ನೀವು ಯಾರ ಪರ? ಬಹುಭಾಷಾ ನಟ ಪ್ರಕಾಶ್ ರೈಗೊಂದು ಬಹಿರಂಗ ಪತ್ರ!
-ಮಲ್ಲಿಕಾರ್ಜುನ ಮುದನೂರ್
ಪ್ರಿಯ ಪ್ರಕಾಶ್ ರೈ,
ನಮಸ್ಕಾರ ಗುರುವೇ, ನೀವು ರಂಗಭೂಮಿಯಿಂದ ಬಂದಿರುವ ಅದ್ಭುತ ಕಲಾವಿದರು. ಜೀವನದಲ್ಲೂ ಸಾಕಷ್ಟು ನೋವು ನಲಿವು ಕಂಡವರು. ನಾವು ಗ್ರಹಿಸಿದಂತೆ ಬಹುಭಾಷೆ ಬಲ್ಲವರು. ಸಕಲ ಕಲೆಗಳನ್ನು ಕರಗತ ಮಾಡಿಕೊಂಡಿರುವ ನಿಮಗೆ ಸಾಮಾಜಿಕ ಕಳಕಳಿ ಇದೆ. ಸಮಾಜೋದ್ಧಾರದ ಪರಿಕಲ್ಪನೆಯೂ ಇದೆಯಲ್ಲದೆ ಸಮಕಾಲೀನ ಸ್ಥಿತಿಗತಿಗಳ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದೇ ನಾವು ಭಾವಿಸಿದ್ದೇವೆ. ಪರಿಣಾಮ ಸೆಲೆಬ್ರಿಟಿಗಳ ಪೈಕಿ ನೀವು ನಿಮ್ಮದೇ ಆದ ಸ್ಥಾನಮಾನ ಗಳಿಸಿದ್ದೀರಿ. ರಾಜಕಾರಣದಲ್ಲಿರುವ ಕೆಲವೇ ಕೆಲವು ಪ್ರಬುದ್ಧ ರಾಜಕಾರಣಿಗಳಂತೆ ನೀವು ಸಹ ಪ್ರಬುದ್ಧ ಕಲಾವಿದರು ಎಂದರೆ ತಪ್ಪಾಗದು.
ಜನಪರ ಕಾಳಜಿಯುಳ್ಳ ನಿಮ್ಮಲ್ಲಿ ಹೋರಾಟದ ಕಿಚ್ಚಿದೆ, ನೇರ ನಿಷ್ಠುರವಾದಿಗಳಾದ ನಿಮ್ಮಲ್ಲಿ ಜನವಿರೋಧಿ ನೀತಿ ಕಂಡಾಕ್ಷಣ ಸಹಜವಾಗಿಯೇ ರಕ್ತ ಕುದಿಯುತ್ತದೆ. ಹಿಂದೆ ಮುಂದೆ ನೋಡದೆ ವಾಗ್ಬಾಣ ಬಿಡುತ್ತೀರಿ. ಆ ಮೂಲಕ ಸ್ವಚ್ಛ, ಸುಂದರ ಮತ್ತು ಸಮ ಸಮಾಜ ನಿರ್ಮಾಣಕ್ಕಾಗಿ ನೀವು ಹಾತೊರೆಯುತ್ತೀರಿ. ನಿಮ್ಮೊಳಗಿನ ಕ್ರಾಂತಿಕಾರಿ ನನಗೂ ಇಷ್ಟ, ನನ್ನಂತ ಲಕ್ಷಾಂತರ ಜನರಿಗೂ ಇಷ್ಟ.
ಆದರೆ, ಕಷ್ಟ ಆಗುತ್ತಿರುವುದೇನೆಂದರೆ ನೀವು ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲುತ್ತಿದ್ದೀರಿ. ಮತ್ತು ಕೇವಲ ಬಿಜೆಪಿಯವರನ್ನು ಟಾರ್ಗೇಟ್ ಮಾಡುತ್ತಿದ್ದೀರಿ ಎಂಬುದು. ಸರಿ ಅದನ್ನೂ ಒಪ್ಪಿಕೊಳ್ಳೋಣ ಕೋಮುವಾದಿಗಳ ವಿರುದ್ಧ ಸಮರ ಸಾರಿದ್ದೀರಿ ಎಂದೇ ಭಾವಿಸೋಣ ಅಂದರೆ ಸಚಿವ ರಮಾನಾಥ್ ರೈ ಅವರ ಜತೆ ಸಾಮರಸ್ಯ ನಡಿಗೆ ಮಾಡುತ್ತೀರಿ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತೀರಿ. ಸಚಿವ ಯು.ಟಿ.ಖಾದರ್ ನೀವಿದ್ದ ವೇದಿಕೆಯಲ್ಲೇ ಪ್ರಕಾಶ್ ರೈ ಮುಂದಿನ ದಿನಗಳಲ್ಲಿ ಶಾಸಕ, ಸಂಸದರಾಗ್ತಾರೆ ಅಂದಾಗ ನೀವು ಸುಮ್ಮನೇ ಕೂಡುತ್ತೀರಿ.
ಸಿಎಂ ಮತ್ತು ನೀವು ಪ್ರೆಸ್ ಕ್ಲಬ್ ನಿಂದ ವರ್ಷದ ವ್ಯಕ್ತಿ ಗೌರವ ಪಡೆದಾಗಲೂ ಸಿಎಂ ಸಿದ್ಧರಾಮಯ್ಯ ಅವರೇ ನಿಮ್ಮ ಹೋರಾಟ ಮುಂದುವರೆಸಿ ನಿಮ್ಮೊಂದಿಗೆ ನಾವಿದ್ದೇವೆ ಅಂತ ನಿಮಗೇಳುತ್ತಾರೆ. ನೀವು ಸಹ ಅದೇ ವೇದಿಕೆಯಲ್ಲಿ ನನಗೆ ರಾಜಕೀಯಕ್ಕೆ ಬರುವಂತೆ ತೊಡೆತಟ್ಟಿದರೆ ಬಂದೇ ಬಿಡುತ್ತೇನೆ ಅಂತ ಹೇಳಿಬಿಡುತ್ತೀರಲ್ಲದೆ ಮತ್ತೆ ಮತ್ತೆ ಬಿಜೆಪಿ ವಿರುದ್ಧ ಮಾತ್ರ ವಾಗ್ದಾಳಿ ನಡೆಸುತ್ತಿದ್ದೀರಿ.
ನಿಜಕ್ಕೂ ನೀವು ಯಾವುದೋ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಓಲೈಕೆಯಲ್ಲಿ ತೊಡಗಿದ್ದೀರಾ. ನಿಮ್ಮೊಳಗಿನ ರಾಜಕಾರಣಿ ಕಮಲ ಪಕ್ಷದ ವಿರುದ್ಧ ಮಾತ್ರ ಸಮರ ಸಾರಿದ್ದಾನಾ. ನಿಮ್ಮ ಹೋರಾಟ ಸಮಾಜೋದ್ಧರಾಕ್ಕಾಗಿಯೋ ಅಥವಾ ಕಾಂಗ್ರೆಸ್ ಮತ್ತು ನಿಮ್ಮ ಸ್ವಅಭಿವೃದ್ಧಿಗಾಗಿಯೋ ಹೇಳಿಬಿಡಿ. ನೀವು ಒಂದು ವೇಳೆ ರಾಜಕೀಯಕ್ಕೆ ಎಂಟ್ರಿ ಆಗಿದ್ದೇ ಆದಲ್ಲಿ ಈವರೆಗಿನ ನಿಮ್ಮ ಹೋರಾಟ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತೆಯೇ ಸರಿ.
ನಿಜ ಹೇಳ್ತೀನಿ ಗುರುವೇ, ನಿಮ್ಮ ಈಗಿನ ಸ್ಥಾನಮಾನಕ್ಕೆ ಹೋಲಿಸಿದರೆ ಶಾಸಕ, ಸಚಿವ ಸ್ಥಾನ ದೊಡ್ಡದಲ್ಲ. ನೀವು ಪ್ರಬುದ್ಧ ಕಲಾವಿದರಾಗಿ ಹೇಳುವ ಮಾತಿಗೂ, ರಾಜಕಾರಣಿಯಾಗಿ ಹೇಳುವ ಮಾತಿಗೂ ತುಂಬಾ ವ್ಯತ್ಯಾಸವಿದೆ. ನೀವು ಬಹುಭಾಷಾ ನಟ ಪ್ರಕಾಶ್ ರೈ ಆಗಿ ಹೇಳಿದಾಗ ಲಕ್ಷಾಂತರ ಜನ ಸೈ ಅಂತಾರೆ. ಅದೇ ಮಾತು ರಾಜಕಾರಣಿಯಾಗಿ ಹೇಳಿದಾಗ ಬೊಗಳೆ ಅಂತಾರೆ. ವರನಟ ಡಾ.ರಾಜಕುಮಾರ್ ಗಳಿಸಿದ ಜನಪ್ರಿಯತೆಗೆ ಅವರು ಎಂದೋ ರಾಜ್ಯದ ಮುಖ್ಯಮಂತ್ರಿ ಆಗಬಹುದಿತ್ತು. ಹಾಗಾಗಿದ್ದರೆ ಈವತ್ತು ರಾಜಕುಮಾರ್ ಅವರಂತ ರಾಜಕುಮಾರ್ ಸಹ ರಾಜಕುಮಾರ್ ಆಗಿ ಉಳಿಯುತ್ತಿರಲಿಲ್ಲ ಅಲ್ಲವೇ.
ಒಂದು ಕ್ಷಣ ಯೋಚಿಸಿ. ಕೊನೆಯ ಮಾತು ಹೇಳಬೇಕೆಂದರೆ ನಿಜಕ್ಕೂ ನಿಮಗೆ ಉತ್ತಮ ಸಮಾಜ ಕಟ್ಟುವ ಪರಿಕಲ್ಪನೆ ಇದ್ದಲ್ಲಿ ಯಾವುದೇ ಪಕ್ಷದ ಜತೆ ರಾಜಕಾರಣಕ್ಕೆ ಇಳಿಯದೇ ಸಮಾಜಿಕ ಹೋರಾಟದಲ್ಲಿ ತೊಡಗುವುದು ಒಳಿತು. ಆಗ ಮಾತ್ರ ನೀವು ಸ್ವಲ್ಪ ಮಟ್ಟಿಗಾದರೂ ಉತ್ತಮ ಕೆಲಸ ಮಾಡಲು ಸಾಧ್ಯ. ಇಲ್ಲವಾದಲ್ಲಿ ನೀವು ಇಷ್ಟು ದಿನ ಕೋಮುವಾದಿಗಳ ವಿರುದ್ಧ ಕಿಡಿ ಕಾರಿದ್ದು ಸಹ ರಾಜಕೀಯ ಲಾಭಕ್ಕಾಗಿ. ರಾಜಕಾರಣಕ್ಕೆ ಎಂಟ್ರಿಯಾಗುವ ವೇದಿಕೆ ನಿರ್ಮಿಸಿಕೊಳ್ಳಲಿಕ್ಕಾಗಿ ಎಂಬ ಭಾವನೆ ಜನಮಾನಸದಲ್ಲಿ ಅಚ್ಚುಹೊತ್ತಲಿದೆ. ಪರಿಣಾಮ ನಿಜ ಜೀವನದಲ್ಲೂ ನೀವು ಖಳನಾಯಕರಾಗುತ್ತೀರಿ!? ಹೀಗಾಗಿ, ಮೊದಲು ನೀವು ಸ್ಪಷ್ಟಪಡಿಸಿಬಿಡಿ. ನೀವು ಯಾರ ಪರ, ಜನಪರವೋ, ಒಂದು ಪಕ್ಷದ ಪರವೊ? ಒಂದು ಪಕ್ಷದ ವಿರುದ್ಧವೋ? ನಿಮ್ಮ ನಿಲುವೇನು? ನಿಮ್ಮ ಒಲವೇನು?
ಏನಂತೀರಿ?