ಕರ್ನಾಟಕ ಪೊಲೀಸರಿಗೊಂದು ಸಂತಸದ ಸುದ್ದಿ…
ಬೆಂಗಳೂರು : ಕೊನೆಗೂ ಕರ್ನಾಟಕ ಸರ್ಕಾರ ಪೊಲೀಸರಿಗೆ ಶುಭ ಸುದ್ದಿ ರವಾನಿಸಿದೆ. ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು ಪೊಲೀಸರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಔರಾದ್ಕರ್ ವರದಿ ಜಾರಿಗೆ ಸಮ್ಮತಿ ಸೂಚಿಸಿದೆ. ಇಂದು ಕರ್ನಾಟಕ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡಿದ್ದು 2016ರ ಸೆ.27ರಂದು ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸಲ್ಲಿಸಿದ್ದ ವರದಿ ಜಾರಿಗೆ ತರಲು ಒಪ್ಪಿಗೆ ಸೂಚಿಸಿದೆ. ಆಗಸ್ಟ್ 1ರಿಂದ ಪೊಲೀಸರ ವೇತನ ಹೆಚ್ಚಳವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಘವೇಂದ್ರ ಔರಾದ್ಕರ್ ವರದಿ ಅನ್ವಯ ಕಾನೂನು ಸುವ್ಯವಸ್ಥೆ, ಬಂದೋಬಸ್ತ್, ಅಪರಾಧ, ಗುಪ್ತದಳ, ಸಿಐಡಿ ಆಂತರಿಕ ಭದ್ರತೆ, ಜಿಲ್ಲಾ ವಿಶೇಷ ಘಟಕ, ವೈರ್ಲೆಸ್ ವಿಭಾಗ, ಕಂಪ್ಯೂಟರ್ ವಿಭಾಗ, ಅರಣ್ಯ ಘಟಕ, ಲೋಕಾಯುಕ್ತ ಹೀಗೆ ವಿವಿಧ ಘಟಕಗಳ 86 ಸಾವಿರ ಪೊಲೀಸರ ವೇತನ ಏರಿಕೆಯಾಗಲಿದೆ. ಔರಾದ್ಕರ್ ವರದಿ ಜಾರಿಗೊಳಿಸುವಂತೆ ಪೊಲೀಸರು ಹಲವು ದಿನದಿಂದ ಒತ್ತಾಯಿಸುತ್ತಿದ್ದರು. ವರದಿ ಜಾರಿಯಾದರೆ ಪೊಲೀಸರ ಮೂಲ ವೇತನ ಹೆಚ್ಚಳವಾಗಲಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಔರಾದ್ಕರ್ ವರದಿ ಜಾರಿಗೆ ಒಪ್ಪಿಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.