ಯಾದಗಿರಿ: ಕಲಬುರಗಿ ವಿಭಾಗ ಮಟ್ಟದ ಥ್ರೋಬಾಲ್ ಕ್ರೀಡಾಕೂಟ
ಆತ್ಮವಿಶ್ವಾಸ, ದೈಹಿಕ ಸದೃಢತೆಗೆ ಕ್ರೀಡೆ ಪೂರಕ
ಯಾದಗಿರಿ: ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ದೈಹಿಕವಾಗಿ ಸದೃಢರಾಗುವುದಕ್ಕೆ ವಿದ್ಯಾರ್ಥಿಗಳಿಗೆ ಕ್ರೀಡೆಗಳು ಪೂರಕವಾಗಿವೆ ಎಂದು ಸೈದಾಪುರ ಜಿ.ಪಂ ಸದಸ್ಯೆ ಶಶಿಕಲಾ.ಬಿ.ಪಾಟೀಲ ಹೇಳಿದರು.
ತಾಲೂಕಿನ ಸೈದಾಪುರ ಗ್ರಾಮದ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪ ನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಯಾದಗಿರಿ, ಶಹಾಪೂರ, ಸುರಪೂರ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಸರಕಾರಿ ಪ್ರೌಢಶಾಲೆ ಸೈದಾಪೂರ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ 2017-18 ನೇ ಸಾಲಿನ ಕಲಬುರ್ಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಪಂದ್ಯದ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆಗಳು ಇದ್ದು, ಮಕ್ಕಳಲ್ಲಿರುವ ಪ್ರತಿಭೆ ಅರಳಲು ಸೂಕ್ತ ವೇದಿಕೆ ಒದಗಿಸಿ ಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕ್ರೀಡಾಕೂಟಗಳು ಹೆಚ್ಚು ಆಯೋಜಿಸಬೇಕಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಬಸವರಾಜ ಸಿ. ಗವನಳ್ಳಿ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡಾ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜ್ಞಾನವೃದ್ಧಿ, ದೈಹಿಕ ಸಾಮಥ್ರ್ಯ ಹೆಚ್ಚಿ ಸಾಧನೆಗೈಯಲು ಛಲಗಾರಿಕೆ ಮೂಡುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಎಸ್.ಹೊನಗೇರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾ.ಪಂ. ಉಪಾಧ್ಯಕ್ಷೆ ರಾಮಲಿಂಗಮ್ಮ.ಬಿ.ಕವಡೆ, ತಾ.ಪಂ.ಸದಸ್ಯ ಚಂದಪ್ಪ ಕಾವಲಿ, ಗ್ರಾ.ಪಂ.ಅಧ್ಯಕ್ಷೆ ರಾಮಲಿಂಗಮ್ಮ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸಿ.ಬಿ.ಸಿನ್ನೂರ್, ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ, ಶಹಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಾಟೇಕರ್, ಯಾದಗಿರಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ನಾಗಪ್ಪ ಬಿರಾಳ್, ಸುರಪುರ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್.ಪಾಟೀಲ, ಶಹಾಪೂರ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ವೈದ್ಯ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಶಿಕಾಂತ ಕಶೆಟ್ಟಿ, ಯಾದಗಿರಿ ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ, ಸುರಪುರ ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ದರ್ಬಾರಿ, ಯಾದಗಿರಿ ತಾಲೂಕ ಸ.ಶಿ.ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ ಭೀಮನಳ್ಳಿ ಸೇರಿದಂತೆ ಇನ್ನಿತರರಿದ್ದರು.
ಇದಕ್ಕೂ ಮುಂಚೆ ಡಾನ್ ಬಾಸ್ಕೋ ಶಾಲಾ ವಿದ್ಯಾರ್ಥಿನಿಯರು ಭರತನಾಟ್ಯ ನೃತ್ಯ ಪ್ರದರ್ಶನ ಮಾಡಿದರು. ಅನಿಲ್ ನಾಯಕ ಸ್ವಾಗತಿಸಿದರು. ಮಾರುತಿ ಬೇಂದ್ರೆ ಕಾರ್ಯಕ್ರಮ ನಿರೂಪಿಸಿದರು. ಮಹಿಪಾಲರೆಡ್ಡಿ ವಂದಿಸಿದರು.