ಯುವಕನ ಮೇಲೆ ಹಲ್ಲೆಃ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ
ಅಮಾನುಷವಾಗಿ ಥಳಿಸಿದ ಪೇದೆಗಳ ಅಮಾನತ್ತಿಗೆ ಆಗ್ರಹ
ಯಾದಗಿರಿಃ ಮುರಾರ್ಜಿ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ತನ್ನ ಸಹೋದರಿಯನ್ನು ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೇಠದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಬಿಡಲು ಹೋದಾಗ ಪರೀಕ್ಷಾ ಕೇಂದ್ರ ಬಳಿ ಪೊಲೀಸ್‍ರ ನಡುವೆ ಉಂಟಾದ ವಾದ ವಿವಾದ ಕಾರಣದಿಂದ ಪೊಲೀಸರು ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಬುಧವಾರ ಗೋಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿರುವ ಪರೀಕ್ಷಾ ಕೊಠಡಿಗೆ ತೆರಳುವಾಗ ಸ್ಥಳೀಯ ಪೊಲೀಸ್ ಪೇದೆ ಪರೀಕ್ಷಾರ್ಥಿಗಳ ಪಾಲಕರನ್ನು ಹೊರ ಕಳಿಸುವಾಗ ದಲಿತ ಯುವ ಮುಖಂಡನನ್ನು ತಳ್ಳಿದ ಕಾರಣ, ಪೇದೆ ಜೊತೆ ವಾದ ವಿವಾದ ಉಂಟಾಗಿದೆ ಎನ್ನಲಾಗಿದೆ.
ಪೊಲೀಸ್‍ರು ಆ ಯುವಕನನ್ನು ಠಾಣೆಗೆ ತಂದು ಮನ ಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ನಿಜಗುಣ ದೋರಹಳ್ಳಿ ಎಂಬಾತನೇ ಥಳಿಕೊಳ್ಳಗಾದ ದಲಿತ ಯುವಕನಾಗಿದ್ದು, ಆತನ ಮೈ ಮೇಲೆ ಬಾಸುಂಡೆ ಬರುವವರೆಗೂ ಪೊಲೀಸ್‍ರು ಥಳಿಸಿದ್ದಾರೆ. ಯುವಕ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರ ದೌರ್ಜನ್ಯ ಖಂಡಿಸಿ ಡಿಎಸ್‍ಎಸ್ ಪ್ರತಿಭಟನೆ
ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ದಲಿತ ಯುವಕನ ಮೇಲೆ ನಡೆದ ಪೊಲೀಸರ ದೌರ್ಜನ್ಯ ಖಂಡಿಸಿ ನಗರದ ಗ್ರಾಮೀಣ ಠಾಣೆ ಎದುರು ದಲಿತಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಕುಮಾರ ತಳವಾರ, ಸಹೋದರಿಯನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲು ಹೋದಾಗ, ಕೇಂದ್ರದ ಬಳಿ ನಿಂತವರನ್ನು ಚದುರಿಸುವಾಗ ಈ ಘಟನೆ ನಡೆದಿದ್ದು, ಸುಖಾಸುಮ್ಮನೆ ಯುವಕನನ್ನು ಪೊಲೀಸರು ಬಂಧಿಸಿ ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಅಮಾನುಷವಾಗಿ ಥಳಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಸಿಪಿಐ ಮೂಲಕ ಎಸ್‍ಪಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಣ್ಣ ಸಾದ್ಯಾಪುರ, ಶಿವಪುತ್ರ ಜವಳಿ, ಶರಣು ದೋರನಳ್ಳಿ, ಪರಶುರಾಮ ಕಾಂಬಳೆ, ಮಲ್ಲಿಕಾರ್ಜುನ ಹುರಸಗುಂಡಗಿ, ಶಾಂತಪ್ಪ ಸಾಲಿಮನಿ, ಭೀಮರಾಯ ಜುನ್ನಾ, ಚಂದ್ರಶೇಖರ ಬೇವಿನಳ್ಳಿ, ಮರೆಪ್ಪ ಮರಕಲ್, ರಾಜು ಚಂದಾಪುರ, ಮಲ್ಲು ಆರಬೋಳ, ರಾಹುಲ್ ಸಾದ್ಯಾಪುರ, ಬಲಭೀಮ ಬೇವಿನಳ್ಳಿ, ಮರೆಪ್ಪ ಕ್ರಾಂತಿ, ಶುಭಾಶ ಹುರಸಗುಂಡಗಿ, ಸಂಗು ಸೈದಾಪುರ, ಮಲ್ಲಿನಾಥ, ಚಂದ್ರಶೇಖರ ಟೊಕಾಪುರ ಸೇರಿದಂತೆ ದಲಿತಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.