ಅನುದಾನ ಕಡಿತ; ಬಿಜೆಪಿಯ ನಿಜ ಬಣ್ಣ ಬಯಲು- ಪ್ರಿಯಾಂಕ್ ಖರ್ಗೆ ಕಿಡಿ
ಅನುದಾನ ಕಡಿತ; ಬಿಜೆಪಿಯ ನಿಜ ಬಣ್ಣ ಬಯಲು- ಪ್ರಿಯಾಂಕ್ ಖರ್ಗೆ ಕಿಡಿ
ಕಲಬುರ್ಗಿಃ ಮುಂಬರುವ ಆರ್ಥಿಕ ವರ್ಷದಿಂದ ಜಾರಿಗೊಳ್ಳುವಂತೆ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕಡಿತಗೊಳಿಸುವ ಮೂಲಕ ಬಿಜೆಪಿ ತನ್ನ ನಿಜಬಣ್ಣ ಪ್ರದರ್ಶಿಸಿದೆ ಎಂದು ಶಾಸಕರಾದ ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.
ಕೇಂದ್ರದ ಈ ನಿರ್ಧರಾದ ವಿರುದ್ದ ತೀವ್ರ ಟೀಕೆ ಮಾಡಿರುವ ಶಾಸಕರು 14 ನೇ ಹಣಕಾಸು ಆಯೋಗದ ವರದಿ ಪ್ರಕಾರ ರಾಜ್ಯಕ್ಕೆ 4.71 % ಪಾಲು ದೊರಕುತ್ತಿತ್ತು. ಆದರೆ 15 ನೇ ಹಣಕಾಸು ಆಯೋಗದ ವರದಿ ಪ್ರಕಾರ ಅದು 3.65% ಇಳಿಸಲಾಗುತ್ತಿದೆ. “ಇದು ರಾಜ್ಯದೆಡೆಗೆ ಕೇಂದ್ರದ ಮಲತಾಯಿ ಧೋರಣೆಯಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ ಬರಬೇಕಾಗಿರುವ ರೂ 30,000 ಕೋಟಿ ಅನುದಾನ ಇನ್ನೂ ಬಂದಿಲ್ಲ. ಈ ಹಂತದಲ್ಲಿ 15 ನೇ ಹಣಕಾಸು ಆಯೋಗದ ಪ್ರಕಾರ ಅನುದಾನದಲ್ಲಿಯೂ ಕಡಿತಗೊಳಿಸಿರುವುದು ಅಭಿವೃದ್ದಿಗೆ ಕೇಂದ್ರ ಅಡ್ಡಿಯಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಅನುದಾನದ ಹೊಳೆ ಹರಿದು ಅಭಿವೃದ್ದಿಯಾಗುತ್ತದೆ ಎಂದು ಬಿಂಬಿಸಿದ ಬಿಜೆಪಿ ನಾಯಕರು ಈಗ ಮೌನಕ್ಕೆ ಶರಣಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.
ರಾಜ್ಯ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದೆ. ಒಬ್ಬರಿಗೂ ಇದರ ವಿರುದ್ದ ಧ್ವನಿ ಎತ್ತುವ ಧೈರ್ಯವಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.