ಪ್ರಮುಖ ಸುದ್ದಿ
ಬಾವಿಗೆ ಬಿದ್ದು ವೃದ್ಧ ಮಹಿಳೆಯ ಸಾವು
ಶಹಾಪುರಃ ಬಾವಿಗೆ ಬಿದ್ದು ವೃದ್ಧ ಮಹಿಳೆಯ ಸಾವು
ಯಾದಗಿರಿಃ ವೃದ್ಧ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಯಿಂದಾಗಿ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೊಂದೆನೂರ ಗ್ರಾಮದಲ್ಲಿ ನಡೆದಿದೆ. ಮಲ್ಲಮ್ಮ ಮ್ಯಾಗೇರಿ (70) ಎಂಬ ವೃದ್ಧೆಯೇ ಬಾವಿಗೆ ಬಿದ್ದು ಸಾವನ್ನಪ್ಪಿದ್ದವರು ಎಂದು ಗುರುತಿಸಲಾಗಿದೆ. ಮಕ್ಕಳಾಗದ ಕೊರಗು ಹಾಗೂ ವೃದ್ಧಾಪ್ಯ ಜೀವನದಲ್ಲಿ ನೋಡಿಕೊಳ್ಳುವವರು ಯಾರು ಇಲ್ಲದಿರುವ ಕಾರಣದಿಂದ ಜಿಗುಪ್ಸೆಗೊಂಡಿದ್ದ ಅನಾಥ ವೃದ್ಧೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಈ ಹಿಂದೆ ಹಲವಾರು ಬಾರಿ ಗ್ರಾಮಸ್ಥರ ಎದುರಿಗೆ ವೃದ್ಧೆ ಅನಾಥ ಭಾವದ ನೋವನ್ನು ತೋಡಿಕೊಂಡಿದ್ದರೆಂದು ತಿಳಿದು ಬಂದಿದೆ. ನಿನ್ನೆ ಸೋಮವಾರ ಏಕಾಏಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ವಡಿಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ನೆರವಿನಿಂದ ಶವ ಹೊರತೆಗೆಯಲಾಗಿದೆ. ಈ ಕುರಿತು ವಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.