ನಾಯಿ ಮರಿಗೆ ಹಾಲುಣಿಸುತ್ತಿರುವ ಮಾತೃ ಹೃದಯಿ……..?
ಹೆತ್ತ ಮಗುವಿಗೆ ಹಾಲುಣಿಸದವರ ಕಾಲವಿದು..!
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿಃ ಹಂದಿ ಎಂದ ತಕ್ಷಣ ಎಲ್ಲರೂ ಹೊಲಸು ಎಂದು ಮೂಗು ಮುಚ್ಚಿಕೊಳ್ಳುವವರು ಮೂಗು ಮುರಿಯುವವರೇ ಜಾಸ್ತಿ. ಆದರೆ ಜಿಲ್ಲೆಯ ಶಹಾಪುರ ನಗರದಲ್ಲಿ ಇದೇ ಹಂದಿಯೊಂದು ನಾಯಿ ಮರಿಗೆ ಹಾಲುಣಿಸುವ ಮೂಲಕ ಮಾತೃ ಹೃದಯ ಮೆರೆದಿದೆ.
ಹೌದು.. ಶಹಾಪುರ ನಗರದ ಬಸ್ ಡಿಪೋ ಹಿಂದುಗಡೆ ಇರುವ ಆಶ್ರಯ ಕಾಲೊನಿಯಲ್ಲಿ ನಾಯಿಯೊಂದು ಹಲವು ಮರಿಗಳಿಗೆ ಜನ್ಮ ನೀಡಿ ಮೃತಪಟ್ಟಿದೆ. ಆದರೆ ಹಂದಿಯೊಂದು ಈ ನಾಯಿಮರಿಗಳಿಗೆ ನಿತ್ಯ ಹಾಲುಣಿಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ತೋರುತ್ತಿದೆ.
ಹಂದಿ ಎಂದರೆ ಕಲ್ಲಲಿ ಹೊಡೆಯುವ ಜನರು, ಇಂದು ಹಂದಿ ತನ್ನ ಮರಿಗಳಲ್ಲದ ಬೇರೆ ಪ್ರಾಣಿಯ ನಾಯಿ ಮರಿಗಳಿಗೆ ಹಾಲುಣಿಸುತ್ತಿರುವದನ್ನು ಕಂಡು ನಾಗರಿಕರು ಮೂಕ ಪ್ರೇಕ್ಷಕರಾಗಿದ್ದಾರೆ.
ಹಂದಿಯಲ್ಲಿರುವ ಮಹತ್ವದ ಗುಣ ಕನಿಕರ, ತಾಯಿ ಹೃದಯ, ಅಪಾರ ಪ್ರೀತಿ ವಾತ್ಸಲ್ಯ ಕಂಡು ನಿಬ್ಬೆರಗಾಗಿದ್ದಾರೆ.
ಪ್ರಾಣಿಗಳಲ್ಲಿಯೇ ಅಪಾರ ಜ್ಞಾನ ಹೊಂದಿದ್ದ ಮತ್ತು ಮಾತು ಬಲ್ಲ ಮನುಷ್ಯ ಜಾತಿಯ ತಾಯಂದಿರು ಪ್ರಸ್ತುತ ದಿನಗಳಲ್ಲಿ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಭ್ರಮೆಯಿಂದ ಸ್ವತಃ ತಾವೇ ಹೆತ್ತ ಮಗುವಿಗೆ ಹಾಲುಣಿಸದೆ ಬಾಟಲಿ ಹಾಲು (ಡೈರಿ) ಕುಡಿಸುವದನ್ನು ನಾವೆಲ್ಲ ಕಂಡಿದ್ದೇವೆ ಕೇಳಿದ್ದೇವೆ.
ಇಂತಹ ಸಂಧಿಗ್ಧ ಕಾಲಘಟ್ಟದಲ್ಲಿ ಹಂದಿ ತನ್ನದಲ್ಲದ ಬೇರೆ ಜಾತಿಯ ಮರಿಗಳಿಗೆ ಹಾಲುಣಿಸುತ್ತಿರುವುದು ನಿಜಕ್ಕೂ ಪರಮಾಶ್ಚರ್ಯ, ಹಂದಿಯ ಗುಣ ಮೆಚ್ಚುವಂತದ್ದು. ಇದು ಅಪರೂಪದ ಘಟನೆ ಮಹಿಳೆಯರ ಮಾತೃ ಹೃದಯವನ್ನು ಕೆಣುಕುವಂತಿದೆ ಎಂದರೂ ತಪ್ಪಿಲ್ಲ.
ಈ ಹಂದಿಯನ್ನು ನೋಡಿ ನಾವೆಲ್ಲ ಜೀವನ ಸುಧಾರಿಸಿಕೊಳ್ಳುವಂತಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಹಂದಿ ಮೊಲೆಯಲಿ ಹಾಲಿವೆ ಎಂದಾದರೆ, ಅದು ತನ್ನ ಮರಿಗಳನ್ನು ಹೆತ್ತಿರಬೇಕಲ್ಲವೇ.? ಹಂದಿ ಮರಿಗಳು ಎಲ್ಲಿವೆ.? ಎಂದು ಪ್ರಶ್ನಿಸುವ ಮೂಲಕ ಹುಡುಕಾಟ ನಡೆಸಿದ ಪುಣ್ಯಾತ್ಮರು ಇಲ್ಲಿದ್ದಾರೆ.
ಈ ಹಂದಿ ತಾ ಹೆತ್ತ ಮಕ್ಕಳನ್ನು ಬಿಟ್ಟು ಬೇರೆ ಪ್ರಾಣಿ ಹೆತ್ತ ಮರಿಗಳಿಗೆ ಅದ್ಹೇಗೆ ಹಾಲುಣಿಸುತ್ತಿದೆ ಎಂದು ತಲೆ ಕೆಡಿಸಿಕೊಂಡ ಜ್ಞಾನಿಗಳು ಇಲ್ಲಿದ್ದಾರೆ. ಅಷ್ಟರಲ್ಲಿ ಹಂದಿ ಮರಿಗಳನ್ನು ಯಾರೋ ಹೊತ್ತೊಯ್ದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ನಾಯಿಯೊಂದು ಮರಿಗಳನ್ನು ಹೆತ್ತ ಎರಡೇ ದಿನದಲ್ಲಿ ಮೃತಪಟ್ಟಿದೆ. ನಂತರ ಒಂದು ದಿನ ಪೂರ್ತಿ ಪರದಾಡಿದ ಆ ನಾಯಿ ಮರಿಗಳಿಗೆ. ನಂತರ ಆಸರೆಯಾಗಿದ್ದು ಇದೇ ಹಂದಿ. ನಿತ್ಯ ಅವುಗಳಿಗೆ ಹಾಲುಣಿಸುತ್ತಿದೆ. ನಾಯಿ ಮರಿಗಳು ಹಂದಿಯ ಮಾತೃಪ್ರೇಮದಲ್ಲಿ ಬೆಳೆಯುತ್ತಿರುವುದು ನಿಜಕ್ಕೂ ಆಶ್ಚರ್ಯ.
-ಮಲ್ಲಯ್ಯ ಪೋಲಂಪಲ್ಲಿ. ಬಡಾವಣೆ ನಿವಾಸಿ.