ಲಿಂಗಾಯತರು ಹಿಂದೂಗಳಲ್ಲ ಅನ್ನೋದು ಹೇಗೆ..? ಪೇಜಾವರ ಶ್ರೀ ಹೇಳಿದ್ದೇನು.?
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಪೇಜಾವರಶ್ರೀಗಳ ಮಾತು
ಉಡುಪಿಃ ಎಲ್ಲಾ ಹಿಂದೂಗಳೂ ಶಿವನ ಪೂಜೆ ಮಾಡುತ್ತಾರೆ. ಲಿಂಗಾಯತರು ಶಿವನ ಆರಾಧಕರು. ಆದರೆ ಪ್ರಸ್ತುತ ಲಿಂಗಾಯತರು ನಾವು ಹಿಂದೂಗಳಲ್ಲ ಎಂದು ಹೇಳುವುದಾದರೆ ಮತ್ತೆ ಯಾರು ಹಿಂದೂಗಳು ಅಂತ ಉತ್ತರ ನೀಡಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಪೇಜಾವರಶ್ರೀಗಳು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ವಿಚಾರವಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಲಿಂಗಾಯತ ಧರ್ಮದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಎಲ್ಲರೂ ಒಂದಾಗಿ ಇರುವುದು ಉತ್ತಮ. ಅದರಿಂದ ಲಿಂಗಾಯತ ಸಮುದಾಯಕ್ಕೆ ಬಲ ಬರುತ್ತದೆ. ಹಿಂದೂ ಧರ್ಮದಿಂದ ಲಿಂಗಾಯತ ಬೇರೆ ಬೇರೆ ಅಂತಾರೆ. ಆದರೆ ಶಿವನೇ ಸರ್ವೋತ್ತಮ ಎಂದು ಸಹ ಪೂಜಿಸುತ್ತಾರೆ. ಅಲ್ಲದೆ ಪಂಚಾಕ್ಷರಿ ಜಪ, ಲಿಂಗ ಪೂಜೆ ಸಹ ಮಾಡುತ್ತಾರೆ. ಇವನ್ನೆಲ್ಲ ಒಪ್ಪಿದ ಮೇಲೆ ಹಿಂದೂ ಅಲ್ಲ ಅನ್ನೋದು ಹೇಗೆ ಸಾಧ್ಯ. ಬೇರೆಯಾಗೋದು ಹೇಗೆ.? ಹಿಂದೂಗಳಲ್ಲ ಅನ್ನೋದು ಹೇಗೆ ಎಂದಿ ಪೇಜಾವರಶ್ರೀಗಳು ಪ್ರಶ್ನಿಸಿದ್ದಾರೆ.
ಜಾತಿ ವ್ಯವಸ್ಥೆಗೆ ವಿರೋಧ ಮಾಡುತ್ತಾರೆ ಎಂದಾದರೆ ಅವರು ಹಿಂದೂಗಳಲ್ಲವೇ..? ಅದು ಹೇಗೆ ಸಾಧ್ಯ. ಜಾತಿ ವ್ಯವಸ್ಥೆ ಒಪ್ಪದ ಸಾಕಷ್ಟು ಪರಂಪರೆ ಹಿಂದೂಗಳಲ್ಲಿ ಇದೆ. ಜಾತಿ ವ್ಯವಸ್ಥೆ ಒಪ್ಪದಿದ್ದರೆ ಹಿಂದೂಗಳಲ್ಲ ಎನ್ನಲಾಗದು. ಯಾವ ಕಾರಣಕ್ಕೆ ನೀವು ಹಿಂದೂಗಳಲ್ಲ ಹೇಳಿ. ನಮ್ಮನ್ನು ಬಿಟ್ಟು ಹೋಗಬೇಡಿ. ಸಹೋದರ ಭಾವದಿಂದ ನಾನು ಸಲಹೆ ನೀಡುತ್ತಿದ್ದೇನೆ ಎಂದರು.
ಬಸವಣ್ಣನವರ ದುರಂತಕ್ಕೆ ಬ್ರಾಹ್ಮಣರೇ ಕಾರಣ ಅನ್ನೋದು ಸರಿಯಲ್ಲ. ಹಳೇ ಕಾಲದಲ್ಲಿ ನಡೆದ ಯಾವುದೋ ತಪ್ಪಿಗೆ ಪ್ರಸ್ತುತ ಬ್ರಾಹ್ಮಣರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಹಿಂದೆ ಆದ ಅನ್ಯಾಯಕ್ಕೆ ಈಗಿನ ಬ್ರಾಹ್ಮಣರ ಮೇಲೆ ಸೇಡಿನ ರೀತಿಯ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಮಾಧ್ವರಿಂದ ಬಸವಣ್ಣನಿಗೆ ಏನೂ ಅನ್ಯಾಯವಾಗಿಲ್ಲ. ಬ್ರಾಹ್ಮಣರಿಂದ ಅನ್ಯಾಯ ಆಗುತ್ತೆ ಅನ್ನೋ ಭಯಬೇಡ ಎಂದು ಪೇಜಾವರಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.