ಕಾಮರಡ್ಡಿ ಆಸ್ಪತ್ರೆಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ
ಕೊರೊನಾ ನಿಯಂತ್ರಣ ಬಹುಮುಖ್ಯ – ಡಾ.ಕಾಮರಡ್ಡಿ
ಶಹಾಪುರಃ ಕೊರೊನಾ ವೈರಸ್ ಇಡಿ ಜಗತ್ತನ್ನು ತಲ್ಲಣಗೊಳಿಸಿದ್ದು, ಅದರ ನಿಯಂತ್ರಣವೇ ಬಹುಮುಖ್ಯವಿದೆ. ಚಿಕಿತ್ಸೆಗೆ ಸಮರ್ಪಕ ಔಷಧಿ ದೊರೆಯದ ಕಾರಣ ನಿಯಂತ್ರಣವೇ ಅದಕ್ಕೆ ಮದ್ದು, ಕಾರಣ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಅದನ್ನು ನಿಯಂತ್ರಿಸಬಹುದು ಎಂದು ಕಲಬುರ್ಗಿಯ ಕಾಮರಡ್ಡಿ ಆಸ್ಪತ್ರೆಯ ವೈದ್ಯ ಡಾ.ಶರಣಬಸಪ್ಪ ಕಾಮರಡ್ಡಿ ತಿಳಿಸಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಶ್ರೀಶಾಂಭವಿ ಮಾತಾ ಚಿಕ್ಕಮಠದ ಪೀಠಾಧಿಪತಿ ಶಿವಲಿಂಗ ರಾಜೇಂದ್ರ ಶಿವಾಚಾರ್ಯರ ಸಮ್ಮುಖದಲ್ಲಿ ಗ್ರಾಮದ ನೂರಾರು ಜನ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ದೇಶದ ಪ್ರಧಾನ ಮಂತ್ರಿಗಳು ದೇಶದ ಜನರ ಜೀವ ಮತ್ತು ಆರೋಗ್ಯ ರಕ್ಷಣೆಗಾಗಿ ಲಾಕ್ಡೌನ್ ಆದೇಶ ಮಾಡಿದ್ದು ಬಡವರಿಗೆ ಆಹಾರದ ಕೊರತೆ ಆಗುತ್ತಿದ್ದು ಆಹಾರ ಕಿಟ್ ವಿತರಿಸುವ ಮೂಲಕ ಈ ಅಲ್ಪ ಸೇವೆ ಮಾಡುತ್ತಿದ್ದೇನೆ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವ ಮೊದಲು ಮುನ್ನೆಚ್ಚರಿಕೆ ವಹಿಸಿ ಅದರ ಹರಡುವಿಕೆಯನ್ನು ನಿಯಂತ್ರಿಸೋಣ ಎಂದು ಹೇಳಿದರು.
ಜಿಪಂ ಸದಸ್ಯ ವಿನೋದಗೌಡ ಮಾಲಿಪಾಟೀಲ್ ಮಾತನಾಡಿ, ಮನುಷ್ಯನಿಗೆ ಜೀವ ಮುಖ್ಯ, ಬದುಕಿದ್ದರೆ ಆರೋಗ್ಯಯುತವಾಗಿದ್ದಲ್ಲಿ ಮಾತ್ರ ನಾವು ದುಡಿಯಬಹುದು, ಸಾಧನೆ ಮಾಡಬಹುದು. ಕಾರಣ ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಳ್ಳಿ. ಕೊರೊನಾದಿಂದ ದೂರ ಉಳಿಯಬೇಕು ಅಂದರೆ ಸಾಮಾಜಿಕ ಅಂತರ ಅನುಸರಿಸಿ ಮನೆಯಿಂದ ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭ ಹಳ್ಳೆಪ್ಪ ಹುಡೇದ್, ಮಲ್ಲಣ್ಣ ನಂದಿಕೋಲ್, ಹಣಮಂತ್ರಾಯ ಚಪಾಟಿ, ಹೈಯ್ಯಾಳಪ್ಪ ಗುಂಟನೂರ್, ಪರಮಣ್ಣ ಆಂದೇಲಿ, ಸಲೀಂ, ಗಫೂರ್ ಗೋಗಿ, ಬಸವರಾಜ್ ಗೋಲಗೇರಿ, ಸಂತೋಷ ಅವಂಟಿ, ಬಸ್ಸಣ್ಣ ಗುಬ್ಬಿ ಇತರರಿದ್ದರು.