‘ವಚನ ಭ್ರಷ್ಟತೆ’ ಎಂಬ ಬ್ರಹ್ಮಾಸ್ತ್ರ ಈಗ ಬಿ.ಎಸ್.ಯಡಿಯೂರಪ್ಪಗೆ ತಿರುಗುಬಾಣ?
-ಮಲ್ಲಿಕಾರ್ಜುನ ಮುದನೂರ್
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಕೈ ಜೋಡಿಸಿ ಸರ್ಕಾರ ರಚಿಸಿತ್ತು. ಮೊದಲ ಇಪ್ಪತ್ತು ತಿಂಗಳು ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ. ಬಳಿಕ ಇಪ್ಪತ್ತು ತಿಂಗಳು ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಎಂದು ಎರಡೂ ಪಕ್ಷದ ಮುಖಂಡರು ಒಡಂಬಡಿಕೆ ಮಾಡಿ ಕೊಂಡಿದ್ದರಂತೆ. ಆದರೆ, ಇಪ್ಪತ್ತು ತಿಂಗಳು ಆಡಳಿತ ನಡೆಸಿದ ಬಳಿಕ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಬಿ.ಎಸ್.ಯಡಿಯೂರಪ್ಪಗೆ ಇಪ್ಪತ್ತು ತಿಂಗಳ ಅವಧಿ ಸಿಎಂ ಆಗಲು ಅವಕಾಶ ನೀಡಲಿಲ್ಲ.
ಒಡಂಬಡಿಕೆಯಂತೆ ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಆಗಲು ಬಿಡಲಿಲ್ಲ ಎಂಬುದನ್ನೇ 2008ರ ಚುನಾವಣ ಬ್ರಹ್ಮಾಸ್ತ್ರವನ್ನಾಗಿಸಿಕೊಂಡ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ಗೆ, ಹೆಚ್.ಡಿ.ಕುಮಾರಸ್ವಾಮಿಗೆ ವಚನ ಭ್ರಷ್ಟತೆಯ ಪಟ್ಟ ಕಟ್ಟಿದರು. ಹೋದಲ್ಲೆಲ್ಲ ವಚನ ಭ್ರಷ್ಟತೆಯ ಭಾಷಣ ಬಿಗಿದು ಜನರ ಮನ ಸೆಳೆದರು. ನಾಡಿನ ಜನ ಸಹ ವಚನ ಭ್ರಷ್ಟತೆಯ ವಿರುದ್ಧ ತಿರುಗಿ ಬಿದ್ದರು. ಬಿ.ಎಸ್.ವೈಗೆ ಭಾರೀ ಬೆಂಬಲ ವ್ಯಕ್ತಪಡಿಸಿದರು. ಪರಿಣಾಮ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು.
ರಾಜ್ಯ ಆಡಳಿತ ಆರಂಭಿಸಿದ ಮೊದಲ ದಿನಗಳಲ್ಲಿ ಜೆಡಿಎಸ್ ನವರು ಯಡಿಯೂರಪ್ಪಗೆ ಇಪ್ಪತ್ತು ತಿಂಗಳು ಅಧಿಕಾರ ನೀಡಲಿಲ್ಲ. ಈಗ ಯಡಿಯೂರಪ್ಪನ ಆಡಳಿತ ನೋಡಿದರೆ ಇನ್ನು ಇಪ್ಪತ್ತು ವರ್ಷ ಬಿ.ಎಸ್.ಯಡಿಯೂರಪ್ಪರನ್ನು ಅಲುಗಾಡಿಸಲಾಗದು ಎಂಬಷ್ಟರ ಮಟ್ಟಿಗೆ ಜನರ ಮೇಲೆ ಪರಿಣಾಮ ಬೀರಿತ್ತು. ಕಾಂಗ್ರೆಸ್ಸಿನಂಥ ಕಾಂಗ್ರೆಸ್ ಪಕ್ಷ ಕಂಗಾಲಾಗಿತ್ತು. ಜೆಡಿಎಸ್ ಪಕ್ಷವಂತೂ ನಾಶವೇ ಆಗಲಿದೆ ಎಂಬಷ್ಟರ ಮಟ್ಟಿಗೆ ಜನ ಮಾತನಾಡಲಾರಂಭಿಸಿದ್ದರು.
ಅಧಿಕಾರದ ಮದವೋ ಅಥವಾ ಆಡಳಿತ ಅನುಭವದ ಕೊರತೆಯೋ ಗೊತ್ತಿಲ್ಲ. ಬಂದಷ್ಟೇ ವೇಗದಲ್ಲಿ ಬಿಜೆಪಿಯ ಸಾಮ್ರಾಜ್ಯ ಪತನ ಶುರುವಾಯಿತು. ಮಂತ್ರಿಗಳಿಂದ ಹಿಡಿದು ಖುದ್ದು ಯಡಿಯೂರಪ್ಪ ಅವರವರೆಗೆ ಎಲ್ಲರೂ ಕೃಷ್ಣ ಜನ್ಮಸ್ಥಳ ಕಂಡರು. ಐದೇ ವರ್ಷದಲ್ಲಿ ರಾಜ್ಯದ ಜನ ಬಿಜೆಪಿಯಿಂದ ಮೂವರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ಬಳಿಕ ಕಮಲ ಪಕ್ಷ ಮೂರು ಹೋಳಾಗಿದ್ದು, 2013ರಲ್ಲಿ ಸೋತು ಸುಣ್ಣವಾಗಿದ್ದು, ಮತ್ತೆ ಒಂದಾಗಿದ್ದು ದೊಡ್ಡ ಕಥೆ. ಒಂದಾಗಿದ್ದರೂ ಒಳಗೊಳಗೇ ಇರುವ ಬೇಗುದಿ ಕಮಲವಿನ್ನೂ ಅರಳದಂತಾಗಿಸಿದೆ.
ಇಷ್ಟೆಲ್ಲದರ ಮದ್ಯೆ ನವ ಕರ್ನಾಟಕ ಪರಿವರ್ತನಾ ಯಾತ್ರೆ ಆರಂಭಿಸಿದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಇನ್ನೇನು ಚಿಗುರಿಕೊಳ್ಳುವ ಲಕ್ಷಣ ಇದೆ ಅಂದುಕೊಳ್ಳುವಷ್ಟರಲ್ಲಿ ಖುದ್ದು ಬಿ.ಎಸ್.ವೈ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಮಹದಾಯಿ ಹೋರಾಟಕ್ಕೆ ಕೈಜೋಡಿಸಿ ನೀರು ತಂದೇ ತೀರುತ್ತೇನೆ ಅನ್ನುವ ಬದಲು ದಿನದ ಗಡುವು ಘೋಷಿಸಿದರು. ಆ ಮೂಲಕ ಬೆಂಕಿಯ ಬಾಣಲೆಗೆ ಕೈ ಹಾಕಿದ ಯಡಿಯೂರಪ್ಪ ಕೊಟ್ಟ ಮಾತನು ತಪ್ಪಿದ್ದು ವಚನ ಭ್ರಷ್ಟರಾಗಿದ್ದಾರೆ.
ಮಹದಾಯಿ ಹೋರಾಟಗಾರ ವಿರೇಶ ಸಬರದಮಠ ಅವರು ಈಗ ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ವಚನ ಭ್ರಷ್ಟತೆಯ ಆರೋಪ ಹೊರಿಸಿದ್ದಾರೆ. ಮಹದಾಯಿ ಹೋರಾಟಗಾರರು ಮಾತ್ರವಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರೂ ಯಡಿಯೂರಪ್ಪ ವಿರುದ್ಧ ವಚನ ಭ್ರಷ್ಟತೆಯ ಬ್ರಹ್ಮಾಸ್ತ್ರ ಉಪಯೋಗಿಸುತ್ತಿದ್ದಾರೆ. ಹೀಗಾಗಿ, 2008ರಲ್ಲಿ ಯಡಿಯೂರಪ್ಪ ಯಾವ ವಚನ ಭ್ರಷ್ಟತೆಯ ಬ್ರಹ್ಮಾಸ್ತ್ರ ಬಳಸಿ ಅಧಿಕಾರದ ಗದ್ದುಗೆ ಏರಿದ್ದರೋ ಅದೇ ಬ್ರಹ್ಮಾಸ್ತ್ರ ಈಗ ಯಡಿಯೂರಪ್ಪ ಅವರಿಗೇ ತಿರುಗುಬಾಣವಾಗಿದೆ. ಹೀಗಾಗಿ, 2018ರ ಚುನಾವಣೆಯಲ್ಲಿ ಈ ವಚನ ಭ್ರಷ್ಟ ಬಾಣದಿಂದ ತಪ್ಪಿಸಿಕೊಳ್ಳಲು ಬಿಎಸ್ ವೈ ಮತ್ಯಾವ ಗೇಮ್ ಪ್ಲಾನ್ ಮಾಡಲಿದ್ದಾರೆ. ವಿಪಕ್ಷಗಳು ವಚನ ಭ್ರಷ್ಟತೆಯ ಬ್ರಹ್ಮಾಸ್ತ್ರವನ್ನು ಹೇಗೆ ಬಳಸಲಿವೆ ಎಂಬುನ್ನು ಕಾದು ನೋಡಬೇಕಿದೆ.