ಅಂತರ ರಾಜ್ಯ 420, ಐದು ವರ್ಷದಿಂದ ಪರಾರಿಯಾಗಿದ್ದ ವಂಚಕ ಅರೆಸ್ಟ್
ಗೋಗಿಃ ರಾಜ್ ಹೋಂ ನೀಡ್ಸ್ ಮಾಲೀಕ ಆರೋಪಿ ರಾಜನ್ ಬಂಧನ
yadgiri, ಶಹಾಪುರಃ ಕಳೆದ ಐದು ವರ್ಷಗಳ ಹಿಂದೆ ತಾಲೂಕಿನ ಗೋಗಿ ಗ್ರಾಮದಲ್ಲಿ ರಾಜ್ ಹೋಂ ನೀಡ್ಸ್ ಅಂಗಡಿ ಆರಂಭಿಸಿ ನಾಗರಿಕರಿಗೆ ವಿವಿಧ ಸಾಮಾಗ್ರಿಗಳನ್ನು ಶೇ.10, ಶೇ.15 ರಿಂದ ಶೇ.30 ಮತ್ತು ಕೆಲ ಸಾಮಾಗ್ರಿಗಳು ಶೇ.50 ರಷ್ಟು ರಿಯಾಯಿತಿ ನೀಡುವುದಾಗಿ ನಂಬಿಸಿ ಬೆರಳಣಿಕೆಯಷ್ಟು ಜನರಿಗೆ ಸಾಮಾಗ್ರಿ ನೀಡಿ ಆ ನಂತರ ನೂರಾರು ಜನರಿಂದ ಅಡ್ವಾನ್ಸ್ ಪಡೆದು ಸಾಮಾಗ್ರಿಗಳು ತರಿಸಿ ಕೊಡುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾದ ಘಟನೆ ಜರುಗಿತ್ತು.
ಅಲ್ಲದೆ ಆ ಸಮಯದಲ್ಲಿ ಜನೇವರಿ 2016 ರಂದು ಗೋಗಿ ಠಾಣೆಯಲ್ಲಿ ಹೋಂ ನೀಡ್ಸ್ ಮಾಲೀಕ್ ತಮಿಳುನಾಡಿನ ಆರೋಪಿ ರಾಜನ್ ತಂದೆ ಅರುಣಾಚಲಂ ಚಟ್ಟಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮಾರ್ಗದರ್ಶನದಲ್ಲಿ ಗೋಗಿ ಠಾಣೆ ಪಿಎಸ್‍ಐ ಸೋಮಲಿಂಗ ಒಡೆಯರ್ ತಂಡ ಪ್ರಕರಣದ ಹಿಂದೆ ಬಿದ್ದು, ಆಂದ್ರಪ್ರದೇಶದ ನೆಲ್ಲೂರ ಜಿಲ್ಲೆಯ ಬುಚಿರಡ್ಡಿ ಪಾಲೆಂಪಟ್ಟಣದಲ್ಲಿ ಇರುವದಾಗಿ ಮಾಹಿತಿ ಪಡೆದುಕೊಂಡು ಆತನನ್ನು ಬಂಧಿಸಿ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದರು.
ಈತ ತಮಿಳುನಾಡು, ಆಂದ್ರ ಮತ್ತು ಕರ್ನಾಟಕದಲ್ಲಿ ಹೋಂ ಅಪ್ಲಾಯನ್ಸ್ ಬೇರೆ ಬೇರೆ ಹೆಸರಿನಲ್ಲಿ ನಡೆಸುವ ಮೂಲಕ ನಾಗರಿಕರಿಗೆ ವಂಚನೆ ಮಾಡಿದ್ದಾನೆ. ಆಂದ್ರದಲ್ಲೀ ಇದೇ ರೀತಿ ಮಾಡಿದ್ದು, ಆರೋಪಿ ತರುವಲ್ಲಿ ತಡವಾಯಿತು. ಅಲ್ಲಿನ ಪೊಲೀಸ್ ವರಿಷ್ಠರನ್ನು ಸಂಪರ್ಕಿಸಿ ಆರೋಪಿಯನ್ನು ಕರೆ ತರಲಾಗಿದೆ. ಪ್ರಸ್ತುತ ಆಂದ್ರದಲ್ಲಿ ನಡೆಸುತ್ತಿದ್ದ ಅಂಗಡಿಯಲ್ಲಿ 5 ಲಕ್ಷ ರೂ. ಬೆಲೆಯ ಒಟ್ಟು ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಗೋಗಿ ಗ್ರಾಮಕ್ಕೆ ತರಲಾಗಿದೆ.

ವಂಚನೆ ಪ್ರಕರಣದಲ್ಲಿ ಮೋಸ ಹೋದ ಸಾರ್ವಜನಿಕರಿಗೆ ಈ ಸಾಮಾಗ್ರಿಗಳನ್ನು ನೀಡಲಾಗುವದು ಎಂದು ವಿವರಿಸಿದರು.
ಸುಮಾರು ಗೋಗಿಯಲ್ಲಿ 6.62.105-00 (ಆರು ಲಕ್ಷ ಅರವತ್ತೆರೆಡು ಸಾವಿರ ನೂರಾ ಐದು ರೂಪಾಯಿ ಗಳನ್ನು ಜನರಿಂದ ಸಂಗ್ರಹಿಸಿಕೊಂಡು ಆತ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಾಗಿತ್ತು. ಸದ್ಯ ಆತ ಹಣ ಪಡೆದು ಚೀಟಿ ನೀಡಿರುವ ಜನರಿಗೆ ಪ್ರಸ್ತುತದಲ್ಲಿ ವಶಕ್ಕೆ ಪಡೆಯಲಾದ ಸಾಮಾಗ್ರಿಗಳನ್ನು ಹಂಚಲಾಗುವದು ಎಂದು ತಿಳಿಸಿದರು. ಆರೋಪಿ ರಾಜನ್ ಬೇರೆ ಹೆಸರನ್ನು ಬಳಸಿದ್ದು, ತಮಿಳುನಾಡು, ತೆಲಂಗಾಣ, ಆಂದ್ರದಲ್ಲೂ ಇದೇ ವಂಚಿಸಿದ್ದಾನೆ ಎಂದು ತಿಳಿಸಿದರು.
ಎಸ್ಪಿ, ಡಿವೈಎಸ್ಪಿ ಮತ್ತು ಸಿಪಿಐ ಶ್ರೀನಿವಾಸ ಅಲ್ಲಾಪುರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಮೊದಲು ತಮಿಳುನಾಡು, ತೆಲಂಗಾಣ ತೆರಳಿ ಮಾಹಿತಿ ಪಡೆದುಕೊಂಡೆವು. ನಂತರ ಆಂದ್ರದ ನೆಲ್ಲೂರಿ ವ್ಯಾಪ್ತಿ ಇರುವದನ್ನು ತಿಳಿದು ಅಲ್ಲಿಗೆ ತೆರಳಿ ಪತ್ತೆ ಮಾಡಿ ಆತನನ್ನ ಕರೆತರುವಲ್ಲಿ ನಮ್ಮ ತಂಡ ಯಶಸ್ವಿಯಾಯಿತು. ಐದು ವರ್ಷಗಳಿಂದ ಇಲ್ಲಿನ ಜನರಿಗೆ ಮೋಸ ಮಾಡಿ ದುಡ್ಡು ಲಪಾಟಿಯಿಸಿಕೊಂಡು ಹೋದ ವಂಚಕನಿಂದ ಸಾಮಾಗ್ರಿಗಳು ಸಹ ವಶಕ್ಕೆ ಪಡೆದು ತಂದಿದ್ದೇವೆ. ಮೋಸ ಹೋದ ಜನರಿಗೆ ಅವುಗಳನ್ನು ಹಂಚಿಕೆ ಮಾಡಲಾಗುತ್ತಿದೆ.
-ಸೋಮಲಿಂಗ ಒಡೆಯರ್.ಪಿಎಸ್‍ಐ. ಗೋಗಿ.