‘ಪ್ರಾಣಿಗಳೇ ಗುಣದಲಿ ಮೇಲು’ – ಪರಮೇಶ್ವರಪ್ಪ ಕುದರಿ ಆಪ್ತ ಬರಹ
ಲೇಖಕರು – ಪರಮೇಶ್ವರಪ್ಪ ಕುದರಿ, ಶಿಕ್ಷಕರು ಚಿತ್ರದುರ್ಗ
ಪ್ರಾಣಿಗಳೇ ಗುಣದಲಿ ಮೇಲು
ಮಾನವನದಕಿಂತ ಕೀಳು
ಉಪಕಾರವ ಮಾಡಲಾರ
ಬದುಕಿದರೆ ಸೈರಿಸಲಾರ”
ದಿವಂಗತ ಚಿ.ಉದಯಶಂಕರ ಅವರು “ಸಂಪತ್ತಿಗೆ ಸವಾಲ್” ಚಿತ್ರಕ್ಕಾಗಿ ಬರೆದ ‘ ಯಾರೇ ಕೂಗಾಡಲಿ… ಊರೇ ಹೋರಾಡಲಿ’ ಗೀತೆಯ ಸಾಲುಗಳಿವು. ಹೌದು, ಪ್ರಾಣಿಗಳೇ ಗುಣದಲಿ ಮೇಲು ಎಂಬುದು ನಮಗೆ ದೈನಂದಿನ ಬದುಕಿನಲ್ಲಿ ಎಷ್ಟೋ ಬಾರಿ ಅರಿವಿಗೆ ಬಂದಿರುತ್ತದೆ! ಆ ಕ್ಷಣ ನಾವು ಅನುಭವಿಸಿ ಆನಂದಿಸಿರುತ್ತೇವೆ.
ಜೇನಿನಂತ ಜೇನೂ ಕೂಡ ಕೆಣಕದೇ ಯಾರಿಗೂ ಏನನ್ನೂ ಮಾಡುವುದಿಲ್ಲ! ಬಹುತೇಕ ಕಟ್ಟಡ, ದೇವಸ್ಥಾನಗಳಲ್ಲಿ ನಾವು ನೋಡಿರುತ್ತೇವೆ, ಅಲ್ಲಿ ದೊಡ್ಡ ಜೇನುಗೂಡುಗಳು ಕೈಗೆಟಕುವಷ್ಟು ಸನಿಹ ಇದ್ದರೂ, ಅವುಗಳಿಗೆ ತೊಂದರೆ ಕೊಡದಿದ್ದರೆ ಅವು ಯಾರಿಗೂ ತೊಂದರೆ ಕೊಡಲಾರವು.ವಿಷಕಾರಿ ಹಾವೂ ಕೂಡ ಕೆಣಕದೇ ಯಾರಿಗೂ ಏನನ್ನೂ ಮಾಡದು. ರಸ್ತೆಯಲ್ಲಿ ಸಾಲಾಗಿ ಹೊರಟಿರುವ ಇರುವೆಗಳನ್ನು ನೋಡಿದರೆ, ಅವುಗಳ ಶಿಸ್ತು- ಸಂಯಮ ಕಣ್ಮನ ಸೆಳೆಯುತ್ತದೆ. ಆದರೆ ಅದೇ ಇರುವೆಗಳ ಸಾಲನ್ನು ಕೆಣಕಿದರೆ ಆಗುವ ಅನಾಹುತ ಅನುಭವಿಸಿದವರಿಗೇ ಗೊತ್ತು! ಬೆಳಗಿನ ಜಾವ ತನ್ನ ಕೂಗಿನಿಂದ ಎದ್ದೇಳಿಸುವ,ಹಳ್ಳಿಯ ಗಡಿಯಾರ ಎಂದು ಕರೆಸಿಕೊಳ್ಳುವ ಕೋಳಿಯ ಸಮಯ ಪ್ರಜ್ಞೆಯಂತೂ ಪ್ರಶಂಸನೀಯ. ನಿಯತ್ತಿಗೆ ಮತ್ತೊಂದು ಹೆಸರು ಎಂದು ಹೆಸರುವಾಸಿಯಾಗಿರುವ ನಾಯಿಯ ಗುಣಗಾನವನ್ನು ಅದೆಷ್ಟು ಮಾಡಿದರೂ ಕಡಿಮೆಯೇ!. ಯಾರಿಗಾದರೂ ಮಕ್ಕಳಿಲ್ಲ ಎಂಬ ಕೊರಗಿದ್ದರೆ ಅವರು ಒಂದು ನಾಯಿಯನ್ನು ಸಾಕಿದರೆ ಮಕ್ಕಳಿಂದ ಸಿಗುವ ಎಲ್ಲ ಆನಂದವನ್ನೂ ಅದು ನೀಡುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ!
ಅವಳು ಮೈಸೂರಿನವಳು. ಮೈಸೂರಿಂದ ಬಸ್ ಏರಿ ನಮ್ಮನೆಗೆ ಬಂದಾಗ ರಾತ್ರಿ ಎರಡು ಗಂಟೆ. ಮೈಸೂರಿನಲ್ಲಿ ಓದುತ್ತಿದ್ದ ಕಿರಿಮಗ ಚೇತನ್ ಅವಳನ್ನು ಮನೆಗೆ ಕರೆ ತಂದಿದ್ದ. ಅವಳು ನಮ್ಮನೆಗೆ ಬಂದಾಗ ಅವಳಿಗೆ ಬರೀ 21 ದಿನ. ನಮಗೆ ಆ ದೇವರು ಹೆಣ್ಣುಮಕ್ಕಳನ್ನು ದಯಪಾಲಿಸದ್ದರಿಂದ, ನಾವು ಅವಳಲ್ಲಿಯೇ ಮಗಳನ್ನು ಕಾಣುತ್ತಿದ್ದೇವೆ!. ಅವಳು ಎಂದೂ ನಮಗೆ ನಾಯಿ ತರಹ ಕಂಡೇ ಇಲ್ಲ. ಅವಳನ್ನು ನಾವು ಪ್ರೀತಿಯಿಂದ ಚಿನ್ನಿ ಎಂದು ಕರೆಯುತ್ತೇವೆ. ಪ್ರತಿದಿನವೂ ಚಿನ್ನಿಯ ಚಿನ್ನಾಟ, ಒಡನಾಟ, ಬುದ್ದಿವಂತಿಕೆ ಕಂಡು ಬೆರಗಾಗುತ್ತೇವೆ.
ನಾವು ಮನೆಯಲ್ಲಿ ಯಾರೂ ಜಗಳ ಮಾಡುವಂತಿಲ್ಲ, ಅವಳು ಮಧ್ಯ ಪ್ರವೇಶಿಸಿ ಜಗಳವನ್ನಾಡದಂತೆ ನಿರ್ಬಂದಿಸುತ್ತಾಳೆ. ನಾನು ನನ್ನ ಮಕ್ಕಳು, ಹೆಂಡತಿಯನ್ನು ಬಯ್ಯುವಂತಿಲ್ಲ, ಗದರಿಸುವಂತಿಲ್ಲ! ಜಗಳ ಯಾಕೆ ಹೊಂದಿಕೊಂಡು ಬಾಳಿ ಎಂಬ ಸಂದೇಶವನ್ನು ಸಾರುತ್ತಾಳೆ. ಬೆಳಿಗ್ಗೆ ನಾವು ಎದ್ದೇಳುವುದು ತಡವಾದರೆ, ಅವಳು ಸಹಿಸುವುದಿಲ್ಲ , ಬಂದು ನಮ್ಮ ಹೊದಿಕೆ ಹಿಡಿದು ಎಳೆದೆಳೆದು ಎಬ್ಬಿಸುತ್ತಾಳೆ. ಎದ್ದೇಳುವವರೆಗೂ ಬಿಡುವುದಿಲ್ಲ!
ಅವಳನ್ನು ನಿಯಮಿತವಾಗಿ ವಾಕಿಂಗ್ ಕರೆದೊಯ್ಯಲೇ ಬೇಕು, ತಡವಾದರೆ ಬೆಂಬಿಡದೇ ಕಾಡುತ್ತಾಳೆ! ಅವಳಿಗೆ ಮಾತು ಬರುವುದಿಲ್ಲ ಆದರೂ ಎಲ್ಲ ಮಾತುಗಳನ್ನೂ ಆಲಿಸುತ್ತಾಳೆ, ಪಾಲಿಸುತ್ತಾಳೆ. ಬೆಳಿಗ್ಗೆ ಒಂಬತ್ತು ಗಂಟೆಗೆ ಡ್ಯೂಟಿಗೆ ಹೊರಡುವ ನಾವು, ಅಷ್ಟೊತ್ತಿಗಾಗಲೇ ಅವಳಿಗೆ ಊಟ ಹಾಕಿದರೆ, ಸಂಜೆ ನಾವು ಬರುವವರೆಗೂ ಏಕಾಂಗಿಯಾಗಿ ಮನೆಯ ಬಳಿ ಇದ್ದು ಕಾಯುತ್ತಾಳೆ. ಪ್ರತಿ ದಿನವೂ ಸಂಜೆ ನಾವು ಬಂದೊಡನೆ ಮೇಲಿನ ನಮ್ಮ ಮನೆಯಿಂದ ಓಡೋಡಿ ಬರುತ್ತಾಳೆ, ಬೊಗಳಿ ಅದೇನನ್ನೋ ಹೇಳಲು ಬಯಸುತ್ತಾಳೆ, ತಡೆಯಲಾರದೇ ಸುಸ್ಸೂ ಮಾಡಲು ಓಡುತ್ತಾಳೆ! ಬೆಳಿಗ್ಗೆಯಿಂದ ನಮ್ಮನ್ನು ಕಾಣದೇ ಇದ್ದುದಕ್ಕೋ ಏನೋ ಹತ್ತಿರ ಬಂದು ಮೂಸುತ್ತಾಳೆ.
ಹೀಗೆ ಚಿನ್ನಿ ತನ್ನ ಮುಗ್ಧತೆ, ಚಿನ್ನಾಟ,ಜಾಣತನದಿಂದ ನಮ್ಮ ಮನೆಯ ಮಗಳಾಗಿದ್ದಾಳೆ. ಅವಳನ್ನು ಸಾಕಿದ್ದರಿಂದ ಎಲ್ಲರೂ ಒಟ್ಟಿಗೆ ಊರಿಗೆ ಹೋಗಲಾಗುವುದಿಲ್ಲ, ಅವಳನ್ನು ನೋಡಿಕೊಳ್ಳಲು ಯಾರಾದರೊಬ್ಬರು ಮನೆಯಲ್ಲಿರಬೇಕಾದ ಅನಿವಾರ್ಯತೆ ಇದೆ. ಆಗ ಬೇಸರವಾಗಿ ನಾವು ಅವಳ ಇರುವಿಕೆ, ತೊಂದರೆ ಬಗ್ಗೆ ಮಾತನಾಡಿದಾಗ ಮುಖ ಸಪ್ಪೆ ಮಾಡಿಕೊಂಡು ಬಿಡುತ್ತಾಳೆ! ಮತ್ತೆ ನಾವು ಪ್ರೀತಿಯಿಂದ ಸಮಾಧಾನ ಪಡಿಸಲೇಬೇಕು.
ಒಟ್ಟಾರೆ ಚಿನ್ನಿ ಇಲ್ಲದ ನಮ್ಮ ಜೀವನವನ್ನು ಕಲ್ಪಸಿಕೊಳ್ಳುವುದೂ ಕೂಡಾ ಅಸಾಧ್ಯವೆನ್ನಿಸುವಷ್ಟು ನಮ್ಮ ಮನೆಯ ಸದಸ್ಯರನ್ನು ಹಚ್ಚಿಕೊಂಡಿದ್ದಾಳೆ. ನನ್ನ ಮಕ್ಕಳಾದ ಚೇತು, ಹರೀಶ್ ಅವಳ ಪಾಲಿಗೆ ಚೇತು ಅಣ್ಣ, ಹರೀಶಣ್ಣ ಆಗಿದ್ದಾರೆ. ನನ್ನ ಶ್ರೀಮತಿ ಅವಳ ಅಮ್ಮನಾದರೆ ನಾನು ಅಪ್ಪಾಜಿಯಾಗಿದ್ದೇನೆ!
ಲವ್ ಯು ಚಿನ್ನಿ!!!!