ಪಿಎಲ್‍ಡಿ ಬ್ಯಾಂಕ್‍ಃ ಮರು ಚುನಾವಣೆಗೆ ಆದೇಶ, ಬ್ಯಾಂಕ್ ಸುಪರಸೀಡ್‍ಗೆ ಗುಂಡಗುರ್ತಿ ಆಗ್ರಹ
ಪಿಎಲ್‍ಡಿ ಬ್ಯಾಂಕ್ ಸುಪರಸೀಡ್‍ಗೆ ಗುಂಡಗುರ್ತಿ ಆಗ್ರಹ
ಮೃತರ ಹೆಸರಿನಲ್ಲಿ ಮತದಾನ ಆರೋಪ, ಆಡಳಿತ ಮಂಡಳಿ ರದ್ದತಿಗೆ ಆಗ್ರಹ
yadgiri, ಶಹಾಪುರಃ ಸಹಕಾರಿ ನಿಯಮಗಳನ್ನು ಗಾಳಿಗೆ ತೂರಿದ ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ವಿಚಾರದಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ 13-ಡಿ ಉಲ್ಲಂಘನೆಯಾಗಿರುವ ಮತದಾರರ ಪಟ್ಟಿಯೂ ದೋಷದಿಂದ ಕೂಡಿರುವದರಿಂದ ಪುನಃ ನಿಯಮನುಸಾರ ಮತದಾರರ ಪಟ್ಟಿ ತಯಾರಿಸಿ ಮರು ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಉಪ ನಿಬಂಧಕರು ಯಾದಗಿರಿ ಅವರು ಆದೇಶಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೂರುದಾರ ಬಸವರಾಜ ಅರುಣಿ, ಶಹಾಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಿ) ಚುನಾವಣೆ ಪ್ರಕ್ರಿಯೆ ನಿಯಮನುಸಾರ ನಡೆಸದೆ ಅಕ್ರಮ ಎಸಗಿರುವ ಕುರಿತು ಸಹಕಾರ ಸಂಘಗಳ ಕಾಯ್ದೆ 1959 ಕಲಂ 70(ಎ) ರಡಿ ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವು. ಇದೀಗ ತಮ್ಮ ಪರವಾಗಿ ಆದೇಶ ಹೊರಬಿದ್ದ ಕಾರಣ ಹೋರಾಟದಲ್ಲಿ ನ್ಯಾಯಕ್ಕೆ ಬಲ ಬಂದಿದೆ ಎಂದು ಬಸವರಾಜ ಅರುಣಿ ತಿಳಿಸಿದರು. ಈ ಕುರಿತು ಪಕ್ಷಾತೀತವಾಗಿ ಹೋರಾಟ ಮಾಡಲಾಗಿದ್ದು, ನ್ಯಾಯದ ಪರವಾಗಿ ಸಮಾನ ಮನಸ್ಕರು ಒಗ್ಗಟ್ಟಾಗಿ ಅಕ್ರಮ, ಅವ್ಯವಹಾರದ ವಿರುದ್ಧ ಹೋರಾಟ ನಡೆಸಿರುವ ಕಾರಣ ಜಯ ತಮ್ಮ ಪಾಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ್ದ ಡಾ.ಚಂದ್ರಶೇಖರ ಸುಬೇದಾರ ಮಾತನಾಡಿ, ಹಲವಾರು ವರ್ಷಗಳಿಂದ ಪಿಕಾರ್ಡ್ ಬ್ಯಾಂಕ್‍ನಲ್ಲಿ ಅಧಿಕಾರ ವಹಿಸಿಕೊಂಡು ಕೋಟ್ಯಂತರ ರೂಪಾಯಿ ಗೋಲ್‍ಮಾಲ್ ಮಾಡಿರುವ ಕುರಿತು ಇದೀಗ ಬಯಲಾಗಲಿದೆ. ರೈತರ ಹೆಸರಲ್ಲಿ ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ ತಾವೇ ಸಾಲ ಪಡೆದುಕೊಂಡಿದ್ದು, ಬ್ಯಾಂಕ್‍ಗೆ ವಂಚನೆ ಮಾಡಿದ್ದಾರೆ. ರೈತರಿಗೆ ಸಹಕಾರವಾಗಬೇಕಿದ್ದ ಬ್ಯಾಂಕ್ ಕಳ್ಳ ಖದೀಮರ ಪಾಲಾಗುತ್ತಿದೆ ಎಂದು ವಿಷಾಧಿಸಿದರು. ಈ ಕುರಿತ ಜನರಹಿತ ಬಯಿಸಿ ಪಕ್ಷಾತೀತವಾಗಿ ಹೋರಾಟ ಆರಂಭಿಸಲಾಗಿದೆ. ಇದರಿಂದ ತಾಲೂಕಿನ ರೈತರಿಗೆ ಅನುಕೂಲವಾದರೆ ಸಾಕು ಎಂದರು.
ಸೀಮಿತ ಜನರ ಒಡೆತನದಲ್ಲಿ ಪಿಕಾರ್ಡ್-ಸಿದ್ರಾಮರಡ್ಡಿ ಆರೋಪ
ಶಹಾಪುರ ಪಿಕಾರ್ಡ್ ಬ್ಯಾಂಕ್ ಕಳೆದ ಹಲವಾರು ವರ್ಷದಲ್ಲಿ ಸೀಮಿತ ಜನರ ಅಧಿಕಾರ ಒಡೆತನದಲ್ಲಿದೆ. ರೈತರ ಹೆಸರಲ್ಲಿ ಕೊಟ್ಟಿ ಸಹಿ ಮಾಡಿ ಲಕ್ಷಾಂತರ ರೂಪಾಯಿ ಸಾಲ ಎತ್ತಿದ್ದಾರೆ ಎಂದು ಕಲ್ಬುರ್ಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ರಾಮರಡ್ಡಿ ಗುಂಡಗುರ್ತಿ ಆರೋಪಿಸಿದರು.
ಒಟ್ಟು 2000 ಮಂದಿ ಸದಸ್ಯರಲ್ಲಿ ಕೇವಲ 180 ಮಂದಿ ಮಾತ್ರ ಮತದಾನ ಮಾಡಲು ಅರ್ಹರಂತೆ. ತಮಗೆ ಬೇಕಾದವರನ್ನು ಮತದಾರರನ್ನಾಗಿ ಮಾಡಿಕೊಂಡು ಉಳಿದವರಿಗೆ ಯಾವುದೇ ಮಾಹಿತಿ ನೀಡಿದೆ ತಾವೇ ಆಡಳಿತ ನಿರ್ದೇಶಕರಾಗಿ ಬ್ಯಾಂಕ್ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ಹುನ್ನಾರವನ್ನು ಸದ್ಯ ಆಯ್ಕೆಗೊಂಡ ನಿರ್ದೇಶಕರದ್ದಾಗಿದೆ ಎಂದು ದೂರಿದರು. ಮೃತಪಟ್ಟು 20 ವರ್ಷಗಳು ಕಳೆದರು ಮೃತರ ಹೆಸರಿನಡಿ ಮತದಾನ ಮಾಡಿದ ಸಾಕ್ಷಿ ಆಧಾರಗಳಿವೆ. ಕೊಟ್ಟಿ ಮತದಾನ ಪಟ್ಟಿ ತಯಾರಿಸಿದ್ದಾರೆ. ಈ ಕುರಿತು ದೂರು ನೀಡಲಾಗಿತ್ತು. ಪ್ರಸ್ತುತ ದೂರನ್ನು ಪರಿಶೀಲಿಸಲಾಗಿ ನೂತನ ಮತದಾರರ ಪಟ್ಟಿ ತಯಾರಿಸಿ ಪುನಃ ಚುನಾವಣೆ ಮಾಡುವಂತೆ ಆದೇಶಿ ಬಂದಿದೆ.
ಪಿಕಾರ್ಡ್ ಬ್ಯಾಂಕ್‍ನಲ್ಲಿ ಭ್ರಷ್ಟಾಚಾರ ನಡೆದರೂ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗದಂತೆ ನುಣ್ಣಗೆ ನುಳಿಚಿಕೊಳ್ಳುವ ಕಾರ್ಯದರ್ಶಿಗಳ ಸಾಹಸ, ಸಹಕಾರ ಕ್ಷೇತ್ರವನ್ನೆ ಮೀರಿಸುವಂತದ್ದಾಗಿದೆ. ಮುಖ್ಯವಾಗಿ ಕೊಟ್ಟಿ ಮತದಾರರನ್ನು ಸೃಷ್ಟಿಸಿಕೊಂಡು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಬ್ಯಾಂಕ್‍ನ ಸಿಬ್ಬಂದಿ, ಆಪ್ತರು ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಹೀಗಾಗಿ ಪಿಕಾರ್ಡ್ ಬ್ಯಾಂಕ್ ದಿವಾಳಿಯತ್ತ ಸಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ 14 ಜನ ನಿರ್ದೇಶಕರ ಆಯ್ಕೆ ಅಸಿಂಧುಗೊಳಿಸಿ ಕೂಡಲೇ ಬ್ಯಾಂಕ್‍ನ್ನು ಸುಪರ್ ಸೀಡ್ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚನ್ನಪ್ಪಗೌಡ ಶಿರವಾಳ, ಅಡಿವೆಪ್ಪ ಜಾಕಾ, ಮೋನಪ್ಪ ಕಿಣ್ಣಿ, ರಾಜಶೇಖರ ಗೂಗಲ್, ಮಲ್ಲನಗೌಡ ಸಿಂಗನಳ್ಳಿ, ಲಾಲನಸಾಬ ಖುರೇಶೀ, ಶಿವಶರಣಪ್ಪ ಹಯ್ಯಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.