PAN-ADHAR LINK ಮಾಡದಿದ್ದಕ್ಕೆ ದಂಡ ಕಟ್ಟಿದ್ದೀರಾ? ಹಾಗಿದ್ರೆ ರೇಷನ್ ಕಾರ್ಡ್, ಗೃಹಲಕ್ಷ್ಮಿ ಹಣ ಕ್ಯಾನ್ಸಲ್?
![](https://vinayavani.com/wp-content/uploads/2024/09/download-11.jpg)
(Penalty) ಈ ಹಿಂದೆ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆ ಹಲವು ಜನ ಮಾಡಿಸದೇ ಇರುವ ಕಾರಣ 1,000 ಫೈನ್ ಮೂಲಕ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ. ಆದರೆ ಫೈನ್ ಮೂಲಕ ಲಿಂಕ್ ಮಾಡಿದವರಿಗೆ ಇದೀಗ ತಲೆಬಿಸಿ ಶುರುವಾಗಿದೆ.
ಹೌದು, ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಅನ್ನು ಅಂತಿಮ ಗಡುವು ಮುಗಿದ ಬಳಿಕ ಮಾಡಿಸಿದವರು 1,000 ದಂಡವನ್ನು ಆದಾಯ ತೆರಿಗೆ ಇಲಾಖೆಗೆ ಆನ್ ಲೈನ್ ನಲ್ಲಿ ಪಾವತಿ ಮಾಡಿದ್ದರು. ಆದಾಯ ತೆರಿಗೆ ಇಲಾಖೆಯ ಖಾತೆಗೆ ಸಂದಾಯವಾದ ಹಣ ದಂಡದ ಶುಲ್ಕವಾದರೂ, ಅದನ್ನು ಇಲಾಖೆಯ ಸಾಫ್ಟ್ ವೇರ್ ಆದಾಯ ತೆರಿಗೆಯೆಂದು ಪರಿಗಣಿಸಿದೆ. ಹೀಗಾಗಿ ದಂಡ ಶುಲ್ಕ ಕಟ್ಟಿದವರಿಗೆ ತಲೆಬಿಸಿ ಶುರುವಾಗಿದೆ.
ಆದಾಯ ತೆರಿಗೆ ಪಾವತಿದಾರರು ಎಂದು ಇವರೆಲ್ಲರಿಗೆ ರಾಜ್ಯ ಸರ್ಕಾರ ನೀಡುವ ಗೃಹಲಕ್ಷ್ಮಿ ಹಣ ನಿಲ್ಲಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಮತ್ತೊಂದೆಡೆ ಅವರ ಬಿಪಿಎಲ್ ಕಾರ್ಡ್ ಮರುಪರಿಶೀಲನೆಗೆ ಒಳಪಡಿಸಲು ಸೂಚಿಸಲಾಗಿದೆ. ಹೌದು, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಾಫ್ಟ್ ವೇರ್ ಮೂಲಕ ಕಂಡುಬಂದ ಬಿಪಿಎಲ್ ಕಾರ್ಡ್ಗಳನ್ನು ಪಟ್ಟಿ ಮಾಡಿದೆ. ದ.ಕ. ಜಿಲ್ಲೆಯಲ್ಲಿ 50 ಸಾವಿರ ಇಂತಹ ಅರ್ಜಿಗಳ ಮರುಪರಿಶೀಲನೆ ಮಾಡಬೇಕಿದೆ.
ಇನ್ನು ಪಾನ್-ಆಧಾರ್ ಲಿಂಕ್ ಸಂದರ್ಭ ದಂಡ ಕಟ್ಟಿದವರನ್ನು ಆದಾಯ ತೆರಿಗೆ ಪಾವತಿದಾರರು ಎಂದು ಪರಿಗಣಿಸಿ ಪಟ್ಟಿ ಮಾಡಲಾಗಿದ್ದರೂ, ಅಂಥವರು ದಂಡ ಪಾವತಿ ಹೊರತಾಗಿ ಬೇರಾವುದೇ ಆದಾಯ ತೆರಿಗೆ ಪಾವತಿ ಮಾಡಿಲ್ಲ ಎಂಬ ಹಿಂಬರಹವನ್ನು ಆದಾಯ ತೆರಿಗೆ ಇಲಾಖೆಯಿಂದ ಆಹಾರ ಇಲಾಖೆ ಪಡೆಯುತ್ತಿದೆ. ಈ ಮೂಲಕ ಗೃಹಲಕ್ಷ್ಮಿ ದುಡ್ಡು ಈ ಕಾರಣಕ್ಕೆ ರದ್ದಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.