ನೀ ಹಿಂಗ ನೋಡಬ್ಯಾಡ ನನ್ನ ; ಈಶ್ವರಪ್ಪ to ಅಮಿತ್ ಶಾ
-ಮಲ್ಲಿಕಾರ್ಜುನ್ ಮುದನೂರ್
ಬಿಜೆಪಿಯ ಚಾಣಕ್ಯ ಎಂದೇ ಕರೆಸಿಕೊಳ್ಳುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ಬಿಡಾರ ಹೂಡಿರುವ ಅಮಿತ್ ಶಾ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ.
ಅಮಿತ್ ಶಾ ರಾಜ್ಯ ಪ್ರವಾಸ ಆರಂಭಿಸಿದ್ದು ಕಾಂಗ್ರೆಸ್ ನಾಯಕರಿಗೆ ಚಳಿ ಬಿಡಿಸಿದೆ. ಖುದ್ದು ಕಾಂಗ್ರೆಸ್ಸಿನ ಹಿರಿಯ ನಾಯಕ ಜನಾರ್ಧನ ಪೂಜಾರಿಯವರೇ ಸಿಎಂ ಸಿದ್ಧರಾಮಯ್ಯ ಅವರಿಗೆ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ಅಮಿತ್ ಶಾ ರಾಜ್ಯ ಪ್ರವೇಶಿಸಿದ್ದಾರೆ. ಅವರು ಹೋದಲ್ಲೆಲ್ಲ ಸಿಎಂ ಬದಲಿಸುವ ಸ್ಥಿತಿ, ಸರ್ಕಾರ ಉರುಳುವ ಸ್ಥಿತಿ ನಿರ್ಮಾಣವಾಗುತ್ತಿದೆ ಹುಷಾರ್ ಎಂದಿದ್ದಾರೆ.
ಕಾಂಗ್ರೆಸ್ಸಿನ ನಾಯಕರು ನಿನ್ನೆ ರಾಹುಲ್ ಗಾಂಧಿ ರಾಯಚೂರಿಗೆ ಆಗಮಿಸಿದ್ದಕ್ಕಿಂತ ಹೆಚ್ಚಾಗಿ ಅಮಿತ್ ಶಾ ಚಲನವಲನಗಳತ್ತ ಚಿತ್ತ ನೆಟ್ಟಿದ್ದಾರೆ. ಇದು ಕಾಂಗ್ರೆಸ್ ನಾಯಕರ ಕಥೆ ಆಗಿದ್ರೆ ಬಿಜೆಪಿ ನಾಯಕರೂ ಅಮಿತ್ ಶಾ ಖಡಕ್ ನಡೆಯಿಂದ ತರಗುಟ್ಟುತ್ತಿದ್ದಾರೆ.
ನಿನ್ನೆ ಮೀಟಿಂಗ್ ನಡೆಸಿದ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದರು. ಸಚಿವ ಡಿಕೆಶಿ ಐಟಿ ರೇಡ್ ಪ್ರಕರಣವನ್ನು ರಾಜ್ಯ ನಾಯಕರು ಎನ್ ಕ್ಯಾಶ್ ಮಾಡಿಕೊಳ್ಳಲಿಲ್ಲ. ಡಿಕೆಶಿ ರಾಜೀನಾಮೆ ಬಗ್ಗೆ ಬಿಗಿಯಾಗಿ ಹೋರಾಟ ನಡೆಸಲಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾಗಿದೆ.
ಇನ್ನು ಇಂದು ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪಿಎಗಳ ಗಲಾಟೆ ಪ್ರಕರಣವನ್ನು ಕಾಂಗ್ರೆಸ್ ಸದ್ದಿಲ್ಲದೆ ಲಾಭ ಪಡೆಯುತ್ತಿದೆ. ಮತ್ತೊಂದು ಕಡೆ ರಾಜ್ಯ ನಾಯಕರು ಸ್ಚಪ್ರತಿಷ್ಠೆಯಲ್ಲಿ ಮುಳುಗುವ ಮೂಲಕ ಪಕ್ಷಕ್ಕೆ ಹಿನ್ನೆಡೆ ಮಾಡುತ್ತಿದ್ದೀರಿ. ಇನ್ನು ಮುಂದೆ ಇದು ನಡೆಯೋದಿಲ್ಲ. ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಅಂತ ಹೇಳುತ್ತ ಕೆ.ಎಸ್.ಈಶ್ವರಪ್ಪ ಅವರತ್ತ ನೋಡಿದ್ದಾರೆ. ಅಮಿತ್ ಶಾ ಖಡಕ್ ನುಡಿಯಿಂದ ಬೆಚ್ಚಿಬಿದ್ದ ಬಿಜೆಪಿ ನಾಯಕರು ಕಣ್ಣು ಮುಚ್ಚಿ ಎದೆಗೆ ಕೈ ಒತ್ತಿಕೊಂಡಿದ್ದಾರೆನ್ನಲಾಗಿದೆ.
ಬಿಜೆಪಿ ನಾಯಕರು ಅಮಿತ್ ಶಾ ಖಡಕ್ ವಾರ್ನಿಂಗ್ ನಿಂದ ಬೆಚ್ಚಿಬಿದ್ದಿದ್ದಾರೆ. ಪ್ರವಾಸ ಮುಗಿಯುವುದರೊಳಗೆ ಯಾವ ನಾಯಕರಿಗೆ ಏನು ಕಾದಿದೆಯೋ ಎಂದು ಒಳಗೊಳಗೇ ಗುಸುಗುಸು ಮಾತನಾಡಲು ಶುರು ಮಾಡಿದ್ದಾರೆ. ಇದು ಬಿಜೆಪಿಯಲ್ಲಿ ಹೈಕಮಾಂಡ್ ಕಮಾಂಡಿಂಗ್ ಹೆಚ್ಚಾಗಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಅಂದರೆ ತಪ್ಪಲ್ಲ ಎಂಬುದು ಹಿರಿಯ ಪತ್ರಕರ್ತರ ವಾದವಾಗಿದೆ
ಅಮಿತ್ ಶಾ ಕಾಂಗ್ರೆಸ್ ಗೆ ಮಾತ್ರ ಎಚ್ಚರಿಕೆ ಗಂಟೆಯಾಗಿರದೆ ಸ್ವಪಕ್ಷದ ನಾಯಕರಿಗೂ ಚಳಿ ಬಿಡಿಸುತ್ತಿದ್ದಾರೆ. ಆ ಮೂಲಕ ಸ್ವಂತ ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವತ್ತವೂ ಅಮಿತ್ ಶಾ ದೃಷ್ಟಿ ನೆಟ್ಟಿದ್ದಾರೆ. ಮನೆಗೆದ್ದು ಮಾರುಗೆದೆಯುವ ತಂತ್ರ ಅನುಸರಿಸುತ್ತಿದ್ದಾರೆಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.