ್ನು ಬರೆಯಬಲ್ಲ ಸಾಹಿತ್ಯ ದ ಕಾವು ನಿಮ್ಮ ಬರಹದಲ್ಲಿದೆ.ಇದು ನಮ್ಮೆಲ್ಲರಿಗೂ ಹೆಮ್ಮೆ..ಹುಣಸಗಿಯ ತ್ರಿಶೂಲ ಟಾಕೀಸ್ ನೆನಪು ಮನೋಜ್ಞವಾಗಿ ಮೂಡಿಬಂದಿದೆ.
ಧನ್ಯವಾದಗಳು.
ಇಂತಿ ಪ್ರೀತಿಯ ಸಹೋದರ
ಲೇಖನ ತುಂಬಾ ಚೆನ್ನಾಗಿದೆ. ಹಳೆಯ ನೆನಪು ಮರುಕಳಿಸಿದ ನಿಮಗೆ ಧನ್ಯವಾದಗಳು
ಆ 3 ಚಕ್ರದ ಗಾಡಿಯ ಹಿಂದೆ ಹಿಂದೆ ಬೆನ್ನಟ್ಟಿ ಓಡಾಡಿದ ಘಳಿಗೆಗಳು ನೆನಪಿಗೆ ಬಂದವು.
Thanks a lot for this nice writeup👏👏👏
Thank u sir
Superb,Fanatastic, Mind blowing.Brother
Thank u one and all
Thank u one & all