ನಗರೀಕರಣದಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ-ಕಾವಡಿ
ಸಸಿಗಳನ್ನು ನೆಟ್ಟು ಹಸರೀಕರಣಕ್ಕೆ ಮುಂದಾಗಿ-ಕಾವಡಿ
ಯಾದಗಿರಿ, ಶಹಾಪುರಃ ಕಳೆದ ಬೇಸಿಗೆ ಎಷ್ಟೊಂದು ಘೋರವಾಗಿತ್ತು ಎಂಬುದನ್ನು ಎಲ್ಲರೂ ಅನುಭವಿಸಿದ್ದೇವೆ. ಇದಕ್ಕೆಲ್ಲ ಕಾರಣ ಪರಿಸರ ಅಸಮತೋಲನ ಎಂಬುದು ತಿಳಿದ ವಿಷಯವಾಗಿದೆ. ಹೀಗಾಗಿ ಪರಿಸರ ಅಸಮತೋಲನ ಹೋಗಲಾಡಿಸಲು ಪ್ರತಿಯೊಬ್ಬರು ಸಸಿಗಳನ್ನು ಬೆಳೆಸಬೇಕು. ಅರಣ್ಯ ಸಂಪತ್ತು ರಕ್ಷಿಸಬೇಕು ಎಂದು ಬೀದರನ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ತಿಳಿಸಿದರು.
ತಾಲೂಕಿನ ಗೋಗಿ(ಕೆ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೀದರನ ಪರಿಸರ ವಾಹಿನಿ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಮತ್ತು ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೆ ಜಾಗತಿಕ ತಾಪಮಾನ ಎಂಬುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವಂತ ವಿಷಯವಾಗಿತ್ತು. ಪ್ರಸ್ತುತ ಜಾಗತಿಕ ತಾಪಮಾನ ಪ್ರತಿ ಹಳ್ಳಿ ಹಳ್ಳಿಯಲ್ಲಿ ಚರ್ಚೆಯಾಗುವಂತಾಗಿದೆ. ಕಾರಣ ಬಾಲ್ಯದಲ್ಲಿಯೇ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅದರ ಪಾಲನೆ ಪೋಷಣೆ ಮಾಡುವ ಅಗತ್ಯವಿದೆ.
ಪಾಲಕರು ತಮ್ಮ ಮಕ್ಕಳ ಕೈಯಿಂದ ಸಸಿ ನೆಡಲು ತಿಳಿಸಿ ಅದರ ಪೋಷಣೆಯಲ್ಲಿ ತೊಡಗಿಸಿಕೊಳ್ಳಲು ಕಲಿಸಬೇಕು. ಮಕ್ಕಳಿಗೆ ನೀಡುವ ಉತ್ತಮ ಸಂಸ್ಕಾರದಲ್ಲಿ ಇದು ಒಂದು ಪಾಠವೆಂದು ತಿಳಿಯಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ದೊಡ್ಡ ಗಂಡಾಂರ ಎದುರಿಸುವ ಸ್ಥಿತಿ ಬರಲಿದೆ. ಪ್ರಸ್ತುತ ನೀರನ್ನು ಖರೀದಿಸುತ್ತಿರುವಂತೆ ಮುಂದೆ ಗಾಳಿಯು ಖರೀಧಿಸಿ ಉಸಿರಾಡವು ಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ಎಚ್ಚರಿಸಿದರು.
ಮಾನವನ ಆಸೆಗೆ ಮಿತಿಯಿಲ್ಲ. ಮಾನವರ ಕಾರ್ಯಚಟುವಟಿಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅರಣ್ಯ ಸಂಪತ್ತು ನಾಶವಾಗುತ್ತಿದೆ. ನರಗೀಕರಣ, ಭೂಮಿಯಲ್ಲಿ ಹುದಗಿರುವ ಖನಿಜ ಸಂಪನ್ಮೂಲತೆಯನ್ನು ಕದಿಯುವದು ಇವೆಲ್ಲ ಪರಿಸರದ ಮೇಲೆ ಅಗಾಧ ಪರಿಣಾಮ ಬೀರುತ್ತಿವೆ. ಕಾರಣ ಪ್ರತಿಯೊಬ್ಬರು ಇದನ್ನು ಅರ್ಥೈಸಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು.
ಹೈಕ ಭಾಗದಲ್ಲಿ ಅರಣ್ಯ ಸಂಪತ್ತು ಕಡಿಮೆಯಿದೆ. ಗ್ರಾಮಸ್ಥರು ಅರಣ್ಯ ಬೆಳೆಸುವಲ್ಲಿ ಮನಸ್ಸು ಮಾಡಬೇಕು. ಅದಕ್ಕೆಲ್ಲ ಪೂರಕ ತಯಾರಿ ನಡೆಸಿಕೊಂಡು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಹಸಿರೀಕರಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ತಾಪಂ ಸದಸ್ಯ ಮಾಣಿಕರಡ್ಡಿ ಮಲಾರ ಮಾತನಾಡಿ, ಪ್ರತಿಯೊಬ್ಬರು ಮನೆ ಮುಂದಿರುವ ಜಾಗದಲ್ಲಿ ಸಸಿಗಳನ್ನು ಬೆಳೆಯಲು ಪಣತೊಡಿ. ಮಕ್ಕಳಿಗೂ ಸಸಿ ಬೆಳೆಸಲು ಪೋಷಿಸಲು ತಿಳಿಸಿ ನೀವು ಅವರೊಡನೆ ಭಾಗಿಯಾಗಬೇಕು. ಅಲ್ಲದೆ ಮನೆ ಮೂಮದೆ ತುಳಸಿ ಗಿಡ ಕಡ್ಡಾಯವಾಗಿ ನೆಡಬೇಕು. ಅದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಎಂದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು.
ಉಪ ವಲಯ ಅರಣ್ಯಾಧಿಕಾರಿ ಐ.ಬಿ.ಹೂಗಾರ, ಅರಣ್ಯ ರಕ್ಷಕ ಶ್ರೀಧರ ಯಕ್ಷಿಂತಿ, ಹಣಮಂತರಾವ್ ಬಿರೆದಾರ, ಶಾಲಾ ಮುಖ್ಯಗುರು ಅಶೋಕ ಗಡಗಿ, ಸಂಗಮೇಶ ದೇಸಾಯಿ, ಶರಣಬಸಪ್ಪ ಯಾಕಪೂರ, ರವಿ ಮೂಲಿಮನಿ, ಬಸವರಾಜ ಪಾಟೀಲ್, ಬಸಯ್ಯ ಸ್ವಾಮಿ, ಶೀಕ್ಷಕ ದೇವರಡ್ಡಿ ದರ್ಶನಾಪುರ ಉಪಸ್ಥಿತರಿದ್ದರು. ಗೌಡಪ್ಪಗೌಡ ನಿರೂಪಿಸಿ ವಂದಿಸಿದರು.