ಜನಮನ

ಆ ಜನ ಜೀವದ ಹಂಗು ತೊರೆದು ನದಿ ದಾಟಿದ್ದೇಕೆ ಗೊತ್ತಾ ಸ್ವಾಮಿ!

-ಮಲ್ಲಿಕಾರ್ಜುನ ಮುದನೂರ್

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಸವಸಾಗರ ಜಲಾಶಯದಿಂದ 1.50.000 ಕ್ಲೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಜಲಾಶಯದ ಕೆಳಭಾಗದಲ್ಲಿರುವ ನೀಲಕಂಠರಾಯನಗಡ್ಡಿ ನಡುಗಡ್ಡೆಯಂತಾಗಿದೆ. ಆದರೆ, ಬೆಳಗ್ಗೆಯಷ್ಟೇ ಕಕ್ಕೇರಾ ಪಟ್ಟಣಕ್ಕೆ ಬಂದಿದ್ದ ಕೆಲ ನೀಲಕಂಠರಾಯನಗಡ್ಡಿ ಗ್ರಾಮಸ್ಥರು ಮಾತ್ರ ಕಿಂಚಿತ್ತೂ ಭಯಗೊಂಡಿಲ್ಲ. ಬದಲಾಗಿ ಮದ್ಯಾನದ ಹೊತ್ತಿಗೆ ಈಜುತ್ತಲೇ ಕೃಷ್ಣಾ ನದಿ ದಾಟಿ ಗ್ರಾಮಕ್ಕೆ ತೆರಳಿದ್ದಾರೆ.

ಕಾರಣ ನೀಲಕಂಠರಾಯನಗಡ್ಡಿಯ ಮನೆಗಳಲ್ಲಿರುವ ನಮ್ಮ ಜನ ನಮ್ಮನ್ನೇ ಕಾದು ಕುಳಿತಿರುತ್ತಾರೆ. ನಮಗೇನು ಗತಿ ಆಯಿತೋ ಎಂದು ಆತಂಕಗೊಳ್ಳುತ್ತಾರೆ. ಅಂತೆಯೇ ಅವರು ಇನ್ಯಾವ ಸ್ಥಿತಿಯಲ್ಲಿದ್ದಾರೋ ಎಂದು ನಮಗೂ ಆತಂಕವಿದ್ದೇ ಇರುತ್ತದೆ. ಅಷ್ಟೇ ಅಲ್ಲದೆ ಆಹಾರ ಸಾಮಗ್ರಿಗಳನ್ನು ಸಹ ನಾವು ಕೊಂಡೊಯ್ಯಬೇಕಿದೆ, ನಾವು ನೀರಿಗೆ ಹೆದರಿಕೊಂಡ ಕುಳಿತರೆ ನಡುಗಡ್ಡೆಯಲ್ಲಿ ಉಳಿದವರ ಗತಿಯೇನು ಎಂಬುದು ಜೀವದ ಹಂಗು ತೊರೆದು ನದಿಯಲ್ಲಿ ಈಜಾಡುತ್ತ ಮರಳಿ ನಡುಗಡ್ಡೆಗೆ ಹೊರಟವರ ಪ್ರಶ್ನೆ ಆಗಿದೆ.

ನಿಜಕ್ಕೂ ನೀಲಕಂಠರಯನಗಡ್ಡಿಯ ಜನ ನಿಜವಾದ ಮಾನವ ಪ್ರೀತಿಯನ್ನೊಳಗೊಂಡ ಕರುಳಬಳ್ಳಿಯ ಜನರೇ ಆಗಿದ್ದಾರೆ.  ಕೃಷ್ಣಾ ನದಿಗೆ ಭರ್ತಿ ಸೆಳವಿದ್ದರೂ ಸಹ ಜೀವಭಯವಿಲ್ಲದೆ ತಮ್ಮವರಿಗಾಗಿ ಈಜುತ್ತಾ ಮರಳಿ ನಡುಗಡ್ಡೆಗೆ ತೆರಳುತ್ತಾರೆ. ಪ್ರೀತಿ, ಸಂಬಂಧಗಳಿಗಾಗಿ ಜೀವ ಸಮರ್ಪಿಸುವ ಭಾವಜೀವಿಗಳನ್ನು ಕಂಡು ಎಂಥವರ ಮನವೂ ಕರಗುತ್ತದೆ. ಇಂಥ ಸೆಳವಿರುವ ನದಿಯಲ್ಲಿ ಈಜುತ್ತ ಸಾಗುವುದು ಅಪಾಯಕಾರಿ ಎಂಬ ಮಾತು ಎಂಥವರಿಗೂ ಬಾಯಿಗೆ ಬರುತ್ತದಾದರೂ ಅವರನ್ನು ತಡೆಯುವದು ಮಾತ್ರ ಕಷ್ಟಸಾಧ್ಯ.

ನೀಲಕಂಠರಾಯನಗಡ್ಡೆ ಗ್ರಾಮದ ಜನರ ಈ ಸಮಸ್ಯೆ ಈವತ್ತು ನಿನ್ನೆಯದಲ್ಲ. ಬದಲಾಗಿ ಸುಮಾರು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಉಲ್ಬಣಿಸುತ್ತದೆ. ಆಯಾ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆ ಪರಿಹಾರದ ಸೂತ್ರಗಳನ್ನು ಹೆಣೆದು ಭರವಸೆ ನೀಡುತ್ತಾರೆ. ಆದರೆ, ಕಾಲ ಕ್ರಮೇಣ ನಡುಗಡ್ಡೆ ಜನರನ್ನೇ ಮರೆಯುತ್ತಾರೆ. ಪರಿಣಾಮ ಪ್ರತಿ ಮಳೆಗಾಲದಲ್ಲೂ ನೀಲಕಂಠರಾಯನಗಡ್ಡಿಯ ಜನ ಜೀವಭಯದೊಂದಿಗೆ ಬದುಕು ನಡೆಸುವಂತಾಗಿದೆ.

ಸರ್ಕಾರ ಇನ್ನಾದರೂ ನೀಲಕಂಠರಾಯನಗಡ್ಡಿಯ ಜನರತ್ತ ಕಣ್ಣು ಹರಿಸಬೇಕಿದೆ. ಶೀಘ್ರಗತಿಯಲ್ಲಿ ಇಲ್ಲಿನ ಜನರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೇವಲ ಭರವಸೆಯ ಮಾತುಗಳನ್ನು ಹೇಳಿ ಕೈತೊಳೆದುಕೊಳ್ಳುವ ಬದಲು ಶಾಶ್ವತ ಪರಿಹಾರದ ಯೋಜನೆ ರೂಪಿಸಬೇಕಿದೆ. ಆ ಮೂಲಕ ನೀಲಕಂಠರಾಯನಗಡ್ಡಿಯ ಜನರಿಗೂ ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸಿ ಸರ್ಕಾರ ಇದೆ ಎಂಬುದನ್ನು ಸಾಬೀತುಪಡಿಸಬೇಕಿದೆ.

Related Articles

Leave a Reply

Your email address will not be published. Required fields are marked *

Back to top button