ಶಹಾಪುರಃ ನಾಗರ ಪಂಚಮಿಗೆ ಮಳೆ ತಂದ ನಿಸರ್ಗ ಸುಗ್ಗಿ
ಶಹಾಪುರಃ ಸಗರಾದ್ರಿ ಬೆಟ್ಟಕ್ಕೆ ಪಿಕಿನಿಕ್‍ಗೆ ಬಂದ ಜನಸ್ತೋಮ
ಶಹಾಪುರಃ ಸಗರಾದ್ರಿ ಬೆಟ್ಟಕ್ಕೆ ಪಿಕಿನಿಕ್‍ಗೆ ಬಂದ ಜನಸ್ತೋಮ
ಝುಳು ಝುಳು ಹರಿಯುವ ನೀರಿನ ನಿನಾದ, ಪ್ರಕೃತಿ ಸೌಂದರ್ಯಕ್ಕೆ ಮನಸೋತ ಜನತೆ
ಮಲ್ಲಿಕಾರ್ಜುನ ಮುದ್ನೂರ
yadgiri, ಶಹಾಪುರಃ ಕಳೆದ ಎರಡು ದಿನದಿಂದ ಸುರಿದ ಭಾರಿ ಮಳೆಯಿಂದಾಗಿ ನಗರದ ನಾಗರ ಕೆರೆ, ಮಾವಿನ ಕೆರೆ ತುಂಬಿ ತುಳುಕುತ್ತಿದ್ದು, ಅಲ್ಲದೆ ಸಗರಾದ್ರಿ ಬೆಟ್ಟದಲಿ ಹರಿಯುವ ಧಬ್ ಧಬೆ ಫಾಲ್ಸ್ ಸೌಂದರ್ಯ ಸವಿಯಲು ಜನಸ್ತೋಮವೇ ಬೆಟ್ಟದ ಹಲವಡೆ ಗುಂಪು ಗುಂಪಾಗಿ ಆಗಮಿಸಿ ನಿಸರ್ಗ ಸೌಂದರ್ಯವನ್ನು ಸವಿಯುತ್ತಿರುವದು ಬುಧವಾರ ಕಂಡು ಬಂದಿತು.
ಒಂದಡೆ ಭಾರಿ ಮಳೆಯಿಂದಾಗಿ ನಗರದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಿ ನಷ್ಟ ಉಂಟಾದರೆ, ಇನ್ನೊಂದಡೆ ಸಗರಾದ್ರಿ ಬೆಟ್ಟದ ಸೌಂದರ್ಯವನ್ನು ಹೆಚ್ಚಿಸಿದೆ. ಹೀಗಾಗಿ ಪ್ರಕೃತಿ ಪ್ರಿಯರು ಬೆಟ್ಟಕ್ಕೆ ತೆರಳಿ ನಿಸರ್ಗ ಸೌಂದರ್ಯ ಸವಿದು ಕುಣಿದು ಕುಪ್ಪಳಿಸಿದರೆ, ವ್ಯಾಪಾರಸ್ಥರು ಮಳೆಯಿಂದಾಗಿ ಉಂಟಾದ ನಷ್ಟಕ್ಕೆ ಮರಗುವಂತಾಗಿದೆ.
ನಾಗರ ಪಂಚಮಿ ಹಬ್ಬದ ಅಂಗವಾಗಿ ಮನೆಯಲ್ಲಿ ರವೆ ಉಂಟೆ, ಸೇಂಗಾ-ಬೆಲ್ಲದುಂಡೆ, ಚಕಲಿ, ಕೋಡುಬೇಳೆ, ಶಂಕರಪಾಳೆ ಸೇರಿದಂತೆ ವಿವಿಧ ಖಾದ್ಯ ಪದಾರ್ಥಗಳನ್ನು ಕಟ್ಟಿಕೊಂಡು ಒಂದು ದಿನದ ಪಿಕ್‍ನಿಕ್‍ಗಾಗಿ ಸಗರಾದ್ರಿ ಬೆಟ್ಟದ ವಿಶೇಷ ಸ್ಥಳಗಳಾದ ಸಿದ್ಧಲಿಂಗೇಶ್ವರ ಬೆಟ್ಟ, ಕೋಟೆಯೊಳಗಿನ ಮಂದಾಕಿನಿ, ತಾವರೆಗೆರೆ ಇತರಡೆ ಕುಟುಂಬಸ್ಥರು, ಮಕ್ಕಳು, ಯುವಕ-ಯುವತಿಯರು ತೆರಳಿ ಪ್ರಕೃತಿ ಸೌಂದರ್ಯ ಸವಿಯುವದರಲ್ಲಿ ನಿರತರಾಗಿರುವದು ಕಂಡು ಬಂದಿತು. ವಿಶೇಷವಾಗಿ ಧಬ್ ಧಬೆ ಫಾಲ್ಸ್‍ನಲ್ಲಿ ಮಕ್ಕಳು ನೀರಲ್ಲಿ ಆಟವಾಡವು ಮೂಲಕ ಖುಷಿ ಪಟ್ಟರು.
ನಳನಳಿಸಿದ ಕೆರೆಗಳ ಸೌಂದರ್ಯ
ಶಹಾಪುರಃ ಕಳೆದ ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ನಗರದ ಪ್ರಮುಖವಾಾದ ಎರಡು ಕೆರೆಗಳಾದ ನಾಗರ ಕೆರೆ ಮತ್ತು ಮಾವಿನ ಕೆರೆ ತುಂಬಿ ನಳನಳಿಸುತ್ತಿರುವದು ನೋಡಲು ಎರಡು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.
ಮಾವಿನ ಕೆರೆ ಒಡ್ಡಿನ ಸುತ್ತಲೂ ಸಿಮೆಂಟ್ ರಸ್ತೆ ಇರುವದರಿಂದ ನಿತ್ಯ ಆ ರಸ್ತೆ ಮೇಲೆ ವಾಕಿಂಗ್ ಮಾಡುುವ ಜನ. ಇದೀಗ ನಳನಳಿಸುತ್ತಿರುವ ನೀರನ್ನು ಕಂಡು ಸಂತಸ ವ್ಯಕ್ತಪಡಿಸುತ್ತಾರೆ.
ಇಡಿ ಕೆರೆ ತುಂಬಿ ತುಳುಕುತ್ತಿದ್ದು, ಹಿಂಬದಿ ಬೆಟ್ಟ ಹಸಿರು ವಾತಾವರಣ ಆಹ್ಲಾದಕರವಾಗಿದೆ ಎನ್ನುತ್ತಾರೆ ಪ್ರಕೃತಿ ಪ್ರಿಯರು. ಅಲ್ಲದೆ ಎರಡು ಕೆರೆ ತುಂಬಿರುವದರಿಂದ ನಗರದ ಕೊಳವೆಬಾವಿಯಲ್ಲಿ ಬೇಸಿಗೆಗೆ ಬತ್ತಿ ಹೋಗಿದ್ದ ಅಂತರಜಲ ಮಟ್ಟ ಹೆಚ್ಚಾಗಲಿದೆ ಎಂದು ಶಿಕ್ಷಕ ಬಸವರಾಜ ಚಲವಾದಿ ಆಶಯ ವ್ಯಕ್ತಪಡಿಸಿದ್ದಾರೆ.