ಪ್ರಮುಖ ಸುದ್ದಿ

ಶಹಾಪುರ:ಧರ್ಮದ ಹಾದಿಯಲ್ಲಿ ನಡೆದರೆ ಜೀವನ ಪಾವನ

ದಾನಮ್ಮದೇವಿ ತೊಟ್ಟಿಲೋತ್ಸವ

ಬದುಕು ಸನ್ನಡತೆಯಲ್ಲಿ ಸಾಗಲಿ:ಸಿದ್ಧೇಶ್ವರ ಶಿವಾಚಾರ್ಯರು

ಶಹಾಪುರ: ಮನುಷ್ಯ ನ್ಯಾಯ-ನೀತಿ, ಧರ್ಮದ ಸನ್ನಡತೆ ಅಳವಡಿಸಿಕೊಂಡು ಬದುಕಿದರೆ ಜೀವನ ಪಾವನಗೊಳ್ಳುತ್ತದೆ ಎಂದು ನಗನೂರಿನ ಸೂಗುರೇಶ್ವರ ದೇವರು ಹೇಳಿದರು.

ನಗರದ ಹಳೆಪೇಟೆನಲ್ಲಿರುವ ಮಹಾತ್ಮಾ ಶ್ರೀ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಶಿವಶರಣೆ ಶ್ರೀ ದಾನಮ್ಮದೇವಿ ತೊಟ್ಟಿಲೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇವರನ್ನು ಭಕ್ತಿ ಪೂರ್ವಕವಾಗಿ ಪೂಜಿಸಿದಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಲಿದೆ. ಆ ಮೂಲಕ ನೀವು ಕೈಗೊಳ್ಳುವ ಕಾರ್ಯಗಳಲ್ಲಿ ಯಶಸ್ವಿ ದೊರೆಯಲು ಸಾಧ್ಯ. ಡಾಂಭಿಕ ಪೂಜೆ ಆಡಂಬರ ಸರಿಯಲ್ಲ. ಅದರಿಂದ ನಕರಾತ್ಮಕ ಅನಿಷ್ಟ ಉಂಟಾಗುತ್ತದೆ. ಸನ್ನಡತೆಯೊಂದಿಗೆ ಭಕ್ತಿಯ ಪೂಜೆ ಪುನಸ್ಕಾರದಿಂದ ನೀವು ವಾಸಿಸುವ ಪ್ರದೇಶ ಸಕರಾತ್ಮಕವಾಗಿ ಸ್ಪಂಧನೆ ನೀಡಲು ಸಾಧ್ಯವಿದೆ. ಇದನ್ನು ಅರಿತು ನಡೆಯಬೇಕು ಎಂದು ತಿಳಿಸಿದರು.

ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಇಂದಿನ ಯುವಕರು ಸರಿಯಾದ ಮಾರ್ಗದಲ್ಲಿ ನಡೆಯದೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಮಾತ್ರ ಭಕ್ತಿಯಿಂದ ನಡೆದುಕೊಳ್ಳುವುದು ಶ್ರಾವಣ ಮುಗಿಯುತ್ತಿದ್ದಂತೆ ದಾಭಾ, ಬಾರ್ ಮತ್ತು ರೆಸ್ಟೋರೆಂಟ್‍ಗೆ ಹೋಗಿ ಕಂಠಮಟ್ಟ ಕುಡಿಯುವುದು ಸರಿಯಲ್ಲ. ಮನುಷ್ಯ ನಿತ್ಯ ಕಾಯಕದಲ್ಲಿ ಶ್ರದ್ಧೆ, ಭಕ್ತಿ ಪೂರ್ವಕ ಸತ್ಯ ಶುದ್ಧ ಕಾಯಕದಿಂದ ಭಗವಂತನ ನಾಮಸ್ಮರಣೆ ಮಾಡಬೇಕು ಎಂದರು.

ಚಟ್ನಳ್ಳಿಯ ವಿಶ್ವರಾಧ್ಯ ಹಿರೇಮಠ ಮಾತನಾಡಿ, ಹಿಂದೂ ಧರ್ಮದ ಪವಿತ್ರ ಮಾಸವಾಗಿರುವ ಶ್ರಾವಣ ಮಾಸದಲ್ಲಿ ಶ್ರದ್ಧೆ, ಭಕ್ತಿಯಿಂದ ಭಗವಂತನನ್ನು ಸ್ಮರಿಸಿದರೆ, ಮಾಡಿರುವ ಪಾಪ ಕರ್ಮಗಳನ್ನು ಕಳೆದುಕೊಳ್ಳಬಹುದು ಎಂದು ತಿಳಿಸಿದರು.

ವಿಶ್ವನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರಭುರಾಜ ಮಡ್ಡಿಸಾಹು, ರೋಹಿತ ಶಿರ್ಣಿ, ಶರಣು ಮೂಲಿಮನಿ, ಚೆನ್ನಯ್ಯಸ್ವಾಮಿ ಸ್ಥಾವರಮಠ, ಕಾಶಿನಾಥ, ವೆಂಕಟೇಶ ಕುಲಕರ್ಣಿ, ಸುನೀಲ್ ಕುರಕುಂದಿ, ಪ್ರಕಾಶಕುಮಾರ ಮುದ್ಗಲ್, ಅರುಣಕುಮಾರ ಗಂಗಾಧರಮಠ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ತೃ ಗದ್ದುಗೆಗೆ ಕುಂಕುಮಾರ್ಚನೆ, ರುದ್ರಾಭಿಷೇಕ ಹಾಗೂ ಗೋಮಾತಾ ಪೂಜೆ ನೆರವೇರಿಸಲಾಯಿತು. ನಂತರ ದಾನಮ್ಮ ದೇವಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಮಹಿಳೆಯರು ಸೇರಿದಂತೆ ಮಕ್ಕಳು ಬಡಾವಣೆ ನಾಗರಿಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button