ಜೇವರಗಿ : ದಲಿತರು ಬಳಸುವ ಬಾವಿ ನೀರಿಗೆ ವಿಷ ಬೆರಕೆ!
ಕಲಬುರಗಿ ಜಿಲ್ಲೆಯ ಜೇವರಗಿ ತಾಲೂಕಿನ ಚನ್ನೂರು ಗ್ರಾಮದಲ್ಲಿ ದಲಿತರು ಬಳಸುವ ಬಾವಿಗೆ ವಿಷ ಬೆರೆಸಿದ ಘಟನೆ ನಡೆದಿದೆ. ಸತತ ಬರಗಾಲದಿಂದ ಜಿಲ್ಲೆಯ ಜನ ನೀರಿಗಾಗಿ ಪರದಾಡುವ ಸಂದರ್ಭ ಎದುರಾಗಿದೆ. ಆದರೆ, ಚನ್ನೂರು ಗ್ರಾಮದವನೇ ಆದ ಗೊಲ್ಲಾಳಪ್ಪ ಗೌಡ ಎಂಬ ವ್ಯಕ್ತಿ ಮೇಲೆ ದಲಿತರ ಬಾವಿಗೆ ವಿಷ ಹಾಕಿದ್ದಾನೆಂಬ ಆರೋಪ ಕೇಳಿಬಂದಿದೆ. ಕುಡಿಯುವ ನೀರು ನೀಡುವ ಬಾವಿಗೆ ಕ್ರಿಮಿನಾಶಕ ಬೆರೆಸಲಾಗಿದೆ ಎನ್ನಲಾಗಿದೆ.
ಬಾವಿಯ ನೀರಿನ ಬಣ್ಣ ಬದಲಾಗಿದ್ದನ್ನು ಗಮನಿಸಿದ ಜನ ಅನುಮಾನಗೊಂಡಿದ್ದಾರೆ. ಹೀಗಾಗಿ, ನೀರು ಪರೀಕ್ಷಿಸಿದಾಗ ನೀರಿನಲ್ಲಿ ವಿಷ ಬೆರೆತದ್ದು ತಿಳಿದು ಬಂದಿದೆ. ಅಲ್ಲದೆ ಬಾವಿಯ ಬಳಿಯೇ ಕ್ರಿಮಿನಾಶಕ ಬಾಟಲ್ ಬಿದ್ದಿದ್ದು ಕೂಡ ಕಂಡುಬಂದಿದೆ. ದಲಿತರಿಗೆ ಈ ಬಾವಿಯ ನೀರು ಸಿಗದಿರಲಿ ಎಂಬ ಕಾರಣಕ್ಕೆ ಗೊಲ್ಲಾಳಪ್ಪ ಗೌಡ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ . ಈ ಹಿಂದೆಯೂ ಅನೇಕ ಸಲ ದಲಿತರು ಬಳಸುವ ಬಾವಿಗೆ ಸತ್ತ ನಾಯಿ ಹಾಕುವುದು, ನೀರು ಕಲ್ಮಷಗೊಳಿಸುವುದನ್ನು ಮಾಡಿದ್ದನಂತೆ.
ಹೀಗಾಗಿ, ಜೇವರಗಿ ಠಾಣೆಯಲ್ಲಿ ಇದೇ ತಿಂಗಳು 02ೇ ತಾರೀಖು ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಆರೋಪಿ ಗೊಲ್ಲಾಳಪ್ಪ ಗೌಡನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.