ಹಿಂದುಪರ ಸಂಘಟನೆಗಳ ಯುವಕರ ವಿರುದ್ಧ ಗೂಂಡಾ ಕಾಯ್ದೆ ಬಳಕೆ ಅರವಿಂದ ಉಪ್ಪಿನ್ ಆಕ್ರೋಶ
ಗೂಂಡಾ ಕಾಯ್ದೆಯಡಿ ಹೆಸರು ಸೇರ್ಪಡೆಗೆ ಯಾವ ಮಾನದಂಡ ಅನುಸರಿಸಲಾಗಿದೆ.?
ಯಾದಗಿರಿಃ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖ ಯುವಕರ ವಿರುದ್ಧ ಗೂಂಡಾ ಕಾಯ್ದೆಯನ್ನು ಬಳಸುವ ಮೂಲಕ ರಾಜ್ಯ ಸರ್ಕಾರ ಸಂಘಟನೆಯನ್ನು ನಿಷ್ಕ್ರೀಯತೆಗೊಳಿಸುವ ಹುನ್ನಾರ ನಡೆಸಿದೆ ಎಂದು ಎಬಿವಿಪಿ ಜಿಲ್ಲಾ ಮುಖಂಡ ಅರವಿಂದ ಉಪ್ಪಿನ್ ಕಿಡಿಕಾರಿದ್ದಾರೆ.
ವಿನಯವಾಣಿಯೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನನ್ನ ಹೆಸರು ಸೇರಿದಂತೆ ಎಬಿವಿಪಿ, ಶ್ರೀರಾಮ ಸೇನೆ ಸಂಘಟನೆಯ ಮುಖಂಡರ ಹೆಸರನ್ನು ಗೂಂಡಾ ಕಾಯ್ದೆಯಡಿ ಸೇರ್ಪಡೆ ಮಾಡಿದ್ದು, ಮೊನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಿದ್ದು, ಅದರಲ್ಲಿ ನಮ್ಮನ್ನೆಲ್ಲ ಕರೆದು ಉತ್ತಮ ನಡವಳಿಕೆ ರೂಪಿಸಿಕೊಳ್ಳುವಂತೆ ಎಚ್ಚರಿಕೆ ನೀಡುವ ಮೂಲಕ ನಮ್ಮ ಆತ್ಮ ಅಭಿಮಾನಕ್ಕೆ ಮುಜಗರ ತರುವಂತೆ ಮಾಡಲಾಗಿದೆ.
ನಮ್ಮನ್ನು ದೊಡ್ಡ ಕ್ರಿಮಿನಲ್ ಪಟ್ಟಿಯಲ್ಲಿ ತೂರಿಸಿ, ಈ ತರಹ ನಡೆಸಿಕೊಳ್ಳುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ಪೊಲೀಸ್ ಅಧಿಕಾರಿಗಳ ಯಾವುದೇ ತಪ್ಪಿಲ್ಲ. ರಾಜ್ಯ ಸರ್ಕಾರ ಇಂತಹದೊಂದು ಅಜೆಂಡಾ ರೂಪಿಸಿರುವುದು ತಿಳಿದು ಬಂದಿದೆ.
ಆಯ ಜಿಲ್ಲೆ ಹಿಂದೂಪರ ಸಂಘಟನೆಯ ಯುವ ಮುಖಂಡರು ಗೂಂಡಾ ಕಾಯ್ದೆಯಡಿ ಹೆಸರುಗಳನ್ನು ನಮೂದಿಸುವ ಮೂಲಕ ಅವರ ಕುಟುಂಬದಲ್ಲಿ ತಲ್ಲಣವನ್ನೆ ಮೂಡಿಸಿದ್ದಾರೆ. ಇದರಿಂದ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ನಮ್ಮಂಥ ಯುವಕರಿಗೆ ತುಂಬಾ ನೋವಾಗಿದೆ.
ಬರುವ ಚುನಾವಣೆಯಲ್ಲಿ ಯುವಕರಾರು ಹಿಂದೂ ಸಂಘಟನೆ ಮೂಲಕ ಓಡಾಡದಂತೆ, ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ರಾಷ್ಟ್ರದ ಮಹಾತ್ಮರಪರ ಯಾವುದೇ ವಿಚಾರಗಳನ್ನು ಬಿತ್ತದಂತೆ, ಪ್ರಚೋದನೆ ನೀಡದಂತೆ ಪರೋಕ್ಷವಾಗಿ ಎಚ್ಚರಿಕೆ ನೀಡುವ ಹುನ್ನಾರ ಇದಾಗಿದ್ದು, ರಾಜ್ಯ ಸರ್ಕಾರದ ನಡೆ ಖಂಡನೀಯವಾಗಿದೆ.
ನಾವೆಲ್ಲ ದೇಶದ ಐಕ್ಯತೆಗಾಗಿ ಭದ್ರತೆಗಾಗಿ ವಿದ್ಯಾರ್ಥಿಗಳಿಗೆ ನ್ಯಾಯದೊರಕಿಸಿ ಕೊಡುವದಕ್ಕಾಗಿ ಹೋರಾಟ ಮಾಡಿದ್ದೇವೆ. ಗೋವು ಸಂರಕ್ಷಣೆ ಮೂಲಕ ದೇಶದಲ್ಲಿ ಅಳಿನಂಚಿನಲ್ಲಿರುವ ಗೋಮಾತೆ ಸೇವೆಗೆ ಮುಂದಾಗಿರುವುದು ತಪ್ಪಾ..? ಇವೆಲ್ಲ ಮಾಡಿದರೆ ಗೂಂಡಾಗಳೆನಿಸಿಕೊಳ್ಳಬೇಕೆ. ಇದು ತುಂಬಾ ನೋವು ತರುವ ವಿಚಾರವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ನೇರ ಹೊಣೆ. ಒಟ್ಟಾರೆ ಹಿಂದೂ ಸಂಘಟನೆಗಳ ಮುಖಂಡರನ್ನು ಟಾರ್ಗೇಟ್ ಮಾಡಿರುವ ಸರ್ಕಾರ ಇಂತಹ ಅಸಂಬಂಧ ಕಾರ್ಯಕ್ಕೆ ಕೈಹಾಕಿದೆ. ಬರಿ ತಾಲೂಕಿನಲ್ಲಿ ಮಾತ್ರವಲ್ಲ. ಇಡಿ ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ ಯುವಕರ ಮೇಲೆ ಸರ್ಕಾರ ಗೂಂಡಾ ಕಾಯ್ದೆ ಅಸ್ತ್ರ ಬಳಸುತ್ತಿರುವುದು ಎಷ್ಟರಮಟ್ಟಿಗೆ ಸರಿ.? ಗೂಂಡಾ ಕಾಯ್ದೆಯಡಿ ಹೆಸರು ಸೇರ್ಪಡೆಗೊಳಿಸಲು ಪೊಲೀಸ್ ಇಲಾಖೆ ಯಾವ ಮಾನದಂಡನೆಗಳನ್ನು ಅನುಸರಿಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹಿಂದೂ ಸಮಾಜದ ಮುಖಂಡ ಸುಧೀರ ಚಿಂಚೋಳಿ ಮಾತನಾಡಿ, ರಾಜ್ಯ ಸರ್ಕಾರ ಯುವ ರಾಷ್ಟ್ರವಾದಿಗಳನ್ನು ಗೂಂಡಾ ಎಂದು ನಮೂದಿಸುವುದು ಸರಿಯಲ್ಲ. ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಕೊಲೆ, ಸುಲಿಗೆ ಅತ್ಯಾಚಾರ ಮಾಡುವವರನ್ನು ರಕ್ಷಣೆ ನೀಡುತ್ತಿದ್ದು, ಅಮಾಯಕರ ವಿರುದ್ಧ ಗೂಂಡಾ ಕಾಯ್ದೆ ಬಳಸುತ್ತಿರುವುದು ಹಾಸ್ಯಸ್ಪದವಾಗಿದೆ.
ಪ್ರಸ್ತುತ ಶಾಸಕ ಹ್ಯಾರಿಸ್ ಅವರ ಮಗ ನಲಪಾಡ್ ಪ್ರಕರಣದಲ್ಲಿ ಆರೋಪಿಗಳು ಸಾಕಷ್ಟು ಕೃತ್ಯಗಳನ್ನು ಎಸಗಿದ್ದರೂ, ಅಂತವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳದ ಸರ್ಕಾರ ಅಮಾಯಕರ ವಿರುದ್ಧ ಇಂತಹ ಅಸ್ತ್ರ ಬಳಸುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಹಿಂದೂಪರ ಸಂಘಟನೆಗಳ ಯುವಕರ ಹೆಸರನ್ನು ಗೂಂಡಾ ಕಾಯ್ದೆಯಡಿ ಹೆಸರುಗಳನ್ನು ಸೇರಿಸಿರುವದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಅನಿವಾರ್ಯವೆಂದು ಅವರು ಎಚ್ಚರಿಸಿದ್ದಾರೆ.