ಪೊಲೀಸರ ಕ್ರೀಡಾಭಿರುಚಿ ಬಗ್ಗೆ ಶ್ಲಾಘಿಸಿದ ಡಿಸಿ ಮಂಜುನಾಥ
ಯಾದಗಿರಿ: ದೈಹಿಕವಾಗಿ ಸದೃಢಗೊಳ್ಳಲು ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ ಎಂದು ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಸೇವೆ ಅಪಾರವಾಗಿದೆ, ದೈನಂದಿನ ಕರ್ತವ್ಯ ನಿಭಾಯಿಸಿಕೊಂಡು ಹೋಗುವುದರ ಜೊತೆಗೆ ಕ್ರೀಡಾಭಿರುಚಿ ಬೆಳೆಸಿಕೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಮನುಷ್ಯನಲ್ಲಿ ಉತ್ಸಾಹÀ, ಲವಲವಿಕೆ ತರುವುದಲ್ಲದೆ ಸಾಧನೆಗೆ ಕ್ರೀಡೆಗಳು ಸ್ಫೂರ್ತಿದಾಯಕವಾಗಿವೆ. ರಾಜ್ಯಮಟ್ಟದ ಕ್ರೀಡೆಯಲ್ಲಿಯೂ ಭಾಗವಹಿಸಿ ಜಿಲ್ಲೆಗೆ ಹಾಗೂ ಪೊಲೀಸ್ ಇಲಾಖೆಗೆ ಹೆಸರು ತರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾತನಾಡಿ, ಕ್ರೀಡಾ ನಿಯಮಗಳಿಗೆ ಬದ್ಧರಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಹೀಗಾಗಿ ಸಮಾನ ಮನಸ್ಕರೊಂದಿಗೆ ಆಟ ಆಡಬೇಕೆಂದು ಅವರು ಹೇಳಿದರು.
ಪರಸ್ಪರ ವಿಚಾರ ವಿನಿಮಯ ಹಾಗೂ ಒಂದೇ ಕುಟುಂಬದವರು ಎನ್ನುವಂತಹ ಮನೋಭಾವನೆ ಮೂಡಲು ಹಾಗೂ ದೈಹಿಕ ಸಾಮಥ್ರ್ಯ ಹೆಚ್ಚಿಸಲು ಕ್ರೀಡೆಗಳು ಪ್ರತಿ ವರ್ಷದಂತೆ ಈ ವರ್ಷವು ಕೂಡ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಕ್ರೀಡಾ ಜೋತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ:ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಸ್ವಾಗತಿಸಿದರು. ಶಹಾಪೂರ ಸಿಪಿಐ ನಾಗರಾಜ ಅವರು ವಂದಿಸಿದರು.