ಸುಳ್ಳೇ ಬಿಜೆಪಿ ಬಂಡವಾಳ, ಸುಳ್ಳೇ ಅವರ ಮನೆ ದೇವ್ರುಃ ಸಿದ್ರಾಮಯ್ಯ
ಶಹಾಪುರಃ ಕಳೆದ ನಾಲ್ಕುವರೆ ವರ್ಷದ ಅವಧಿಯಲ್ಲಿ ನಾಡಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಚುನಾವಣೆ ಪೂರ್ವ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಪ್ರತಿಶತ ನೂರರಷ್ಟು ಈಡೇರಿಸಿದ್ದೇವೆ ಎಂದು ಸಿ.ಎಂ.ಸಿದ್ರಾಮಯ್ಯ ಹೇಳಿದರು.
ನಗರದ ಸರ್ಕಾರಿ ಡಿಗ್ರಿ ಕಾಲೇಜು ಮೈದಾನದಲ್ಲಿ ನಡೆದ ಶಹಾಪುರ ವಿಧಾನಸಭೆ ಮತ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಭತ್ತದ ಸಸಿಗಳಿಗೆ ನೀರುಣಿಸಿ, ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯಡಿಯೂರಪ್ಪನವರು ಐದು ವರ್ಷದ ತಮ್ಮ ಆಡಳಿತ ಅವಧಿಯಲ್ಲಿ ಯಾವುದೇ ಹೇಳಿಕೊಳ್ಳುವಂತ ಕೆಲಸ ಮಾಡಲಿಲ್ಲ. ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಾಣುತಿದ್ದಾರೆ. ಅದು ಅಸಾಧ್ಯದ ಮಾತು ಎಂದು ತಿಳಿದು ಹತಾಶರಾಗಿ ಏಕವಚನದಲ್ಲಿ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ ಅದು ಶೋಭೆ ತರುವಂತಹದ್ದಲ್ಲ.
ಬಿಜೆಪಿಯವರು ಮಾತೆತ್ತಿದರೆ, ಸುಳ್ಳು ಮಾತನಾಡುತ್ತಾರೆ. ನಾಡಿನ ಜನತೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳೇ ಬಿಜೆಪಿಯವರ ಬಂಡವಾಳ ಸುಳ್ಳೇ ಅವರ ಮನೆ ದೇವ್ರು. ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತ ಹೇಳಿದ್ರೆ, ಕೋಪ ಬರುತ್ತದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಚಾರದ ಆರೋಪದಡಿ ಜೈಲಿಗೆ ಹೋಗಿದ್ದು ಸುಳ್ಳಾ, ಇದ್ದದ್ದು ಹೇಳಿದ್ರೆ ಕೋಪ ಬರುತ್ತದೆ ಎಂದು ಹಾಸ್ಯಸ್ಪದವಾಗಿ ಹೇಳಿದರು.
ಅವರಂತೆ ಅವರ ಅಧಿಕಾರವಧಿಯಲ್ಲಿ ಕೆಲ ಸಚಿವರು,ಶಾಸಕರು ಸಹ ಜೈಲಿಗೆ ಹೋಗಿದ್ದಾರೆ. ನಾವು ನಾಲ್ಕುವರೆ ವರ್ಷದಿಂದ ಆಡಳಿತ ನಡೆಸುತ್ತಿದ್ದು, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಎಂದರು.
ನೀರಾವರಿ ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವಿ.ಪಾಟೀಲ್, ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಮಾನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಶಾಸಕರಾದ ಶರಣಪ್ಪ ಮಟ್ಟೂರ, ಉಮೇಶ ಜಾಧವ, ಬಸವರಾಜ ಪಾಟೀಲ್ ಇಟಗಿ, ಚನ್ನಾರಡ್ಡಿ ತುನ್ನೂರ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಮರಿಗೌಡ ಹುಲಕಲ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.