ಹೆಚ್.ಡಿ.ಕೆ ಕಡೆ ಯುವಪಡೆ ನಡೆ? ಕಮಲ ಕಲಹದಿಂದ ಮೋದಿ ಮೋಡಿಗೂ ತಡೆ?
ಈ ಬಗ್ಗೆ ಕೆಪಿಸಿಸಿ ಅದ್ಯಕ್ಷರಾಗಿ ಡಾ.ಪರಮೇಶ್ವರ್ ಅವರೇಕೆ ಯೋಚಿಸಲಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಕೆಪಿಸಿಸಿ ಅದ್ಯಕ್ಷರು ಮಾತ್ರವಲ್ಲ ಸಚಿವರಾದ ಎಂ.ಬಿ.ಪಾಟೀಲ್, ಎ.ಮಂಜು, ಸಂತೋಷ ಲಾಡ್, ರೋಷನ್ ಬೇಗ್, ರಮೇಶ ಜಾರಕಿಹೊಳೆ ಹೀಗೆ ದಂಡು ದಂಡು ಸಚಿವರು, ಶಾಸಕರು ಸಾಲುಗಟ್ಟಿ ನಿಂತು ಹೂಗುಚ್ಛ ನೀಡಿ ಅಭಿನಂದಿಸಿ ಬರುವ ಜರೂರತ್ತೇನಿತ್ತು. ಡಿಕೆಶಿ ಯಾವ ಜನಪರ ಹೋರಾಟ ಮಾಡಿ ಗೆದ್ದು ಬಂದಿದ್ದರೆಂಬುದೇ ಈಗ ಪ್ರಗ್ನಾವಂತ ನಾಗರೀಕರ ಪ್ರಶ್ನೆಯಾಗಿದೆ. ಪಕ್ಷದ ಪ್ರಭಾವಿ ನಾಯಕರು ಏನೇ ಮಾಡಿದರೂ ಪಕ್ಷ ಪ್ರಶ್ನಿಸುವುದಿಲ್ಲ. ಬದಲಾಗಿ ಅಭಿನಂದಿಸುತ್ತದೆ ಎಂಬ ಕೆಟ್ಟ ಸಂಧೇಶ ಜನರಿಗೆ ಹೋಗುವುದಿಲ್ಲವೇ. ಅದು ಪಕ್ಷಕ್ಕೆ ಕೇಡು (ನಷ್ಟ) ಉಂಟು ಮಾಡುವುದಲ್ಲದೆ, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುವುದಿಲ್ಲವೇ ಎಂಬ ಪ್ರಶ್ನೆ ಕಾಂಗ್ರೆಸ್ಸಿಗರು ಸೇರಿದಂತೆ, ಪಕ್ಷಾತೀತವಾಗಿರುವ ಜನಸಾಮಾನ್ಯರಲ್ಲೂ ಸಹಜವಾಗಿದೆ.
ಮೊದಲೇ ಗತ್ತಿನ ಮನುಷ್ಯ ಡಿಕೆಶಿಗೆ ಜವಬ್ದಾರಿಯುತ ಕೆಪಿಸಿಸಿ ಅದ್ಯಕ್ಷರು, ಸಚಿವರು ಈ ವೇಳೆ ಅಭಿನಂದಿಸಿದ್ದು ಮತ್ತಷ್ಟು ಕೋಡು ಮೂಡಿಸಿದಂತಾಗುತ್ತದೆ. ನಾನು ಮಾಡಿದ್ದೆಲ್ಲ ಸರಿ ಎಂಬ ವಾತಾವರಣ ನಿರ್ಮಾಣವಾದರೆ ಮನುಷ್ಯ ಹಿಟ್ಲರ್ ನಂತೆ ವರ್ತಿಸಲು ಆರಂಭಿಸುತ್ತಾನೆಂಬ ಸತ್ಯ ಇವರಿಗೇಕೆ ಅರಿವಿಗೆ ಬರಲಿಲ್ಲ ಎಂಬ ವಾದ ಎಲ್ಲೆಡೆ ವ್ಯಕ್ತವಾಗುತ್ತಿದೆ. ಪಕ್ಷದ ಪ್ರಭಾವಿ ಮುಖಂಡರಾಗಿದ್ದರೆ ನಿಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಿ. ನಿಮಗೆ ಅಧಿಕಾರವಿದೆ ಅನ್ನುವ ಕಾರಣಕ್ಕೆ ಅಕ್ರಮ ಸಂಪಾದನೆ
ಆರೋಪವಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವುದಿಲ್ಲವೆಂದಾದರೆ ಅದು ನಿಮ್ಮ ಪಕ್ಷದ ಹಣೆಬರಹ. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿ ಇದ್ದಲ್ಲಿಗೆ ಹೋಗಿ ಕ್ಯಾಮರಾಗಳ ಮುಂದೆ ಅಭಿನಂದನೆ ಸಲ್ಲಿಸುವ ಮೂಲಕ ಜವಾಬ್ದಾರಿಯುವ ಸ್ಥಾನದಲ್ಲಿರುವ ನೀವೆಲ್ಲಾ ರಾಜ್ಯಕ್ಕೇನು ಸಂದೇಶ ರವಾನಿಸಿದ್ದೀರಿ. ನಿಮ್ಮಂಥವರು ಡಿಕೆಶಿ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದ್ದೇವೆ. ನಿಮ್ಮ ಶಕ್ತಿ ಏನೆಂಬುದು ನಮಗೆ ತಿಳಿದಿದೆ. ನಿಮ್ಮೊಂದಿಗೆ ನಾವಿದ್ದೇವೆ ಅಂದು ಬರೋದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.
20ತಿಂಗಳುಗಳ ಕಾಲ ಉತ್ತಮ ಆಡಳಿತ ನೀಡಿದ ಹೆಚ್.ಡಿ.ಕೆ ಕರಾರಿನಂತೆ ಅಧಿಕಾರ ಹಂಚಿಕೆ ಮಾಡಲಿಲ್ಲವೆಂಬ ಕಾರಣಕ್ಕೆ ವಚನ ಭ್ರಷ್ಟತೆ ಆರೋಪ ಹೊರಿಸಿ ಬಿಜೆಪಿ ಅಧಿಕಾರಕ್ಕೇರಿತು. ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರ, ಗಣಿಲೂಟಿ ಸೇರಿ ಅನೇಕ ಆರೋಪಗಳು ಕೇಳಿಬಂದವು. ಅದನ್ನೇ ಸಮರ್ಥವಾಗಿ ಬಳಿಸಿಕೊಂಡ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು. ಅನ್ನಭಾಗ್ಯದಂತ ಉತ್ತಮ ಕಾರ್ಯಕ್ರಮದ ಮೂಲಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಉತ್ತಮ ಆಡಳಿತವನ್ನೂ ನೀಡಿತು. ಬರಬರುತ್ತ ಉಡಾಫೆಗೆ ಬಿದ್ದು ಜನರ ಮನಸ್ಸಿನಿಂದ ಮಾಯವಾಗ ತೊಡಗಿತು.
ಪರಿಣಾಮ ನರೇಂದ್ರ ಮೋದಿ ಮೋಡಿಗೆ ಒಳಗಾದ ಜನ ಇನ್ನೇನು ರಾಜ್ಯದಲ್ಲೂ ಕಮಲ ಅಧಿಕಾರಕ್ಕೇರುತ್ತದೆ ಅನ್ನುವ ವಾತಾವರಣ ಸೃಷ್ಠಿಯಾಗಿತ್ತು. ಅದೇ ವೇಳೆಗೆ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಜಗಳ ಬೀದಿಗೆ ಬಿದ್ದಿದ್ದು ಬಿಜೆಪಿ ಕಾರ್ಯಕರ್ತರಲ್ಲೇ ವಾಕರಿಕೆ ಮೂಡಿಸಿತು. ಬಳಿಕ ನಡೆದ ಬೆಳವಣಿಗೆಗಳಿಂದಾಗಿ ಜನಮಾನಸದಲ್ಲಿ ಬಿಜೆಪಿ ಮೇಲಿನ ಒಲವೂ ಕಡಿಮೆಯಾಗತೊಡಗಿತು. ಸಿದ್ಧರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆ ಫಲಿಸತೊಡಗಿತ್ತು. ಉಪಚುನಾವಣೆಗಳ ಗೆಲುವು, ಬಿಜೆಪಿ ವೋಟ್ ಬ್ಯಾಂಕಿನಲ್ಲಿ ಮೂಡಿದ ಗೊಂದಲ, ಇತರೆ ಅಭಿವೃದ್ಧಿ ಯೋಜನೆಗಳಿಂದಾಗಿ ಸಿದ್ಧರಾಮಯ್ಯ ಅವರೇ ಬೆಸ್ಟ್ ಅನ್ನುವಂತಾಗಿತ್ತು. ಪರಿಣಾಮ ಇನ್ನೇನು ಕರ್ನಾಟಕದಲ್ಲಿ ಮೋದಿ ಮೋಡಿ ನಡೆಯೋಲ್ಲ ಅನ್ನುವ ಸಂಧರ್ಭದಲ್ಲೇ ಡಿಕೆಶಿ ಮೇಲೆ ಐಟಿ ರೇಡ್ ಆಗಿದೆ. ಆದ್ರೆ, ಬಿಜೆಪಿ ಪ್ರೇರಿತ ಐಟಿ ದಾಳಿ ಎಂಬ ಅಂಶವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ಹೋರಾಡಬೇಕಿದ್ದ ಕಾಂಗ್ರೆಸ್ ಡಿಕೆಶಿಗೆ ಬಹುಪರಾಕ್ ಹೇಳುವುದರಲ್ಲಿ ತೊಡಗಿದ್ದು ಜನರಲ್ಲಿ ಹೇಸಿಗೆ ಹುಟ್ಟಿಸಿದೆ. ಆ ಮೂಲಕ ಐಟಿ ಏಟಿಗೆ ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ಖಲ್ಲಾಸ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಜನ ಎಲ್ಲೆಡೆ ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.
ಇನ್ನು ಬಿಜೆಪಿ ನಾಯಕರೂ ಸಹ ಡಿಕೆಶಿ ಐಟಿ ರೇಡ್ ಪ್ರಕರಣದ ಲಾಭ ಪಡೆಯುವಲ್ಲಿ ಎಡವಿದ್ದಾರೆ. ತಮ್ಮ ಪಕ್ಷದಲ್ಲೇ ಅನೇಕ ನಾಯಕರು ವಿವಿಧ ಆರೋಪ ಹೊತ್ತವರೇ ಮುಂಚೂಣಿಯಲ್ಲಿರೋದು ಡಿಕೆಶಿ ವಿರುದ್ಧ ಬಿಜೆಪಿ ಸೆಡ್ಡುಹೊಡೆಯದಿರಲು ಕಾರಣವಾಗಿರಬಹುದು. ದಲಿತರ ಮನೇಲಿ ಉಪಹಾರ ಕಾರ್ಯಕ್ರಮದಲ್ಲೂ ಎಡವಿ ಅಪಹಾಸ್ಯಕ್ಕೆ ಇಡಾಗಿದ್ದಾರೆ. ಅಲ್ಲದೆ ನಿನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೆ.ಎಸ್.ಈಶ್ವರಪ್ಪ ಸಕ್ರಿಯವಾಗಿಲ್ಲದೇ ಇದ್ದುದು ಬಿಜೆಪಿಯಲ್ಲಿನ್ನೂ ಭಿನ್ನಮತವಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಆದರೆ, ಇದನ್ನೆಲ್ಲಾ ಗಮನಿಸುತ್ತ ಪ್ರಾದೇಶಿಕ ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ಉತ್ತಮ ತಂತ್ರಗಾರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಈಸಲ ಜೆಡಿಎಸ್ ಅಧಿಕಾರಕ್ಕೆ ತರುವ ಛಲ ತೊಟ್ಟು ಇಳಿವಯಸ್ಸಿನಲ್ಲೂ ರಾಜ್ಯದಾದ್ಯಂತ ತಿರುಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ಸಣ್ಣಪುಟ್ಟ ಸಮುದಾಯದ ಮುಖಂಡರನ್ನೂ ಭೇಟಿ ಮಾಡಿ ಕಾಳಜಿಯಿಂದ ಮಾತುಕತೆ ನಡೆಸುತ್ತಿದ್ದಾರೆ. ಜೋಗಿ ಸಮುದಾಯದ ಯುವ ನಾಯಕ, ವಕೀಲ ಪ್ರತಾಪ ಜೋಗಿ ಎಂಬ ಕಾರ್ಯಕರ್ತನನ್ನೂ ಸಹ ಜನರ ಮದ್ಯೆ ಗುರುತಿಸಿ ಮಾತನಾಡಿಸುವ ಮಟ್ಟಕ್ಕೆ ದೇವೇಗೌಡರು ಕ್ರಿಯಾಶೀಲರಾಗಿದ್ದಾರೆಂದರೆ ಅದು ಅವರ ರಾಜಕೀಯ ಪ್ರಬುದ್ಧತೆ, ಮತ್ತು ಜನಪರ ಕಾಳಜಿಯನ್ನು ತೋರುತ್ತದೆ. ಡಿಕೆಶಿ ಐಟಿ ಪ್ರಕರಣದಲ್ಲಿ ಅನವಶ್ಯಕ ಹೇಳಿಕೆ ನೀಡದೆ ಹೆಚ್ಚು ಮೌನವಾಗಿರುವ ಮೂಲಕ ಜೆಡಿಎಸ್ ನಾಯಕರು ಪ್ರಬಲ
ಒಕ್ಕಲಿಗ ಸಮುದಾಯ ಒನ್ ವೇ ಆಗಿ ಜೆಡಿಎಸ್ ಪರ ನಿಲ್ಲುವಂತೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಆ ಮೂಲಕ ಜೆಡಿಎಸ್ ಈಸಲ ಬೆಂಗಳೂರು, ಮೈಸೂರು ಭಾಗದಲ್ಲಿ ಬಂಪರ್ ಹೊಡೆಯಲು ವೇದಿಕೆ ಸಿದ್ಧಪಡಿಸಿದೆ. ಜೆಡಿಎಸ್ ನಲ್ಲೂ ಕೆಲ ಭಿನ್ನಮತೀಯ ಶಾಸಕರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿತ್ತಾದ್ರೂ ಅದನ್ನು ಸಮರ್ಥವಾಗಿ ಎದುರಿಸುವಲ್ಲಿ ನಾಯಕರು ಸಫಲರಾದಂತಿದೆ ಎಂಬುದು ರಾಜಕೀಯ ವಿಶ್ಲೇಷಕರ ವಾದವಾಗಿದೆ.
ಮತ್ತೊಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಉತ್ತರಕರ್ನಾಟಕದತ್ತವೂ ಚಿತ್ತಹರಿಸಿದ್ದು ಸರ್ವ ಸಮುದಾಯದ ಯುವಕರನ್ನು ಸೆಳೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ. ಜನರೊಂದಿಗೆ ಬೆರೆತು ಆಪ್ತವಾಗಿ ಮಾತನಾಡುವ ಏಕೈಕ ನಾಯಕನೆನ್ನಿಸಿಕೊಂಡಿದ್ದಾರೆ. ಹೀಗಾಗಿ, ಸದ್ಯ ತೆನೆಹೊತ್ತ ಮಹಿಳೆಗೆ ರಾಜ್ಯದಲ್ಲಿ ಸುಗ್ಗಿಕಾಲ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಹೆಚ್.ಡಿ.ಕೆ ಅವರು ಪರಿಸ್ಥಿತಿಯ ಲಾಭ ಪಡೆಯಬೇಕಿದೆ ಅಷ್ಟೇ ಎಂದು ಹಿರಿಯ ಪತ್ರಕರ್ತರು ಅಭಿಪ್ರಾಯ ಪಡುತ್ತಿದ್ದಾರೆ.
ಇನ್ನು ಈ ಚುನಾವಣ ವರ್ಷದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳು ಮುಂಬರುವ ಚುನಾವಣೆಯಲ್ಲಿ ಯಾವ ಪರಿಣಾಮ ಬೀರಲಿವೆ. ಕೈ ಪಡೆ ಯಾವ ತಂತ್ರ ಹೂಡಲಿದೆ, ಕಮಲ ಅರಳಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಮತ್ತಿನ್ನೇನು ಮೋಡಿ ಮಾಡಲಿದೆ. ಗೌಡರ ತಂತ್ರಗಾರಿಕೆ ಏನೆಂಬುದನ್ನು ಕಾದು ನೋಡಬೇಕಿದೆ. ಕೊನೆಗೆ ಜನರತೀರ್ಪು ಏನಾಗಲಿದೆ. 2018ರಲ್ಲಿ ರಾಜ್ಯದ ಒಡೆಯ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
-ಸಂ