ಪ್ರೀತಿ, ಕಾಳಜಿ ನೋವುಗಳನ್ನು ಕಳೆಯುವ ಸಂಜೀವಿನಿ
ಪ್ರೀತಿ ಹಂಚುತ್ತ ಹೋದರೆ ಜಗವೆಲ್ಲ ಆನಂದದ ಮೆರವಣಿಗೆ…ಸಂಪೂರ್ಣ ಓದಿ
ಭೌತಿಕ ಸುಖ-ಸೌಲಭ್ಯಗಳ ಬೆನ್ನತ್ತಿರುವ ಜನರಲ್ಲಿ ಸಾರ್ಥಕತೆ ಒದಗುವುದು ಪ್ರೀತಿ, ಭಾವನಾತ್ಮಕ ಬೆಂಬಲದಿಂದಲೇ ಎಂಬುದರ ಅರಿವು ಗಟ್ಟಿಯಾಗುತ್ತಿದೆ. ಸಂಬಂಧಗಳು ಬಲಗೊಳ್ಳುವುದು, ನೆಮ್ಮದಿ ಶಾಶ್ವತವಾಗಿ ನೆಲೆಸುವುದು, ಕಷ್ಟಗಳು ಕಳೆಯುವುದು ಪ್ರೀತಿ ಎಂಬ ಮಹಾಮಂತ್ರದಿಂದಲೇ. ಹಾಗಾಗಿ, ಪ್ರೀತಿಯೆಂಬ ಜೀವನದಿ ನಮ್ಮ ಹೃದಯದಂಗಳದಲ್ಲಿ ಹರಿಯುತ್ತಿರಬೇಕು. ಪ್ರೀತಿ ಹಂಚುತ್ತ ಹೋದರೆ ಜಗವೆಲ್ಲ ಆನಂದದ ಮೆರವಣಿಗೆ!
ಎಲ್ಲೆಡೆ ಸ್ವಾರ್ಥದ ಕೋಟೆಗಳು ಭದ್ರವಾಗುತ್ತ ಸಂಬಂಧ, ಸಂವೇದನೆಗಳು ಅದರಲ್ಲಿ ಬಂದಿಯಾಗುತ್ತಿರುವ, ಭಾವನೆಗಳು ಬರಿದಾಗುತ್ತಿರುವ ಘೊರ ತಲ್ಲಣದಲ್ಲಿ ಮಾನವನ ಹೃದಯದಂಗಳದಲ್ಲಿ ಹಾಯಾದ ತಂಗಾಳಿ ಬೀಸಿ, ಖುಷಿಯ ಜೋಗ ಧುಮ್ಮಿಕ್ಕುವುದು ಹೇಗೆ? ಇದಕ್ಕೆಲ್ಲ ಒಂದೇ ಔಷಧ! ಅದು ದುಬಾರಿಯೂ ಅಲ್ಲ, ದುಸ್ತರವೂ ಅಲ್ಲ. ಅದರ ಹೆಸರೇ ಪ್ರೀತಿ!!
ಪ್ರೀತಿಗೆ ಅರ್ಥ ಹುಡುಕಬೇಕಿಲ್ಲ, ವ್ಯಾಖ್ಯೆ ಕೊಡಬೇಕಿಲ್ಲ, ಏಕೆಂದರೆ ಅದು ಪರಿಶುದ್ಧ, ಪ್ರಫುಲ್ಲ, ಪರಿಪೂರ್ಣ. ಈ ಜಗ ಸಹ್ಯವಾಗಲು, ಸುಂದರವಾಗಲು, ನಾವು ಖುಷಿ-ಖುಷಿ ಯಾಗಿರಲು ಪ್ರೀತಿ ಹಂಚುತ್ತಾ ಹೋದರೆ ಸಾಕು ಎಲ್ಲವೂ ಚೇತೋಹಾರಿ ಎನಿಸಲು ಶುರುವಾಗುತ್ತದೆ. ಅಲ್ಲವೇ? ಪ್ರೀತಿ ಹಂಚೋದು ಹೇಗೆ ಎಂಬ ಪ್ರಶ್ನೆ ಕಾಡಿದರೆ ಮೊದಲು ಈ ಎರಡು ಘಟನೆ ಓದಿ.
ಹಾಲುಗಲ್ಲದ, ಮುದ್ದುಮುಖದ ಬಾಲಕ ಝಾವೋ ವೆನಾನ್. ಚೀನಾದ ಹೆನ್ನಾನ್ ಪ್ರಾಂತ್ಯದ 7 ವರ್ಷದ ಬಾಲಕ ಈತ. ತಂದೆ-ತಾಯಿ ಇಬ್ಬರೂ ಎರಡು ವರ್ಷದ ಮುಂಚೆ ಅಗಲಿದ್ದಾರೆ. ಝಾವೋಗಿಂತ ಮೂರು ವರ್ಷ ದೊಡ್ಡವಳಿರುವ ಈತನ ಅಕ್ಕನಿಗೆ ಕಿಡ್ನಿ ಸಮಸ್ಯೆ ಇದೆ. ಕಳೆದ ವಾರ ಆಕೆಗೆ ಅಸಾಧ್ಯ ನೋವು ಬಾಧಿಸಿದಾಗ ಯಾರ ನೆರವಿಗೂ ಕಾಯದೆ ಝಾವೋ ತಾನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ.
ಅಷ್ಟೇ ಅಲ್ಲ, ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಈತ ಸಂತೈಸಿದ ಪರಿ (ವಿಡಿಯೋ) ಇದೆಯಲ್ಲ ಜಗತ್ತಿನ ಎಲ್ಲ ಅಕ್ಕ-ತಮ್ಮಂದಿರು, ಅಣ್ಣ-ತಂಗಿಯರು ನೋಡಬೇಕು. ಅಕ್ಕನ ಹಣೆ ಸವರುತ್ತ, ಕಣ್ಣೀರು ಒರೆಸುತ್ತ, ಕೆಲವೊಮ್ಮೆ ಗಲ್ಲಕ್ಕೆ ಮುತ್ತು ನೀಡುತ್ತ ಝಾವೋ ಪದೇಪದೆ ಹೇಳುತ್ತಿದ್ದದ್ದೇನು ಗೊತ್ತಾ? ‘ಅಕ್ಕಾ, ಅಳಬೇಡ. ಹೆದರಬೇಡ, ಏನೂ ಆಗುವುದಿಲ್ಲ, ನಾನಿದ್ದೇನಲ್ಲ. ನಾನು ಯಾವಾಗಲೂ ನಿನ್ನ ಜತೆಯೇ ಇರುತ್ತೇನೆ. ನೀನು ಹೀಗೆ ಅಳುತ್ತಿದ್ದರೆ ನನಗೂ ಅಳು ಬಂದುಬಿಡುತ್ತದೆ, ಪ್ಲಿಜ್ ಅಕ್ಕಾ ಅಳಬೇಡ, ಡಾಕ್ಟರ್ ಅಂಕಲ್ ಜತೆ ನಾನು ಮಾತಾಡ್ತೀನಿ…’ ಎಂದು ದೊಡ್ಡವರಂತೆ ಸಂತೈಸುತ್ತಿದ್ದ.
ಸುಮ್ಮನೇ ನಮ್ಮ ಅಥವಾ ನೆರೆಕೆರೆಯ ಮನೆಗಳ ದೃಶ್ಯ ಕಲ್ಪಿಸಿಕೊಳ್ಳಿ. ಏಳು ವರ್ಷದ ಮಗು ಇದ್ದರೆ ‘ಪುಟ್ಟಾ ಅಕ್ಕನಿಗೂ ಚಾಕಲೇಟ್ನ ಒಂದು ತುಂಡು ಕೊಡು‘ ‘ಅಕ್ಕನಿಗೂ ಆಟಿಕೆ ಕೊಡು‘ ಎನ್ನುವ ಮಾತುಗಳನ್ನು ಅದೆಷ್ಟೋ ಸಾರಿ ಕೇಳಿಸಿಕೊಂಡಿದ್ದೇವಲ್ಲ.
ಝಾವೋನ ಈ ದೃಶ್ಯಗಳು ಚೀನಾ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಹರಿದಾಡಿದಾಗ ಸಂಚಲನವೇ ಸೃಷ್ಟಿಯಾಯಿತು. ‘ಚೀನಾ ಡೇಲಿ‘ಯಲ್ಲಿ ಈ ಪೋಸ್ಟ್ನ್ನು 45 ಸಾವಿರ ಜನರು ಲೈಕ್ ಮಾಡಿದರೆ, 3 ಸಾವಿರಕ್ಕಿಂತ ಅಧಿಕ ಜನರು ಶೇರ್ ಮಾಡಿದ್ದಾರೆ. ಪರಿಣಾಮ, ಝಾವೋನ ಅಕ್ಕನ ಚಿಕಿತ್ಸೆಗೆ ನೆರವಿನ ಹಲವು ಹಸ್ತಗಳು ಮುಂದೆ ಬಂದಿವೆ. ಇಲ್ಲಿ ಝಾವೋ ಹಂಚಿದ್ದು ಶುದ್ಧ ಪ್ರೀತಿ, ಅದಕ್ಕೆ ಪ್ರತಿಯಾಗಿ ಸಮಷ್ಟಿ ನೀಡುತ್ತಿರುವುದು ಭರಪೂರ್ ಪ್ರೀತಿಯೇ!!
‘ಸೃಷ್ಟಿ ಮತ್ತು ಸೃಷ್ಟಿಕರ್ತನನ್ನು ಅರಿಯುವ ಅತ್ಯುತ್ತಮ ವಿಧಾನವೆಂದರೆ ನಮ್ಮ ಜತೆಗಿರುವುದನ್ನು, ಜತೆಗಿರುವವರನ್ನು ಪ್ರೀತಿಸುವುದು. ಈ ಪ್ರೀತಿಸುವ ಕಲೆಯೇ ನಿಜವಾದ ಶಕ್ತಿ. ಯಾರು ಹೆಚ್ಚು ಪ್ರೀತಿ ಮಾಡುತ್ತಾರೋ ಅವರು ಜೀವನದ ಈ ಓಟದಲ್ಲಿ ಹೆಚ್ಚು ಮತ್ತು ಒಳ್ಳೆಯ ಪರ್ಫಾಮೆನ್ಸ್ ನೀಡುತ್ತಾರೆ. ಈ ಇಡೀ ಪ್ರಕೃತಿಯನ್ನು ನೀವು ಪ್ರೀತಿಸತೊಡಗಿದರೆ ಜಗವೆಲ್ಲ ಸುಂದರವಾಗಿಯೇ ಕಾಣುತ್ತದೆ‘ ಎಂದಿದ್ದಾನೆ ಖ್ಯಾತ ಡಚ್ ಪೇಂಟರ್ ವಿನ್ಸೆಂಟ್ ವ್ಯಾನ್ಗೋ.
ಪ್ರೀತಿ, ಕಾಳಜಿಗಳು ನೋವನ್ನು ಕಳೆಯುವ, ದುಗುಡವನ್ನು ಕೊನೆಗೊಳಿಸುವ ಸಂಜೀವಿನಿಗಳು. ಆದರೆ, ಬದುಕನ್ನು ರೇಸ್ ಆಗಿಸಿಕೊಂಡ ಈ ದಿನಗಳಲ್ಲಿ ನಮ್ಮನ್ನು ನಾವು ಪ್ರೀತಿಸಲು, ಬೇರೆಯವರಿಗೆ ಪ್ರೀತಿ ನೀಡಲು ಶಕ್ಯವೇ ಆಗುತ್ತಿಲ್ಲ. ವ್ಯಕ್ತಿಗೆ ಭಾವನಾತ್ಮಕ ಬೆಂಬಲವೊಂದು ದೊರೆತುಬಿಟ್ಟರೆ ಜಗತ್ತಿನ ಮುಕ್ಕಾಲು ಪಾಲು ಸಮಸ್ಯೆಗಳು ಕೊನೆಗೊಳ್ಳುತ್ತವೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಈ ಭಾವನಾತ್ಮಕ ಬೆಂಬಲವೆಂದರೆ ಮತ್ತೇನೂ ಅಲ್ಲ-‘ನಾನು ಜೀವನದ ಯಾವುದೇ ಸಂದರ್ಭದಲ್ಲಿ ನಿನ್ನ ಜತೆ ಇರುತ್ತೇನೆ‘ ಎಂಬ ಭರವಸೆ, ಸೋತಾಗ ಹವಣಿಸದೆ ‘ಆಗೇ ಬಢೋ‘ ಎಂಬ ಸ್ಪೂರ್ತಿ ಟಾನಿಕ್, ಗೆದ್ದಾಗ ಖುಷಿಯ ಕೇಕೆ, ಅವಮಾನವಾದಾಗ ‘ಇದು ಕ್ಷಣಿಕ ಮುಂದೆ ದೊಡ್ಡ ಖುಷಿ ನಿನಗಾಗಿ ಕಾದಿರಬಹುದು‘ ಎಂಬ ಆಶಾವಾದ ಅಷ್ಟೇ. ಏನೂ ಮಾಡಲಾಗದಿದ್ದರೂ ಸಾಂತ್ವನದ ಮುಲಾಮು ಕೂಡ ಪ್ರೀತಿಯ ಸಣ್ಣ ಸೆಲೆಯನ್ನು ಸೃಷ್ಟಿಸಬಲ್ಲದು.
ಎರಡನೇ ಘಟನೆಯೂ ಕಾಕತಾಳೀಯವಾಗಿ ಚೀನಾದ್ದೇ. 20 ವರ್ಷದ ಹಿಂದೆ ಮಗಳನ್ನು ಕಳೆದುಕೊಂಡ ತಾಯಿ ಆ ಆಘಾತದಿಂದ ಹಾಸಿಗೆ ಹಿಡಿದಳು. ಸ್ವಂತ ಮಗ, ಸಂಬಂಧಿಕರು ಯಾರನ್ನೂ ಗುರುತಿಸದಾದಳು, ಮಾತುಗಳು ನಿಂತುಹೋದವು. ತಾಯಿಯನ್ನು ಈ ಸ್ಥಿತಿಯಲ್ಲಿ ಕಂಡು ಮಗನ ಕರುಳು ಚುರ್ ಎಂದಿತು. ಹತ್ತಾರು ಆಸ್ಪತ್ರೆ, ಮನೋವೈದ್ಯರು, ಔಷಧ… ಊಹೂಂ ಪ್ರಯೋಜನವಾಗಲಿಲ್ಲ.
ಇನ್ನೇನು ಮಾಡಬೇಕು ಎಂಬ ಚಿಂತೆ ಕಾಡುತ್ತಿರುವಾಗ ಅದೊಂದು ದಿನ ಈತ ಅಗಲಿದ ತನ್ನ ಸೋದರಿಯ ಬಟ್ಟೆ ಹಾಕಿಕೊಂಡು, ಆಕೆಯಂತೆಯೇ ತಲೆ ಬಾಚಿಕೊಂಡು ಅಮ್ಮನೆದುರು ಹೋಗಿ ನಿಂತ! ಹಲವು ವರ್ಷಗಳ ಬಳಿಕ ಆಕೆ ಮುಗುಳ್ನಕ್ಕಳು.
ತಾಯಿಗೆ ಸಮಾಧಾನ ಆಗುವುದಾದರೆ ದಿನವೂ ಹೀಗೆ ಮಾಡುವುದರಲ್ಲಿ ಏನು ತಪ್ಪಿದೆ ಅಂದುಕೊಂಡು ಕಳೆದ ಹತ್ತಾರು ವರ್ಷಗಳಿಂದ ಹೆಣ್ಣುಮಕ್ಕಳ ಬಟ್ಟೆ ಹಾಕಿಕೊಂಡು, ಅಕ್ಕನ ವೇಷದಲ್ಲೇ ಓಡಾಡುತ್ತಿದ್ದಾನೆ. ಇವನ ಈ ವೇಷವನ್ನು ಕಂಡ ಜನರು ಮೊದಮೊದಲು ನಗಾಡಿದ್ದಷ್ಟೇ ಅಲ್ಲದೆ ಮೊನಚು ಮಾತುಗಳಿಂದ ತಿವಿದರಂತೆ.
ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ತಾಯಿಯನ್ನು ಬದುಕಿಸಿಕೊಳ್ಳಲು ಆತ ‘ಅವನಲ್ಲ, ಅವಳಾಗಿ‘ ಬಾಳುತ್ತಿದ್ದಾನೆ. ತಾಯಿಯ ಆರೋಗ್ಯ ನೋಡಿಕೊಳ್ಳಲೆಂದೇ ಮದುವೆಯನ್ನೂ ಮುಂದೂಡಿಕೊಂಡು ಬಂದಿದ್ದಾನೆ. ಹೀಗೆ ನಿಷ್ಕಲ್ಮಶ ಪ್ರೀತಿ ತೋರಿದ ಪರಿಣಾಮವೇ ಆ ತಾಯಿ ಇಂದು ಗೆಲುವಾಗಿದ್ದಾಳೆ. ಇವರಿಬ್ಬರ ವಿಡಿಯೋ ಕೂಡ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದೆ.
ಈ ಉದಾಹರಣೆ ನೋಡಿ. ಬೇರೆಯವರಿಗೆ ನೆರವಾಗುವ ಇಚ್ಛಾಶಕ್ತಿ ಇದ್ದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ ಪುಟ್ಟ ಪೋರ. ಅದು ಅಮೆರಿಕದ ಲಾಸ್ ಏಂಜಲೀಸ್ ನಗರ. ಪಾರ್ಶ್ವವಾಯು ಪೀಡಿತನಾಗಿರುವ 8 ವರ್ಷದ ಬಾಲಕ ಹ್ಯೂಸ್ಟನ್ಗೆ ನಡೆದಾಡಲು ಸಾಧ್ಯವಿಲ್ಲ.
ವ್ಹೀಲ್ಚೇರ್ ಕೊಳ್ಳಲು ಬೇಕಾದಷ್ಟು ಹಣ ಇರಲಿಲ್ಲ. ಸ್ನೇಹಿತನ ಈ ಸಂಕಟವನ್ನು ಕಂಡ ಪಾಲ್ ಬರ್ನೆಟ್ (8) ಯೂಟ್ಯೂಬ್ನಲ್ಲಿ ‘ಗೋಫಂಡ್ವಿುೕ‘ ಪುಟವನ್ನು ತೆರೆದು, ಸಹಾಯಕ್ಕಾಗಿ ಯಾಚಿಸಿದ. ಗಾಲಿಕುರ್ಚಿ ಕೊಳ್ಳಲು ಬೇಕಾಗಿದ್ದು 2.50 ಲಕ್ಷ ರೂ. ಆದರೆ, ಪಾಲ್ನ ಸಹೃದಯತೆಯನ್ನು ಕಂಡ ಜನ 3.85 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಹೊಸ ವ್ಹೀಲ್ಚೇರ್ನಲ್ಲಿ ಹ್ಯೂಸ್ಟನ್ ಸಲೀಸಾಗಿ ಸಾಗುತ್ತಿರಬೇಕಾದರೆ ಅದರ ಸಂಭ್ರಮವೆಲ್ಲ ಪಾಲ್ ಕಣ್ಣುಗಳಲ್ಲಿ ಮಿನುಗುತ್ತಿರುತ್ತದೆ. ‘ನನ್ನ ಪ್ರಿಯ ಸ್ನೇಹಿತನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ‘ ಎಂಬ ಆ ಹುಡುಗನ ಮಾತು ಪ್ರೀತಿಯ ಶಕ್ತಿ ಅಲ್ಲದೆ ಮತ್ತೇನು? ಖಗೋಳ ವಿಜ್ಞಾನಿ ನಿಲ್ ಡಿಗ್ರಾಸ್ ತುಂಬ ಸೊಗಸಾದ ಮಾತೊಂದು ಹೇಳಿದ್ದಾನೆ-‘ನಾನು ಎರಡು ಸಂಗತಿಗಳಿಂದ ತುಂಬ ಪ್ರೇರಣೆಗೊಂಡಿದ್ದೇನೆ.
ಒಂದು, ಪ್ರಪಂಚದ ಬಗ್ಗೆ ನಾವು ನಿನ್ನೆ ತಿಳಿದುಕೊಂಡಿದ್ದಕ್ಕಿಂತ ಇಂದು ಹೆಚ್ಚು ತಿಳಿದುಕೊಳ್ಳವುದು. ಎರಡನೆಯದು, ಸಾಧ್ಯವಾದಷ್ಟು ಬೇರೆಯವರ ಕಷ್ಟಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸುವುದು. ಈ ಎರಡು ಸಂಗತಿಗಳು ನಮ್ಮನ್ನು ಬದುಕಿನಲ್ಲಿ ತುಂಬ ಮುಂದೆ ಮತ್ತು ಸಕಾರಾತ್ಮಕವಾಗಿ ಕೊಂಡೊಯ್ಯುತ್ತವೆ’.
ನಿಜ, ಪ್ರೀತಿ ಎಂಬುದು ಬೆಳಕು, ವಿಶ್ವಾಸ, ಧೈರ್ಯ, ಕಳಕಳಿ ಎಲ್ಲವೂ ಹೌದು. ಎದೆಯಂಗಳದಿಂದ ಸ್ವಾರ್ಥದ ಕತ್ತಲು ಹೊಡೆದೋಡಿಸಿದರೆ ಮಾತ್ರ ಅಲ್ಲಿ ಪ್ರೀತಿಯ ಬೀಜ ಬಿತ್ತಲು ಸಾಧ್ಯ. ಬದುಕಲ್ಲಿ ಎಷ್ಟೊಂದು ವಿದ್ಯೆ ಕಲಿತು, ಏನೆಲ್ಲ ಅಧಿಕಾರ ಪಡೆದರೂ ಪ್ರೀತಿಸುವುದನ್ನೇ ಕಲಿಯದಿದ್ದರೆ ಆ ಬಾಳಿಗೇನು ಅರ್ಥ. ಪ್ರೀತಿಗೆ ನಮ್ಮನ್ನು, ಈ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ. ಪ್ರೀತಿಯೆಂಬ ಜೀವನದಿ ನಮ್ಮ ಹೃದಯದಲ್ಲೂ ಹರಿಯಲಿ. ಆ ಚೈತನ್ಯದ ಸೆಲೆಯಲ್ಲಿ ಎಲ್ಲ ನೋವು, ಸಂಕಟ, ತಳಮಳಗಳು ಮರೆಯಾಗಲಿ. ಪ್ರೀತಿಸೋದಕ್ಕೂ ಕಂಜೂಸು ಬುದ್ಧಿ ತೋರದೆ ಮೊದಲು ಮನುಷ್ಯರಾಗೋಣ, ನಂತರ ಮಾಧವನ ಎತ್ತರಕ್ಕೆ ಏರೋಣ. ಏನಂತೀರಿ?
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882